CONNECT WITH US  

ನಿಷೇಧಾಜ್ಞೆ ಕರಿನೆರಳಲ್ಲೇ ಮಲ್ಲಯ್ಯನ ಜಾತ್ರೆ

ದೇವಸ್ಥಾನದ ಸೀಮೆಯ ವಿಚಾರದಲ್ಲಿ ವಿವಾದ, „ ನಿಷೇಧಾಜ್ಞೆ ಭೀತಿಯಲ್ಲಿ ಭಕ್ತರು

ಬೀಳಗಿ: ವಾರಿ ಮಲ್ಲಯ್ಯ ದೇವಸ್ಥಾನದ ಪಾರ್ಶ್ವ ನೋಟ.

ಬೀಳಗಿ: ದಶಕಗಳಿಗೂ ಹೆಚ್ಚು ಕಾಲ ತಾಲೂಕಿನ ತುಮ್ಮರಮಟ್ಟಿ ಮತ್ತು ತೋಳಮಟ್ಟಿ ಗ್ರಾಮಗಳ ಮಧ್ಯೆ ವಿವಾದದಲ್ಲಿ ಸಿಲುಕಿಕೊಂಡು ನಲುಗುತ್ತಿರುವ ತಾಲೂಕಿನ ಆರಾಧ್ಯ ದೈವ ವಾರಿ ಮಲ್ಲಯ್ಯನ ಜಾತ್ರೆ ಈ ಬಾರಿಯೂ ಪ್ರತಿ ವರ್ಷದಂತೆ ನಿಷೇಧಾಜ್ಞೆ ಕರಿನೆರಳಲ್ಲಿಯೇ ನಡೆಯುತ್ತಿದ್ದು, ಭಕ್ತ ಸಮೂಹ ಭಯದ ವಾತಾವರಣದಲ್ಲಿಯೇ ಜಾತ್ರೋತ್ಸವದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯ.

ಭೀತಿಯಲ್ಲಿಯೇ ದರ್ಶನ: ಸುಂದರ ಪ್ರಕೃತಿ ಮಡಿಲಲ್ಲಿರುವ ವಾರಿ ಮಲ್ಲಯ್ಯನ ಜಾತ್ರೆ ಸೆ. 3ರಂದು ನೆರವೇರಲಿದೆ. ದೇವಸ್ಥಾನದ ಹಕ್ಕು ಪ್ರತಿಪಾದಿಸುವ ವಿಷಯದಲ್ಲಿ ತಾಲೂಕಿನ ತೋಳಮಟ್ಟಿ ಮತ್ತು ತುಮ್ಮರಮಟ್ಟಿ ಗ್ರಾಮಗಳ ಮಧ್ಯೆ ವಿವಾದ ಉದ್ಭವಿಸಿ ದಶಕಗಳ ಕಾಲವೇ ದಾಟಿದೆ. ಆದರೆ ದೇವಸ್ಥಾನ ಯಾವ ಗ್ರಾಮಕ್ಕೆ ಸೇರಿದ್ದು ಎನ್ನುವ ವಿವಾದ ಇದುವರೆಗೂ ಇತ್ಯರ್ಥವಾಗದೆ ಇರುವ ಕಾರಣ, ಪ್ರತಿ ವರ್ಷವೂ ವಾರಿ ಮಲ್ಲಯ್ಯನ ಜಾತ್ರೆ ನಿಷೇಧಾಜ್ಞೆಯ ಭೀತಿಯಲ್ಲಿಯೇ ನಡೆಯುವಂತಾಗಿದೆ. ಜಾತ್ರೆಯ ಸಂದರ್ಭ ಹಲವು ಬಾರಿ ಎರಡೂ ಗ್ರಾಮಸ್ಥರ ಮಧ್ಯೆ ಗಲಾಟೆ ಏರ್ಪಟ್ಟಿರುವ ಪ್ರಸಂಗವೂ ನಡೆದಿದೆ. ಜಾತ್ರೆಗೆ ಆಗಮಿಸುವ ಅಸಂಖ್ಯಾತ ಭಕ್ತರು ಯಾವಾಗ ಏನು ಗಲಭೆಯಾಗುತ್ತದೆಯೋ ಎನ್ನುವ ಭೀತಿಯಲ್ಲಿಯೇ ಮಲ್ಲಯ್ಯನ ಮುಖ ದರುಶನ ಮಾಡುವಂತಾಗಿದೆ.

ತಣ್ಣಗಾಗದ ವಿವಾದ: ತಾಲೂಕಿನ ತೋಳಮಟ್ಟಿ ಹಾಗೂ ತುಮ್ಮರಮಟ್ಟಿ ಈ ಎರಡು ಗ್ರಾಮಗಳ ಸರಹದ್ದಿನಲ್ಲಿ ವಾರಿ ಮಲ್ಲಯ್ಯನ ದೇವಸ್ಥಾನವಿದೆ. ಆ ಕಾರಣಕ್ಕಾಗಿ ದಶಕಗಳಿಗೂ ಹೆಚ್ಚು ಕಾಲ ದೇವಸ್ಥಾನದ ಸೀಮೆಯ ವಿಚಾರವಾಗಿ ಉಭಯ ಗ್ರಾಮಸ್ಥರಲ್ಲಿ ಬಲವಾದ ವಿವಾದ ಹುಟ್ಟಿಕೊಂಡಿದೆ.

ದೇವಸ್ಥಾನದ ಹಕ್ಕು ಪ್ರತಿಪಾದನೆಗಾಗಿ ಉಭಯ ಗ್ರಾಮಗಳ ನಡುವೆ ಹುಟ್ಟಿಕೊಂಡ ವಿವಾದ ಇದುವರೆಗೂ ತಣ್ಣಗಾಗಿಲ್ಲ. ಕಾರಣ, ಭಕ್ತ ಸಮೂಹದ ಆತಂಕಕ್ಕೆ ಕಾರಣವಾಗಿದೆ. ಪ್ರತಿ ವರ್ಷ ನಡೆಯುವ ಜಾತ್ರೆಗೂ ಮುನ್ನ ಸುವ್ಯವಸ್ಥೆ ಉದ್ದೇಶದಿಂದ ತಾಲೂಕು ಆಡಳಿತ ಅಧಿಕಾರಿಗಳು ಉಭಯ ಗ್ರಾಮಸ್ಥರ ಶಾಂತಿ ಸಭೆ ಕರೆದು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಆದರೆ ಪ್ರತಿಫಲ ಮಾತ್ರ ಶೂನ್ಯ. ಇದರಿಂದ ಪ್ರತಿ ವರ್ಷ ಜಾತ್ರೆ ನಿಷೇಧಾಜ್ಞೆ ನೆರಳಿನಲ್ಲಿಯೇ ನಡೆಯುವಂತಾಗಿದೆ.

ಜಾತ್ಯತೀತ, ಧರ್ಮಾತೀತ ಹಾಗೂ ಸೀಮಾತೀತವಾಗಿ ತನ್ನ ಆಲಯಕ್ಕೆ ಬರುವ ಎಲ್ಲ ಭಕ್ತರಿಗೆ ದರ್ಶನ ಭಾಗ್ಯ ನೀಡುತ್ತ ಕುಳಿತಿರುವ ಶಾಂತಮೂರ್ತಿ ಮಲ್ಲಯ್ಯನ ಭಕ್ತರಿಗೆ ಮಾತ್ರ ನಿಷೇಧಾಜ್ಞೆಯಿಂದ ಕಿರಿ ಕಿರಿ ಉಂಟಾಗಿದೆ. ವಾರಿ ಮಲ್ಲಯ್ಯ ಯಾವ ಊರಿನವನಾದರೂ ಆಗಲಿ. ಸಡಗರ ಸಂಭ್ರಮದಿಂದ ಜಾತ್ರೆಯಲ್ಲಿ ಪಾಲ್ಗೊಳ್ಳುವಂತ ಮುಕ್ತ ವಾತಾವರಣ ನಿರ್ಮಾಣವಾಗಲಿ ಎನ್ನುವುದು ನೂರಾರು ಭಕ್ತರ ಬಲವಾದ ಆಶಯವಾಗಿದೆ.

ನಿಷೇಧಾಜ್ಞೆ ಜಾರಿ
ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆ. 3ರಂದು ಸಿಆರ್‌ಪಿಸಿ ಕಲಂ 144 ರ ಪ್ರಕಾರ ದೇವಸ್ಥಾನದ ಪರೀದಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಭಕ್ತರು ಸಹಕರಿಸಬೇಕು.
. ಉದಯ ಕುಂಬಾರ,
ತಹಶೀಲ್ದಾರ್‌ ಬೀಳಗಿ

ರವೀಂದ್ರ ಕಣವಿ


Trending videos

Back to Top