CONNECT WITH US  

ಪಕ್ಷವನ್ನು ಬಲಪಡಿಸುವತ್ತ ಪೂರ್ಣ ಗಮನ? ಮಾಯಾವತಿಯ ಹತಾಶ ನಡೆ

ಮಾಯಾವತಿಗೆ ಈಗ ಬಿಜೆಪಿಯೊಂದೇ ಎದುರಾಳಿಯಲ್ಲ. ಹೊಸ ತಲೆಮಾರಿನ ದಲಿತ ನಾಯಕರು ಹೊಸ ರೀತಿಯ ರಾಜಕೀಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. 

ಬಿಎಸ್‌ಪಿಯ ನಾಯಕಿ ಮಾಯಾವತಿ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ನಾಟಕೀಯ ಬೆಳವಣಿಗೆ ಅವರ ಹತಾಶ ನಡೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಉತ್ತರ ಪ್ರದೇಶದ ಸಹರಣ್‌ಪುರದಲ್ಲಿ ದಲಿತರ ಮೇಲಾಗಿರುವ ದೌರ್ಜನ್ಯದ ಕುರಿತು ಮಾತನಾಡಲು ಸಾಕಷ್ಟು ಸಮಯಾವಕಾಶ ನೀಡಿಲ್ಲ ಎಂದು ಆರೋಪಿಸಿ ಮಾಯಾವತಿ ದಿಢೀರ್‌ ರಾಜೀನಾಮೆ ನೀಡಿದ್ದಾರೆ. ಆದರೆ ಇದು ದಲಿತರ ಮೇಲಿನ ಕಾಳಜಿಯಿಂದ ಕೈಗೊಂಡಿರುವ ತೀರ್ಮಾನ ಅಲ್ಲ ಎನ್ನಲು ಹಲವು ಕಾರಣಗಳಿವೆ. ಮುಂಬರುವ ಏಪ್ರಿಲ್‌ಗೆ ಮಾಯಾವತಿಯ ರಾಜ್ಯಸಭಾ ಸದಸ್ಯತನದ ಅವಧಿ ಮುಕ್ತಾಯವಾಗುತ್ತದೆ. ಪ್ರಸ್ತುತ ಉತ್ತರ ಪ್ರದೇಶ ವಿಧಾಸಭೆಯಲ್ಲಿ ಬಿಎಸ್‌ಪಿ ಬರೀ 19 ಶಾಸಕರನ್ನು ಹೊಂದಿದೆ. ಇಷ್ಟು ಶಾಸಕ ಬಲದಲ್ಲಿ ಇನ್ನೊಂದು ಅವಧಿಗೆ ಆರಿಸಿ ಬರಲು ಸಾಧ್ಯವಿಲ್ಲ. ಕಾಂಗ್ರೆಸ್‌ ಮತ್ತು ಸಮಾಜವಾದಿ ಪಾರ್ಟಿಯ ಬೆಂಬಲ ಕೋರುವುದು ಅನಿವಾರ್ಯ  ವಾಗುತ್ತದೆ. ಒಂದು ಕಾಲದಲ್ಲಿ ಬದ್ಧ ವಿರೋಧಿಗಳಾಗಿದ್ದವರ ಬಳಿಗೆ ಹೋಗಿ ಬೆಂಬಲದ ಭಿಕ್ಷೆ ಬೇಡುವುದಕ್ಕಿಂತ ಅವಧಿಗೆ ಮೊದಲೇ ರಾಜೀನಾಮೆ ನೀಡಿ ಪಕ್ಷವನ್ನು ಬಲಪಡಿಸುವತ್ತ ಪೂರ್ಣ ಗಮನ ಹರಿಸುವುದು ಮಾಯಾವತಿ ಉದ್ದೇಶವಾಗಿರಬಹುದು. ಇನ್ನೊಂದು ಕಾರಣ ಇದಕ್ಕಿಂತಲೂ ಹೆಚ್ಚು ಮುಖ್ಯವಾಗಿದೆ. ದಲಿತರ ಉದ್ಧಾರಕಿ ಎಂಬ ಇಮೇಜ್‌ ಮಾಯಾವತಿಯಿಂದ ದೂರವಾಗುತ್ತಿದೆ. ಬಿಜೆಪಿ ದಲಿತ ಮತಬ್ಯಾಂಕ್‌ಗೆ ಲಗ್ಗೆ ಹಾಕಿ ಭಾರೀ ಪ್ರಮಾಣದಲ್ಲಿ ಮತಗಳನ್ನು ಸೆಳೆದಿರುವುದು 2014ರ ಲೋಕಸಭಾ ಚುನಾವಣೆ ಮತ್ತು 2017ರ ವಿಧಾನಸಭೆಯ ಫ‌ಲಿತಾಂಶದಿಂದ ನಿಚ್ಚಳವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಾಯಾವತಿ ಪಕ್ಷದ್ದು ಶೂನ್ಯ ಸಾಧನೆಯಾದರೆ ವಿಧಾನಸಭೆ ಚುನಾವಣೆಯಲ್ಲಿ 403 ಸ್ಥಾನಗಳ ಪೈಕಿ ದಕ್ಕಿದ್ದು ಬರೀ 19ಸ್ಥಾನ.  

ರಾಷ್ಟ್ರಪತಿ ಚುನಾವಣೆಯಲ್ಲಿ ಉತ್ತರ ಪ್ರದೇಶದವರೇ ಆಗಿರುವ ದಲಿತ ಮುಖಂಡ ರಾಮ್‌ನಾಥ್‌ ಕೋವಿಂದ್‌ ಅವರನ್ನು ಕಣಕ್ಕಿಳಿಸುವ ಮೂಲಕ ಬಿಜೆಪಿ ದಲಿತ ಮತಬ್ಯಾಂಕ್‌ನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ವ್ಯವಸ್ಥಿತ ಯೋಜನೆಯನ್ನು ರೂಪಿಸಿದೆ. ಈ ಪರಿಸ್ಥಿತಿಯಲ್ಲಿ ಮತ್ತೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸುವುದೊಂದೇ ಉಳಿದಿರುವ ದಾರಿ ಎಂದು ಮಾಯಾವತಿ ದಿಲ್ಲಿಯಿಂದ ನಿರ್ಗಮಿಸಲು ಅವಕಾಶ ಎದುರು ನೋಡುತ್ತಿದ್ದರು. ಮುಂಗಾರು ಅಧಿವೇಶನ ಈ ಅವಕಾಶ ಒದಗಿಸಿಕೊಟ್ಟಿದೆ ಅಷ್ಟೆ. ಮಾಯಾವತಿಗೆ ಈಗ ಬಿಜೆಪಿಯೊಂದೇ ಎದುರಾಳಿಯಲ್ಲ. ಹೊಸ ತಲೆಮಾರಿನ ದಲಿತ ನಾಯಕರು ಮಾಯಾವತಿಯ ಕಾರ್ಯಶೈಲಿಯಿಂದ ಬೇಸತ್ತು ಹೊಸ ರೀತಿಯ ರಾಜಕೀಯ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದಾರೆ. ಈ ಸಂದರ್ಭದಲ್ಲಿ ಹುಟ್ಟಿಕೊಂಡಿರುವುದೇ ಭೀಮ ಸೇನೆ ಎಂಬ ಸಂಘಟನೆ. ಹಾಗೇ ನೋಡಿದರೆ ಸಹರಣ್‌ಪುರ ಗಲಭೆಯ ಪ್ರತಿಭಟನೆಯಲ್ಲಿ ಬಿಎಸ್‌ಪಿಗಿಂತಲೂ ಭೀಮ ಸೇನೆಯ ಅಬ್ಬರವೇ ಜೋರಾಗಿತ್ತು. ಇದರ ನಾಯಕ ಚಂದ್ರಶೇಖರ್‌ ದಲಿತರ ಕಣ್ಮಣಿಯಾಗಿದ್ದಾರೆ. ಹೀಗೆ ದಲಿತ ಸಮುದಾಯದಲ್ಲೇ ಮಾಯಾವತಿ ಅಪ್ರಸ್ತುತರಾಗುತ್ತಿದ್ದಾರೆ. ಉತ್ತರಪ್ರದೇಶ ಮಾತ್ರವಲ್ಲದೆ ಮಧ್ಯಪ್ರದೇಶ, ರಾಜಸ್ಥಾನ ಮತ್ತಿತರ ರಾಜ್ಯಗಳಲ್ಲೂ ಬಿಎಸ್‌ಪಿ ದುರ್ಬಲವಾಗುತ್ತಿದೆ. ಪಕ್ಷದ ಹಲವು ಪ್ರಮುಖ ನಾಯಕರನ್ನು ಬಿಜೆಪಿ ಸೆಳೆದುಕೊಂಡಿದೆ. ಇದೇ ಪರಿಸ್ಥಿತಿ  ಮುಂದುವರಿದರೆ 2019ರಲ್ಲೂ 2014ರ ಫ‌ಲಿತಾಂಶವೇ ಪುನರಾವರ್ತನೆಯಾಗುತ್ತದೆಂದು ಮಾಯಾವತಿ ಮತ್ತೆ ಪಕ್ಷ ಸಂಘಟನೆ ಮಾಡಲು ಮುಂದಾಗಿದ್ದಾರೆ.  ಆದರೆ, ದಲಿತ ಸಮುದಾಯಕ್ಕೆ ರಾಜಕೀಯ ಅಸ್ಮಿತೆಯನ್ನು ತಂದುಕೊಟ್ಟಿರುವುದು ಮಾಯಾವತಿ ಮತ್ತವರ ರಾಜಕೀಯ ಗುರು ಕಾನ್ಶಿರಾಮ್‌ ಎನ್ನುವುದನ್ನು ಒಪ್ಪಲೇಬೇಕು. ದಲಿತರಿಗೆ ರಾಜಕೀಯದ ಸಾಮರ್ಥ್ಯ ಮತ್ತು ಸಾಧ್ಯತೆಗಳನ್ನು ಮನವರಿಕೆ ಮಾಡಿಕೊಟ್ಟವರು ಮಾಯಾವತಿ. ರಾಷ್ಟ್ರಮಟ್ಟದಲ್ಲಿ ದಲಿತ ಮತಬ್ಯಾಂಕನ್ನು ನಿರ್ಣಾಯಕ ಶಕ್ತಿಯಾಗಿ ರೂಪಿಸಿದ ಹಿರಿಮೆ ಮಾಯಾವತಿಗೆ ಸಲ್ಲಬೇಕು. ಆದರೆ ಅಧಿಕಾರದ ಅಮಲಿನಲ್ಲಿ ಅವರು ಮಾಡಿದ ಎಡವಟ್ಟುಗಳು ಮಾತ್ರ ಪಕ್ಷದ ಅಧಃ ಪತನಕ್ಕೆ ಕಾರಣವಾಯಿತು. ಭ್ರಷ್ಟಾಚಾರದ ಆರೋಪ, ಅಧಿಕಾರ ದಲ್ಲಿರುವಾಗ ತನ್ನದೇ ಪ್ರತಿಮೆಗಳನ್ನು ಸ್ಥಾಪಿಸುವಂತಹ ಅವಿವೇಕಿ ನಡೆ, ರಾಷ್ಟ್ರ ರಾಜಕಾರಣದಲ್ಲಿ ಮಿಂಚುವ ಹಂಬಲದಿಂದ ಸ್ಥಳೀಯವಾಗಿ ಪಕ್ಷವನ್ನು ನಿರ್ಲಕ್ಷಿಸಿದ್ದೆಲ್ಲ ಮಾಯಾವತಿಗೆ ಮುಳುವಾಯಿತು. ಈ ಎಲ್ಲ ಕಾರಣಗಳಿಂದಾಗಿ ರಾಜಕೀಯ ಕ್ಷಿತಿಜದಲ್ಲಿ ಮತ್ತೆ ಬೆಳಗಬೇಕಾದರೆ ಏನಾದರೊಂದು ನಾಟಕೀಯ ಸನ್ನಿವೇಶ ಸೃಷ್ಟಿಯಾಗಬೇಕು ಎಂದು ಬಿಎಸ್‌ಪಿ ಅದರ ರಾಜಕೀಯ ಮುತ್ಸದ್ದಿಗಳು ಚಿಂತಿಸಿದ್ದಾರೆ. ಇದರ ಪರಿಣಾಮವೇ ಮಾಯಾವತಿ ರಾಜೀನಾಮೆ ಪ್ರಹಸನ. ಈ ಮೂಲಕ ಅವರು ಎದುರಾಳಿಗೊಂದು ಎಚ್ಚರಿಕೆಯನ್ನು ರವಾನಿಸಿದ್ದಾರೆ. ಮುಂದಿನ ತಿಂಗಳಲ್ಲಿ ಇನ್ನಷ್ಟು ಆಕ್ರಮಣಶೀಲ ಮಾಯಾವತಿಯನ್ನು ಕಾಣಬಹುದು. ದಲಿತರ ಕುರಿತಾದ ವಿಚಾರಗಳು ಮುನ್ನೆಲೆಗೆ ಬರಬಹುದು.


Trending videos

Back to Top