CONNECT WITH US  

"ರವಿ ಸರ್‌ ನನ್ನ ಗಾಡ್‌ಫಾದರ್‌': ಅಪೂರ್ವ ಉಭಯ ಕುಶಲೋಪರಿ

ರವಿಚಂದ್ರನ್‌ರ ಹೊಸ ಸಿನಿಮಾ "ಅಪೂರ್ವ' ಶುರುವಾದಾಗ ನಾಯಕಿ ಯಾರು ಅನ್ನೋ ಕುತೂಹಲ ಎಲ್ಲರಿಗಿತ್ತು. 61ರ ಮುದುಕ ಮತ್ತು 19ರ ಹುಡುಗಿ ಅಂದಾಗ ಆ ಕುತೂಹಲ ಇನ್ನೂ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ ರವಿಚಂದ್ರನ್‌ ಅವರು ಸಿನಿಮಾ ಬಿಡುಗಡೆಗೆ ಮುನ್ನ ನಾಯಕಿಯನ್ನು ಪರಿಚಯ ಮಾಡಿಸಲ್ಲ ಎಂದಿದ್ದರು. ಈಗ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ "ಅಪೂರ್ವ' ಮಾತಿಗೆ ಸಿಕ್ಕರು. ರವಿಚಂದ್ರನ್‌ ಅವರಿಗೆ ಅಪೂರ್ವ ಎಂದೇ ನಾಮಕರಣ ಮಾಡಿದ್ದಾರೆ. ಹಾಗಾಗಿ ಹಳೆಯ ಹೆಸರು ಕೇಳುವಂತಿಲ್ಲ. ಇಂತಿ ನಿಮ್ಮ ಅಪೂರ್ವ ನಿಮ್ಮ ಮುಂದೆ.

ನಿಮ್ಮ ಊರು ಯಾವುದು, ಹಿನ್ನೆಲೆ ಏನು?
ನಾನು ಮೂಲತಃ ಚಿಕ್ಕಮಗಳೂರಿನವಳು. ಸದ್ಯಕ್ಕೆ ಮೈಸೂರಿನಲ್ಲಿ ವಾಸಿಸುತ್ತಿದ್ದೇನೆ. 

 ಚಿತ್ರರಂಗಕ್ಕೆ ಬಂದಿದ್ದು ಹೇಗೆ?
ನಾನು ಸಿನಿಮಾ ನೋಡಿಕೊಂಡೇ ಬೆಳೆದವಳು. ರವಿಚಂದ್ರನ್‌ ಸರ್‌ ಅಂದ್ರೆ ಇಷ್ಟ. ಸಿನಿಮಾ ರಂಗ ಸೇರುವ ಆಸೆ ಒಳಗೊಳಗೆ ಇತ್ತು. ಅದಕ್ಕೆ ತಕ್ಕಂತೆ ಫ್ರೆಂಡ್ಸ್‌ ಎಲ್ಲಾ ಹುರಿದುಂಬಿಸುತ್ತಿದ್ದರು. ಅದೇ ವೇಳೆಗೆ ಫೋಟೋಶೂಟ್‌ ಬೇರೆ ಮಾಡಿಸಿಕೊಂಡಿದ್ದೆ. ಫ್ರೆಂಡ್‌ ಒಬ್ಬರು ರವಿಚಂದ್ರನ್‌ ಸರ್‌ದು ಇಮೇಲ್‌ ಐಡಿ ತಂದು ಕೊಟ್ಟು ಈ ಇಮೇಲ್‌ ಐಡಿಗೆ ಫೋಟೋ ಕಳಿಸು ಎಂದರು. ನಾನು ಆ ಅದು ಫೇಕ್‌ ಇಮೇಲ್‌ ಐಡಿ ಅಂತ ಅಂದುಕೊಂಡಿದ್ದೆ. ಆದರೂ ನೋಡಿ ಬಿಡೋಣ ಅಂತ ಫೋಟೋ ಕಳಿಸಿಯೇ ಬಿಟ್ಟೆ. ನನಗೆ ನಾನು ಆಯ್ಕೆಯಾಗುತ್ತೇನೆ ಅನ್ನೋ ನಿರೀಕ್ಷೆ ಮತ್ತು ನಂಬಿಕೆ ಇರಲಿಲ್ಲ. ಆದರೆ ಒಂದು ದಿನ ನನಗೆ ರವಿಚಂದ್ರನ್‌ ಸರ್‌ರಿಂದ ಫೋನ್‌ ಬಂತು. ಅವತ್ತು ನನಗಾಗ ಖುಷಿಗೆ ಪಾರವೇ ಇಲ್ಲ. ತುಂಬಾ ಎಕ್ಸೆ„ಟ್‌ ಆಗಿದ್ದೆ.  

 ಇದೆಲ್ಲಾ ಆಗಿದ್ದು ಯಾವಾಗ?
ನಾನು ಪಿಯುಸಿಯಲ್ಲಿ ಇರುವಾಗ ಇದೆಲ್ಲಾ ಆಗಿದ್ದು. ರವಿಚಂದ್ರನ್‌ ಸರ್‌ ನನ್ನ ಬೆಂಗಳೂರಿಗೆ ಕರೆಸಿದರು. ಫೋಟೋಶೂಟ್‌ ಮಾಡುವಾಗ ನಾನು ತುಂಬಾ ನರ್ವಸ್‌ ಆಗಿದ್ದೆ. ಫೋಟೋಶೂಟ್‌ ಮುಗಿಸಿ ವಾಪಸ್‌ ಹೋದೆ. ನಾನು ರಿಜೆಕ್ಟ್ ಆಗಿದ್ದೆ. ಆಗ ನಂಗೆ ತುಂಬಾ ಬೇಜಾರಾಗಿತ್ತು. ಅಪರೂಪದ ಅವಕಾಶ ತಪ್ಪಿಹೋಯಿತಲ್ಲ ಅಂತ. ಆಮೇಲೆ ನಾನು ಬಿಕಾಂಗೆ ಸೇರಿಕೊಂಡೆ. ಅದೃಷ್ಟವಶಾತ್‌ ಕಾಲೇಜ್‌ ಶುರುವಾದಾಗ ರವಿ ಸರ್‌ ಮತ್ತೆ ಫೋನ್‌ ಮಾಡಿದರು. ಮತ್ತೆ ಬಂದೆ. ಫೋಟೋಶೂಟ್‌ ಆಯಿತು. ನಾನು ಸೆಲೆಕ್ಟ್ ಆದೆ. ಆ ಕ್ಷಣ ನನ್ನ ಜೀವನದ ಅತ್ಯಂತ ಖುಷಿಯ ಕ್ಷಣ.

 ಈ ಜರ್ನಿ ಹೇಗಿತ್ತು?
ಇವೆಲ್ಲಾ ನಾನು ನಿರೀಕ್ಷೆ ಮಾಡಿರಲಿಲ್ಲ. ಅದೂ ಮೊದಲ ಸಿನಿಮಾ ರವಿ ಸರ್‌ ಜೊತೆಗೆ ಅಂತ ನೆನೆಸಿಕೊಂಡ್ರೂ ಖುಷಿ ಆಗತ್ತೆ. ನನಗೆ ನಟನೆ ಏನೂ ಗೊತ್ತಿರಲಿಲ್ಲ. ರವಿ ಸರ್‌ ಎಲ್ಲವನ್ನೂ ಹೇಳಿಕೊಟ್ಟರು. ನನ್ನ ತಿದ್ದಿದರು. ಎಲ್ಲರೂ ರವಿ ಸರ್‌ ಬಗ್ಗೆ ಭಯ ಪಡೋರು. ಆದರೆ ನಂಗೆ ಅಷ್ಟೇನೂ ಭಯ ಆಗಲಿಲ್ಲ. ಅವರು ಏನು ಹೇಳಿಕೊಡುತ್ತಿದ್ದರೋ ಅದನ್ನು ಮಾಡಬೇಕು ಅನ್ನೋದಷ್ಟೇ ನನ್ನ ತಲೆಯಲ್ಲಿತ್ತು. ಹಾಗಾಗಿ ಖುಷಿಯಿಂದಲೇ ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದೆ. ಸಿನಿಮಾ ಶೂಟಿಂಗಿನ ಪ್ರತಿಯೊಂದು ಕ್ಷಣವೂ ನನಗೆ ಮರೆಯಲಾಗದ್ದು. ಆಡಿಯೋ ರಿಲೀಸ್‌ ಕಾರ್ಯಕ್ರಮಕ್ಕೆ ತುಂಬಾ ಜನ ಸ್ಟಾರ್‌ಗಳು ಬಂದಿದ್ದರು. ಅಷ್ಟೊಂದು ಮಂದಿಯನ್ನು ಒಟ್ಟಿಗೆ ನೋಡಿ ಖುಷಿಯಾಗಿತ್ತು.

 ಓದು ಮುಂದುವರಿಸುತ್ತೀರಾ?
"ಅಪೂರ್ವ' ಅವಕಾಶದಿಂದ ಬಿಕಾಂ ಅರ್ಧಕ್ಕೆ ನಿಂತಿದೆ. ಮುಂದೆ ಓದು ಮುಂದುವರಿಸುವ ಆಸೆ ಇದೆ.

 ಗುರಿ ಏನು?
ಎಲ್ಲಾ ಥರದ ಪಾತ್ರಗಳನ್ನು ಮಾಡಿ ಒಳ್ಳೆ ನಟಿ ಆಗಬೇಕು ಅನ್ನೋ ಆಸೆ ಇದೆ. ರವಿಚಂದ್ರನ್‌ ಸರ್‌ ನನ್ನ ಗಾಡ್‌ಫಾದರ್‌. ಅವರು ಏನು ಹೇಳುತ್ತಾರೋ ಮುಂದೆ ಹಾಗೆ ಮಾಡುತ್ತೇನೆ.

Trending videos

Back to Top