CONNECT WITH US  

ನುಡಿಸಿರಿ ಇತರ ಸಮ್ಮೇಳನಕ್ಕಿಂತ ಹೇಗೆ ಭಿನ್ನ?

ನ.18ರಿಂದ ಮೂಡಬಿದಿರೆಯಲ್ಲಿ ಆಳ್ವಾಸ್‌ ನುಡಿಸಿರಿ ನಡೆಯಲಿದೆ. ಅದಕ್ಕೆ ಸಿದ್ಧತೆ ಭರದಿಂದ ಸಾಗಿದೆ. ಕನ್ನಡದ ಸಮ್ಮೇಳನವೊಂದನ್ನು ಹೇಗೆ ನಡೆಸಬೇಕು ಎಂಬುದಕ್ಕೆ ಮಾದರಿಯೆಂಬಂತೆ ಮೋಹನ್‌ ಆಳ್ವ ಅವರು ದಶಕದಿಂದ ನುಡಿಸಿರಿಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅದರ ಹಿನ್ನೆಲೆ, ತಮ್ಮ ಅನುಭವ ಹಾಗೂ ಈ ವರ್ಷದ ಸಮ್ಮೇಳನದ ಬಗ್ಗೆ ಅವರು "ಉದಯವಾಣಿ' ಜೊತೆ ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. 

ಕನ್ನಡ ಸಾಹಿತ್ಯ ಪರಿಷತ್‌ನೊಂದಿಗೆ ಸೇರಿಕೊಂಡು ಕನ್ನಡ ಸಾಹಿತ್ಯ ಸಮ್ಮೇಳನವನ್ನು 2003ರಲ್ಲಿ ಮೂಡಬಿದಿರೆಯಲ್ಲಿ ನಡೆಸಿದವರು ತಾವು. 2004ರಲ್ಲಿ ತಮ್ಮದೇ ಬ್ಯಾನರ್‌ನಲ್ಲಿ ಆಳ್ವಾಸ್‌ ನುಡಿಸಿರಿ ಸಮ್ಮೇಳನ ಶುರು ಮಾಡಿದಿರಿ. ಕಾರಣ?

 ನೋಡಿ, ಕನ್ನಡ ಸಾಹಿತ್ಯ ಸಮ್ಮೇಳನವನ್ನು 2003ರಲ್ಲಿ ಮಾಡಿ ಮುಗಿಸಿದಾಗ ನನಗೆ ಸಾಹಿತ್ಯ ಪರಿಷತ್‌ ಎಂಬ ವ್ಯವಸ್ಥೆಯೊಳಗೆ ಬಹಳಷ್ಟು "ಅನುಭವ' ಆಯಿತು. ಒಳ್ಳೆಯ ಇಡ್ಲಿಯನ್ನು ನಾವು ಮಾಡೋದು; ಅದಕ್ಕೆ ಚಟ್ನಿ ಬರಬೇಕಾದರೆ ನಾವು ಬೆಂಗಳೂರನ್ನು ಕೇಳಬೇಕು, ನೋಡಬೇಕು. ಅದ್ಯಾಕೆ ಹಾಗೆ? ನಮಗೆ ಇಡ್ಲಿ ಮಾಡ್ಲಿಕ್ಕೆ ಗೊತ್ತುಂಟಂತೆ, ಚಟ್ನಿ ಮಾಡಿ ಬಡಿಸ್ಲಿಕ್ಕೆ ಆಗೋದಿಲ್ವಾ. ಇಷ್ಟಕ್ಕೂ ಎಲ್ಲದಕ್ಕೂ ಸಾಹಿತ್ಯ ಪರಿಷತ್ತನ್ನೇ ಏಕೆ ದೂರಬೇಕು, ಅದರತ್ತಲೇ ಏಕೆ ನೋಡಬೇಕು? ಸಮಾನ ಮನಸ್ಕರು ಜತೆಗೂಡಿ ಮಾಡಲಾಗದೆ? ಇದೊಂದು ಮೈಯಲ್ಲಿ ಆವೇಶ ಬಂದವರಂತೆ ಕೆಲಸ ಮಾಡುವುದಕ್ಕಿಂತ ಇದನ್ನೆಲ್ಲ ನಾವ್ಯಾಕೆ ಸರಿಪಡಿಸಿ ಮಾದರಿ ಸಮ್ಮೇಳನವನ್ನು ಮಾಡಿ ತೋರಿಸಬಾರದು ಎಂಬ ಅಭಿಪ್ರಾಯ ಮೂಡಿತು. ನಾವೇ ಏಕೆ ಒಳ್ಳೆಯ ರೀತಿಯಲ್ಲಿ ಮಾದರಿಯಾಗಬಲ್ಲ ಸಾಹಿತ್ಯ ಸಮ್ಮೇಳನವನ್ನು ಮಾಡಬಾರದು ಅಂತ ಅನ್ನಿಸತೊಡಗಿದ್ದು ಹಾಗೆ. ಹಾಗೆ ಯೋಚಿಸಿದ ನಾವು ಸುಮ್ಮನೆ ಕುಳಿತುಕೊಳ್ಳಲಿಲ್ಲ. ಕನ್ನಡದ ಬಗ್ಗೆ ಕಾಳಜಿ, ಆಸಕ್ತಿ ಹೊಂದಿದ ಸಮಾನ ಮನಸ್ಕರನ್ನು ಸೇರಿಸಿಕೊಂಡು ಮುಂದಿನ ವರ್ಷದಿಂದಲೇ, "ಆಳ್ವಾಸ್‌ ನುಡಿಸಿರಿ' ಎಂಬ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನವನ್ನು ಆರಂಭಿಸಿಯೇ ಬಿಟ್ಟೆವು. ಈಗ ಆಳ್ವಾಸ್‌ ನುಡಿಸಿರಿಗೆ 13ರ ಹರೆಯ. ಆರೋಗ್ಯ, ಶಿಕ್ಷಣ, ಕ್ರೀಡೆ ಮೊದಲಾದ ರಂಗಗಳಲ್ಲಿ ಖಾಸಗಿ ವಲಯದಿಂದ ಆದ, ಆಗುತ್ತಿರುವ ಬೆಳವಣಿಗೆಗಳನ್ನು ಗಮನಿಸಬೇಕು. ಏನಿದ್ದರೂ ಇದೆಲ್ಲ ವ್ಯಾಪಾರೀಕರಣ ಆಗಬಾರದು ಎಂಬ ಎಚ್ಚರಿಕೆ ಬೇಕು.

ಖಾಸಗಿ ಸಮ್ಮೇಳನ ಅಂದ್ರೆ ಅಧ್ಯಕ್ಷರು, ಉಪನ್ಯಾಸಕರ ಪಟ್ಟಿಯಲ್ಲಿ ಸಂಘಟಕರಾಗಿ ನಿಮ್ಮ ಹಸ್ತಕ್ಷೇಪ ಸಹಜವಾಗಿಯೇ ಇರಬೇಕಲ್ಲವೇ?
    ಖಂಡಿತ ಇಲ್ಲ. ಯಾವುದರಲ್ಲೂ ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಇಲ್ಲ. ನುಡಿಸಿರಿ ಒಬ್ಬರ ವಿಚಾರ ಅಲ್ಲ. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮೊದಲಾದ ಆಯಾಮಗಳಲ್ಲಿ ಕೆಲಸ ಮಾಡುತ್ತಿರುವ, ಪರಿಣತಿ ಇರುವ ಮಂದಿಯ ದೊಡ್ಡ ಗುಂಪೇ ಇದೆ. ಅವರನ್ನೆಲ್ಲ ಒಂದುಗೂಡಿಸಿ ಅವರ ಮೂಲಕ ಏನೇನು ಸಾಧ್ಯ ಇದೆ ಅದನ್ನು ಮಾಡಿಸಲು ಪ್ರಯತ್ನ ಮಾಡ್ತೇವೆಯೇ ಹೊರತು ಹಸ್ತಕ್ಷೇಪ ಎಂಬ ಮಾತೇ ಇಲ್ಲ. ಕನಿಷ್ಟ ಪಕ್ಷ 25 ಮೀಟಿಂಗ್‌ ಮಾಡ್ತೇವೆ. ಏನು ಪ್ರಧಾನ ವಿಷಯ, ಯಾರನ್ನು ಆಹ್ವಾನಿಸುವುದು ಎಂಬಿತ್ಯಾದಿ ವಿಚಾರಗಳು ಒಂದಾದ ಮೇಲೊಂದರಂತೆ ನಿಧಾನ ಆದರೆ ಸ್ಪಷ್ಟವಾದ ನಡೆಯಲ್ಲಿ ತೀರ್ಮಾನವಾಗುತ್ತ ಹೋಗುತ್ತದೆ. ಮೀಟಿಂಗ್‌ ಕೋರಂ ಇದ್ದೇ ನಡೆಯುವ ಹಾಗೆ ನೋಡಿಕೊಳೆ¤àವೆ. ಇಲ್ಲಿ ಬಹಳ ಪ್ರಜಾಪ್ರಭುತ್ವದ ಲಕ್ಷಣ ಇದೆ.

ನಿಮ್ಮ ನುಡಿಸಿರಿ ಎಡವೋ ಬಲವೋ ಅಥವಾ...?
    ನಿಮ್ಮ ಅಲ್ಲ , ನಮ್ಮ ನುಡಿಸಿರಿ ಎನ್ನಿ. ಇದು ಎಡವೂ ಅಲ್ಲ, ಬಲವೂ ಅಲ್ಲ. ನಮಗೆ ನಮ್ಮ ಮನೆಯವರು, ಶಾಲೆಯಲ್ಲಿ ಹೇಳಿದ್ದು ಎಡ ಬಲ ಅಂದರೆ ದಿಕ್ಕು, ದಿಶೆ. ನಾವು ಅರ್ಥೈಸಿಕೊಂಡದ್ದು ಹಾಗೆ. ನಾವು ಯಾವುದೇ ಗುಂಪಿನೊಂದಿಗೆ ಗುರುತಿಸಿಕೊಂಡು ಅವರ ಬಾವುಟದಡಿ ಕೆಲಸ ಮಾಡುವವರಲ್ಲ. ನಮಗೆ ಎಲ್ಲರೂ ಬೇಕು. ಪ್ರತಿವರ್ಷವೂ ಗುಂಪುಗಳನ್ನು ಪರಿಗಣಿಸದೆ ಸಮಾಜದ ಎಲ್ಲ ವರ್ಗಗಳಿಂದ ನಮ್ಮಲ್ಲಿಗೆ ಅತಿಥಿಗಳು ಬಂದಿದ್ದಾರೆ. ಹಾಗೆಂದು, ಸ್ವಲ್ಪ ಚರ್ಚೆ ಆಗಬೇಕು ಅನ್ನುವವರಿದ್ದಾರೆ; ಅದರ ಮೂಲಕ ಒಳ್ಳೆಯದು ಹೊರಬರುವಂತಾಗುತ್ತದೆ ಎನ್ನುವುದಾದರೆ ಅದಕ್ಕೂ ಸ್ವಾಗತ. ಒಟ್ಟಿನಲ್ಲಿ ನಮ್ಮದು ಕನ್ನಡ ಭಾಷೆ ಮತ್ತು ಅದಕ್ಕೆ ಸಂಬಂಧಪಟ್ಟ ಸಂಸ್ಕೃತಿಯನ್ನು ಕಟ್ಟುವ ಕೆಲಸ.

ನುಡಿಸಿರಿ ಅಂದ್ರೆ ಜಾತ್ರೆ, ವೈಭವೀಕರಣ ಅಂತ ಹೇಳಲಾಗುತ್ತಿದೆಯಲ್ಲ?
    ನುಡಿಸಿರಿ ಕೇವಲ ವಿದ್ಯಾವಂತರಿಗೆ, ಸಾಹಿತಿಗಳಿಗೆ ಅಲ್ಲ. ಅದು ಎಲ್ಲರಿಗೂ ಬೇಕಾದ, ಎಲ್ಲರನ್ನೂ ಬೆಸೆಯುವ ಸಮ್ಮೇಳನ. ಕನ್ನಡ ಭಾಷೆ, ಸಂಸ್ಕೃತಿಯ ಮೂಲಕ ಕನ್ನಡದ ಮನಸ್ಸುಗಳನ್ನು ಕಟ್ಟುವ ಕೆಲಸ. ಹಾಗಾಗಿಯೇ ಆಳ್ವಾಸ್‌ ನುಡಿಸಿರಿ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಎಂದು ಮೊದ ಮೊದಲು ಕರೆಯುತ್ತಿದ್ದರೆ ಹತ್ತು ವರ್ಷಗಳ ಬಳಿಕ ಇದು ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನವಾಗಿ ಮಾರ್ಪಾಡಾಗಿದೆ. ನಮ್ಮಲ್ಲಿ ಪುಟಾಣಿಗಳಿಂದ ತೊಡಗಿ ಯುವಜನರು, ವಯಸ್ಸಾದವರು, ಇಳಿ ವಯಸ್ಸಿನವರು ಹೀಗೆ ಎಲ್ಲ ವಯೋಮಾನದವರನ್ನು ಸೆಳೆಯುವಂಥ ಸ್ವರೂಪದ ಕಾರ್ಯಕ್ರಮಗಳನ್ನು ಸಂಯೋಜಿಸಲಾಗುತ್ತ ಬರಲಾಗಿದೆ. ಹಾಗಾಗಿಯೇ ಸಾಹಿತ್ಯದೊಂದಿಗೆ ನಾಡಿನ ಬಹುಬಗೆಯ ಸಾಂಸ್ಕೃತಿಕ ವೈಭವ ಇಲ್ಲಿ ಕಾಣಿಸಿಕೊಳ್ಳುತ್ತದೆ. ಅದು ವೇದಿಕೆಗಳಲ್ಲಿರಬಹುದು. ನಡೆದಾಡುವ ಹಾದಿ ಬದಿಯಲ್ಲಿರಬಹುದು. ಆದರೆ ನಮ್ಮ ಮೂಲ ಚೌಕಟ್ಟನ್ನು ನಾವೆಂದೂ ಮೀರುವುದಿಲ್ಲ. ನುಡಿಸಿರಿಯ ಮೂಲದಲ್ಲಿ ನಾಡುನುಡಿ ಸಂಸ್ಕೃತಿಯ ತಳಹದಿಯಲ್ಲಿ ಜನರ ಮನಸ್ಸುಗಳನ್ನು ಕಟ್ಟುವ ಉದ್ದೇಶಕ್ಕೆ ಪೂರಕವಾಗಿಯೇ ನಮ್ಮ ಕಾರ್ಯಕ್ರಮಗಳು ನಡೆಯುತ್ತವೆ. ಇಲ್ಲಿ ಸಾಹಿತ್ಯದೊಂದಿಗೆ ಚಿತ್ರ, ಸಂಗೀತ, ಕೃಷಿ, ಜಾನಪದ, ನಾಟಕ, ಯಕ್ಷಗಾನ, ಬೀದಿ ಹಾಡು, ಜಾದೂ, ಛಾಯಾಚಿತ್ರ, ವಿದ್ಯಾರ್ಥಿಸಿರಿ ಎಂಬ ವಿದ್ಯಾರ್ಥಿಗಳೇ ನಡೆಸಿಕೊಡುವ ಸಮ್ಮೇಳನ... ಹೀಗೆ ಎಲ್ಲವೂ ಕನ್ನಡ ಭಾಷೆ, ಸಂಸ್ಕೃತಿಯನ್ನು ಪುಷ್ಟೀಕರಿಸುವ ಕಲಾಪಗಳು. ಸಹಸ್ರಗಟ್ಟಲೆ ಜನ ಸೇರಿದಾಗ ವೈಭವೀಕರಣ ಸ್ವಲ್ಪ ಬೇಕೇ ಬೇಕಾಗ್ತದೆ. ಆದರೆ ಒಟ್ಟಂದ, ಸೊಬಗು, ಸೌಂದರ್ಯ ಪ್ರಜ್ಞೆ ಇರಿಸಿಕೊಂಡೇ ನುಡಿಸಿರಿಯ ವೈಭವೀಕರಣ ನಡೆಯುತ್ತ ಬಂದಿದೆ.

ನುಡಿಸಿರಿ ಸಮ್ಮೇಳನ, ಅದರಲ್ಲೂ ಸಾಂಸ್ಕೃತಿಕ ಕಲಾಪಗಳು ಹತ್ತಾರು ವೇದಿಕೆಗಳಲ್ಲಿ ನಡೆಯುತ್ತವಲ್ಲ, ಜನ ಯಾವುದನ್ನು ನೋಡಲಿ, ಯಾವುದನ್ನು ಬಿಡಲಿ ಎಂಬ ಗೊಂದಲಕ್ಕೆ ಒಳಗಾಗುತ್ತಾರಲ್ಲವೇ?
    ಎಲ್ಲರೂ ಎಲ್ಲವನ್ನೂ ನೋಡಲಾಗುವುದಿಲ್ಲ ನಿಜ. ಆದರೆ ಎಲ್ಲರಿಗೂ ಒಂದೇ ಬಗೆಯ ಆಸಕ್ತಿ ಇರ್ತದೆ ಅಂತ ಹೇಳಲಿಕ್ಕೂ ಆಗುವುದಿಲ್ಲ. ಯಾರಿಗೆ ಯಾವುದು ಇಷ್ಟವೇ ಅದನ್ನು ನೋಡಲಿ. 

ನುಡಿಸಿರಿ ಸಮ್ಮೇಳನದ ವ್ಯವಸ್ಥೆಗಳು ಇತರ ಸಮ್ಮೇಳನಗಳಿಗಿಂತ ಹೇಗೆ ಭಿನ್ನ?
    ಮುಖ್ಯವಾಗಿ ಸಮಯ ಪ್ರಜ್ಞೆ, ಶಿಸ್ತು, ವ್ಯವಸ್ಥೆಗಳು. ನಮ್ಮಲ್ಲಿ ವಸತಿ ವ್ಯವಸ್ಥೆ ಒಂದು ಸಮಸ್ಯೆ ಆಗುವುದೇ ಇಲ್ಲ. ಊಟೋಪಚಾರದಲ್ಲಿ ಎಲ್ಲೂ ಗೊಂದಲ ಇಲ್ಲ. ರಕ್ಷಣಾ ವ್ಯವಸ್ಥೆ, ಸ್ವತ್ಛತೆ, ಪರಿಶುದ್ಧ ನೀರು ಪೂರೈಕೆ, ಸ್ವಯಂಸೇವಕರು, ಪಾರ್ಕಿಂಗ್‌ ... ಹೀಗೆ ಹತ್ತಾರು ವಿಷಯಗಳಲ್ಲಿ ಆಳ್ವಾಸ್‌ ಅದರದ್ದೇ ಆದ ಛಾಪು ಒತ್ತಿದೆ. ಇದು ಇತರ ಸಮ್ಮೇಳನಗಳಿಗಿಂತ ಭಿನ್ನ ಎಂದು ಹೇಳುವುದಕ್ಕಿಂತ ವಿಶಿಷ್ಟ ಎಂದು ಬದಲಿಸಿಕೊಳ್ಳಬಹುದಾಗಿದೆ. ಇಲ್ಲಿಗೆ ಬಂದವರು ವಾಪಾಸು ಹೋಗುವಾಗ ಹತ್ತಾರು ಹೊಸ ಹೊಸ ಸಂಗತಿಗಳಿಂದ ಪ್ರಭಾವಿತರಾಗುವುದು ಖಂಡಿತ.

ಆಳ್ವಾಸ್‌ ನುಡಿಸಿರಿ, ಆಳ್ವಾಸ್‌ ವಿರಾಸತ್‌ ಒಂಥರಾ ಮೈಯಲ್ಲಿ ಬಂದವರ ಆ್ಯಕ್ಷನ್‌ಗಳಂತೆ ತೋರುವುದಿಲ್ಲವೇ?
    ನೋಡಿ, ನಮ್ಮ ನುಡಿಸಿರಿ ಇರ್ಬಹುದು, ವಿರಾಸತ್‌ ಇರ್ಬಹುದು, ಇದೆಲ್ಲ ಮೂರು ದಿನಗಳ, ವಾರದ ಆಟವಲ್ಲ. ಇಲ್ಲಿ ಆವೇಶ, ಇಳಿತ ಇಲ್ಲ. ನೀವು ನಮ್ಮ ಕ್ಯಾಂಪಸಿಗೆ ಯಾವಾಗಲಾದರೂ ಭೇಟಿ ಕೊಡಿ. ಇಲ್ಲ 365 ದಿನವೂ ನುಡಿಸಿರಿ, ವಿರಾಸತ್‌ ನಡೀತಾ ಇದೆಯೋ ಎಂಬ ಗುಮಾನಿ ಹುಟ್ಟುವಷ್ಟು ಇಲ್ಲಿ ನಿತ್ಯ ನಿರಂತರವೆಂಬಂತೆ ಕಲೆ, ಸಾಹಿತ್ಯ, ಕ್ರೀಡಾ ಚಟುವಟಿಕೆಗಳು ನಡೆಯುತ್ತ ಇರುವುದನ್ನು ಗಮನಿಸಬೇಕು.

ನುಡಿಸಿರಿ ಮಾಡಿ ನಿಮಗೇನು ಲಾಭ? ಏನು ಸುಖ?
    ಹೌದು, ಜನ ಕೇಳುವುದು ಸಹಜ. ಏಕೆಂದ್ರೆ ಏನಾದ್ರೂ ಲಾಭ ಇಲ್ಲದೆ ಆಳ್ವರು ಇಂಥದ್ದನ್ನೆಲ್ಲ ಮಾಡಲಿಕ್ಕಿಲ್ಲ ಅಂತ ಜನ ಯೋಚಿಸಿದ್ದರೆ ಅದು ತಪ್ಪಲ್ಲ. ಆಳ್ವರು ಧನಿಕರಲ್ಲ, ಸಾಲಗಾರ. ಹಾಗಿದ್ದೂ ಏಕೆ ಈ ನುಡಿಸಿರಿ, ವಿರಾಸತ್‌ ಮಾಡ್ತಾರೆ, ಹೇಗೆ ಮಾಡ್ತಾರೆ? ಎಂಬ ಪ್ರಶ್ನೆಗಳು ಮೂಡುವುದೂ ಸಹಜ. ನಿಜಕ್ಕಾದರೆ ಅನುಭವ ನೀಡುವ ಸುಖದ ಮುಂದೆ ಯಾವುದೂ ಬರುವುದಿಲ್ಲ. ತುಂಬಾ ತಿಳಿವಳಿಕೆ, ಪರಿಚಯ, ಸಂಬಂಧ, ಪ್ರೀತಿ ಹೀಗೆ ಹಲವಾರು ಅಂಶಗಳು ನುಡಿಸಿರಿ ಮೂಲಕ ನಮಗೆ, ಬಂದವರಿಗೆ ಪ್ರಾಪ್ತಿಯಾಗುವುದನ್ನು ನಾನು ಸ್ವತಃ ನೋಡಿದ್ದೇನೆ, ಅನುಭವಿಸಿದ್ದೇನೆ.

ಕಲಾ ಪ್ರಕಾರಗಳನ್ನು ದೊಡ್ಡ ಸಂಖ್ಯೆಯ ಪ್ರೇಕ್ಷಕರಿಗೆ ತೋರಿಸುವಾಗ ನೀವು ಮಾಡಿರುವ ಮಾರ್ಪಾಡುಗಳು ಅವುಗಳ ಮೂಲಕ್ಕೆ ಪೆಟ್ಟು ಕೊಡುವುದಿಲ್ಲವೇ?
    ದೊಡ್ಡ ಸಮೂಹದ ಪ್ರದರ್ಶನಗಳಿಗೆ ದೊಡ್ಡ ವೇದಿಕೆಯೇ ಬೇಕು. ವೈಯಕ್ತಿಕ ಪ್ರಸ್ತುತಿಗಳಿಗೆ ಸಣ್ಣ ವೇದಿಕೆ ಸಾಕು. ಇನ್ನು ಬೀದಿ ಬದಿಯ ಹಾಡುಗಳಿಗೆ, ಜಾದೂಗಾರಿಕೆಗೆ ಅಂಥ ವೇದಿಕೆಯೂ ಬೇಕಾಗಿಲ್ಲ. ಜನರ ನಡುವೆ ಮಾಡಿ ತೋರಿಸಬಲ್ಲ ಕಾರ್ಯಕ್ರಮಗಳಿವು. ಯಾವುದಕ್ಕೆ ಎಲ್ಲಿ ಅವಕಾಶ ಕಲ್ಪಿಸಬೇಕೋ ಅಲ್ಲಿ ನಾವು ಅವುಗಳನ್ನು ಸಂಯೋಜಿಸುತ್ತೇವೆ.

ನುಡಿಸಿರಿ ಸಮ್ಮೇಳನಕ್ಕೆ ಮಾತ್ರ ನಿಮ್ಮ ಕನ್ನಡ ಪ್ರೇಮ ಸೀಮಿತವೇ?
    ಕಾಲಕ್ಕೆ ಸರಿಯಾಗಿ ಸ್ಪಂದಿಸದಿದ್ದರೆ ಯಾವ ಭಾಷೆಯೂ ಉಳಿಯುವುದಿಲ್ಲ; ಭಾಷೆಗೆ ಸಂಬಂಧಿಸಿದಂತೆ ಸಂಸ್ಕೃತಿಯೂ ಉಳಿಯುವುದಿಲ್ಲ. ಕನ್ನಡ ಭಾಷೆ ಎಂದು ಸೋಲಬಾರದು. ಅದು ಕಾಲ ಕಾಲಕ್ಕೆ ಅಪ್‌ಗೆÅàಡ್‌ ಆಗಬೇಕು, ಜಾಗತಿಕವಾಗಿ ಬೆಳೆಯಬೇಕು. ಇದನ್ನು ಮಾದರಿಯಾಗಿ ತೋರಿಸಲು ನಾವು ಕೇವಲ ಸಮ್ಮೇಳನವನ್ನು ಸಂಭ್ರಮದಿಂದ ಮಾಡುತ್ತಿಲ್ಲ. ಕನ್ನಡ ಶಾಲೆಗಳು ಸೋಲುತ್ತಿರುವ ಇಂದಿನ ವಾತಾವರಣದಲ್ಲಿ ಶೈಕ್ಷಣಿಕವಾಗಿ ಮಾದರಿಯಾಗಬಲ್ಲ ಶಾಲೆಯನ್ನು ತೆರೆದಿದ್ದೇವೆ. ನೀವು ನಂಬಲೇ ಬೇಕು- ನಮ್ಮ ಕನ್ನಡ ಮಾಧ್ಯಮ ಶಾಲಾ ಪ್ರವೇಶ ಪರೀಕ್ಷೆಗೆ ರಾಜ್ಯದಿಂದ 6,000 ಅರ್ಜಿಗಳು ಬರುತ್ತಿವೆ. ಇನ್ನು ನಮ್ಮಲ್ಲಿ ಸೀಟಿಗಾಗಿ ಬರುವ, ಪ್ರಭಾವ ಬೀರುವ ಕರೆಗಳಿಗೆ ಲೆಕ್ಕವಿಲ್ಲ. ನಮ್ಮಲ್ಲಿ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮ ಎಂಬ ಬೇಧವಿಲ್ಲದೆ ಮಕ್ಕಳು ಪರಸ್ಪರ ಬೆರೆಯುವಂಥ ವಾತಾವರಣವಿದೆ.
    ಆಂಗ್ಲ ಮಾಧ್ಯಮ ಎಂಬುದು ತರಗತಿಗೆ ಮಾತ್ರ; ಉಳಿದಂತೆ ಎರಡೂ ಕಡೆಯವರ ಬೌದ್ಧಿಕ ಶಕ್ತಿಯನ್ನು ಹೆಚ್ಚಿಸುವ, ಮನಸ್ಸನ್ನು ಕಟ್ಟುವ ಕೆಲಸ ನಡೆಯುವುದೆಲ್ಲ ಈ ಕನ್ನಡದ ನೆಲ, ನೆಲೆಗಳಲ್ಲಿ.

ನುಡಿಸಿರಿ ನಡೆಯುತ್ತಿರೋ ಮೂಡಬಿದಿರೆ ಎಂಬ ಪುಟ್ಟ ಊರಿನಲ್ಲೇನು ಬದಲಾವಣೆ ಆಗಿದೆ?
    ಮೂಡಬಿದಿರೆಯವರು ಹಿಂದಿನಿಂದಲೂ ಸಾಹಿತ್ಯ, ಸಂಸ್ಕೃತಿ ವಿಚಾರಗಳಲ್ಲಿ ತೆರೆದ ಮನಸ್ಸಿನವರು, ಪ್ರೋತ್ಸಾಹಕರಾಗಿದ್ದವರು. ಈ ಮನೋಭಾವ ಇನ್ನಷ್ಟು ಸು#ಟವಾಗಿ ಅರಳಿಕೊಳ್ಳುತ್ತಿದೆ. ಎಲ್ಲೆಂದಲೋ ಬರುವವರನ್ನು ಊರವರು ಸ್ವಾಗತಿಸುತ್ತಿದ್ದಾರೆ. ಒಂದಲ್ಲ ಒಂದು ಬಗೆಯಲ್ಲಿ ಜನ ನಮ್ಮೊಂದಿಗೆ ಕೈ ಜೋಡಿಸುತ್ತ ಬಂದಿದ್ದಾರೆ. ಈ ಊರಿನ ಮಂದಿಗೆ ತಾವು ಊರಿನ ಪ್ರಗತಿಯ ಪಾಲುದಾರರು ಎಂಬ ಖುಷಿ ಇದೆ.

ಈ ಬಾರಿಯ ನುಡಿಸಿರಿಯಲ್ಲಿ ಏನೇನಿವೆ?
    ಎಂದಿನಂತೆ ಪ್ರಧಾನ ವೇದಿಕೆಯ ಸಾಹಿತ್ಯಕ ಕಾರ್ಯಕ್ರಮಗಳು ನಡೆಯುತ್ತವೆ. ನ. 17ರಿಂದ ನಾಲ್ಕು ದಿನ ಆಳ್ವಾಸ್‌ ಸಿನಿ ಸಿರಿ, ಕೃಷಿ ಸಿರಿ, 17ರಂದು ವಿದ್ಯಾರ್ಥಿ ಸಿರಿ ಅಲ್ಲದೆ, ನಾಟಕೋತ್ಸವ, ಯಕ್ಷಗಾನೋತ್ಸವ, ಛಾಯಾಚಿತ್ರ ಪ್ರದರ್ಶನ, ಮಿ| ಆಳ್ವಾಸ್‌ ನುಡಿಸಿರಿ, ಆಳ್ವಾಸ್‌ ಕುಮಾರ-ಕುವರ- ಕೇಸರಿ ಪ್ರಶಸ್ತಿಗಳಿಗಾಗಿ ಕುಸ್ತಿ, ಮೀನ್ಮನೆ, ಸಾಕುಪ್ರಾಣಿಗಳ ಪ್ರದರ್ಶನ, ಎಂದಿನಂತೆ ಬೀದಿ ಬದಿಯ ಹಾಡು, ಜಾದೂ ಎಲ್ಲವೂ ಇವೆ. ರತ್ನಾಕರ ವರ್ಣಿ ವೇದಿಕೆ, ಕೆ.ವಿ. ಸುಬ್ಬಣ್ಣ ಬಯಲು ರಂಗಮಂದಿರ, ಸಿದ್ದಕಟ್ಟೆ ವಿಶ್ವನಾಥ ಶೆಟ್ಟಿ ವೇದಿಕೆ, ಡಾ. ಶಿವರಾಮ ಕಾರಂತ ವೇದಿಕೆ, ಮಿಜಾರು ಅಣ್ಣಪ್ಪ ವೇದಿಕೆ, ಬೋಳ ಚಿತ್ತರಂಜನದಾಸ್‌ ಶೆಟ್ಟಿ ವೇದಿಕೆ, ಸುಭಾಶ್ಚಂದ್ರ ಪಡಿವಾಳ್‌ ವೇದಿಕೆ- ಡಾ| ವಿ.ಎಸ್‌. ಆಚಾರ್ಯ ಸಭಾಭವನ, ಕು.ಶಿ. ಹರಿದಾಸ ಭಟ್ಟ ವೇದಿಕೆ, ಸಿದ್ದಕಟ್ಟೆ ಚೆನ್ನಪ್ಪ ಶೆಟ್ಟಿ ವೇದಿಕೆ ಇವುಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತವೆ.

ಡಾ| ಎಂ. ಮೋಹನ ಆಳ್ವ
ಅಧ್ಯಕ್ಷರು, ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆ

ಸಂದರ್ಶನ : ಧನಂಜಯ ಮೂಡಬಿದಿರೆ


Trending videos

Back to Top