CONNECT WITH US  

ಅಲೆಮೂಡದ ತೀರದಲ್ಲಿ ಅಳಿಸಿ ಹೋದ ಹೆಜ್ಜೆ ಜಾಡು

ಚಿತ್ರ: ಗೋಧಿ ಬಣ್ಣ ಸಾಧಾರಣ ಮೈಕಟ್ಟು
ನಿರ್ದೇಶನ: ಹೇಮಂತ್‌ ರಾವ್‌ 
ನಿರ್ಮಾಣ: ಪುಷ್ಕರ್‌ ಮಲ್ಲಿಕಾರ್ಜುನ 
ತಾರಾಗಣ: ಅನಂತ್‌ ನಾಗ್‌, ರಕ್ಷಿತ್‌ ಶೆಟ್ಟಿ, ಶ್ರುತಿ ಹರಿಹರನ್‌, ಅಚ್ಯುತ್‌ ಕುಮಾರ್‌, ವಸಿಷ್ಟ ಮತ್ತಿತರರು

ಬೆಳೆಯುತ್ತಾ ಬೆಳೆಯುತ್ತಾ ನಾವು ಕಳೆದುಹೋಗುತ್ತೇವೆ. ವೃತ್ತಿಯಲ್ಲಿ ಅಹಂಕಾರದಲ್ಲಿ ಸೊಕ್ಕಿನಲ್ಲಿ ನಮ್ಮನ್ನೇ ನಾವು ಕಳೆದುಕೊಳ್ಳುತ್ತೇವೆ. ಎಲ್ಲವೂ ಸಿಕ್ಕಿದೆ ಅಂದುಕೊಂಡು ಬೀಗುತ್ತೇವೆ. ಕೈತುಂಬ ದುಡ್ಡು ತರುವ ಉದ್ಯೋಗ, ತಾರುಣ್ಯದ ಮದ, ಗೆಳೆಯ ಗೆಳತಿಯರ ಸಾಂಗತ್ಯ ಮತ್ತು ಸಾಧಿಸಿದ್ದೇನೆ ಎಂಬ ಆಹಂಕಾರದಲ್ಲಿ ಕಳೆದುಹೋದವನನ್ನು ಯಾರು ಹುಡುಕಬೇಕು?

ಅವನ ಅಪ್ಪ!
ಇಲ್ಲಿ ಅಪ್ಪನನ್ನು ಮಗ ಹುಡುಕುತ್ತಾನೋ ಮಗನನ್ನು ಅಪ್ಪ ಹುಡುಕುತ್ತಾನೋ? ಕಳೆದುಹೋಗಿರುವುದು ಮಗನೋ ಅಪ್ಪನೋ? ಪ್ರೀತಿಯ ಜಗತ್ತೋ? ಭಾವುಕತೆಯೋ? ಸಂಯಮವೋ? ನಿಜಕ್ಕೂ ಆಲ್‌ಜೆçಮರ್‌ ಇರುವುದು ಯಾರಿಗೆ? ಕಳಕೊಂಡವನಿಗೋ ಕಳೆದುಹೋದವನಿಗೋ? ಒಬ್ಬ ತನ್ನ ಪಾಡಿಗೆ ಅಲೆಯುತ್ತಿರುತ್ತಾನೆ, ಇನ್ನೊಬ್ಬ ಹುಡುಕುತ್ತಿರುತ್ತಾನೆ. ಅಲೆಯುತ್ತಿರುವವನಿಗೆ ತಾನು ಕಳೆದುಹೋಗಿದ್ದೇನೆ ಎಂಬ ಆತಂಕವಿಲ್ಲ. ಅಂಥ ಯಾತನೆ, ಕಳವಳ ಇರುವುದು ಹುಡುಕುವವನಲ್ಲಿ. ಹುಡುಕುವುದಕ್ಕೆ ಕಳೆದುಕೊಳ್ಳಲೇಬೇಕಾ? ಹುಡುಕಬೇಕೆಂಬ ಅನಿವಾರ್ಯತೆ ಮೂಡಲಿ ಎಂದೇ ಕಳೆದುಕೊಳ್ಳುತ್ತೇವಾ? ಕಳೆದುಕೊಳ್ಳುವುದರಲ್ಲೇ ಸುಖವಿದೆಯಾ? ಹುಡುಕುವುದೇ ಸಾರ್ಥಕತೆಯಾ? ಕಳೆದುಕೊಂಡದ್ದನ್ನು ಹುಡುಕಲು ಆರಂಭಿಸಿ, ಆ ಹುಡುಕಾಟದಲ್ಲೇ ಎಲ್ಲವನ್ನೂ ಪಡಕೊಂಡೆವು ಎಂಬ ಭ್ರಮೆಯಲ್ಲಿ ನಾವು ಸಂತೋಷವಾಗಿರುತ್ತೇವಾ?

ನೂರಾರು ಪ್ರಶ್ನೆಗಳನ್ನು "ಗೋಧಿಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ನಮ್ಮ ಮುಂದೆ ಹರವಿ ಮೌನವಾಗುತ್ತದೆ. ಆ ಮೌನದಲ್ಲಿ ನಾವು ಎಷ್ಟೆಲ್ಲವನ್ನು ಕೇಳಿಸಿಕೊಳ್ಳುತ್ತೇವೆ. ನಮ್ಮ ಆತ್ಮೀಯರೊಬ್ಬರು ಕಳೆದುಹೋಗಲಿ, ಅವರನ್ನು ಹುಡುಕುತ್ತಾ ಹುಡುಕುತ್ತಾ ಬಾಲ್ಯದ ಬೆರಗಿನ ನಾವು, ಸಹವಾಸದಲ್ಲಿ ಸಂಭ್ರಮಿಸುತ್ತಿದ್ದ ನಾವು, ಒಡನಾಟದಲ್ಲಿ ಒದಗಿಬರುತ್ತಿದ್ದ ನಾವು ಮತ್ತೆ ನಮಗೆ ಸಿಕ್ಕಲಿ ಅಂತ ಅನ್ನಿಸಿಬಿಡುತ್ತದೆ. ಒಂದು ಸಿನಿಮಾ ನಮ್ಮ ತಲ್ಲಣಗಳೆಲ್ಲವನ್ನು ನಮ್ಮ ಮುಂದೆ ಹರಿವಾಣದಲ್ಲಿ ಹರವಿ ತಂದಿಟ್ಟು ನಿನ್ನ ಬದುಕು ಇಷ್ಟೇ ಅಂತ ತೋರಿಸಿಕೊಡುತ್ತದೆ.

-2-
ನಮ್ಮ ಕಾಲದ ತಲ್ಲಣಗಳನ್ನು ಹೇಳುವ ಬಹುಮುಖ್ಯ ಸಿನಿಮಾವನ್ನು ಹೇಮಂತ್‌ ರಾವ್‌ ಎಂಬ ತರುಣ ನಿರ್ದೇಶಕ ನಮ್ಮ ಮುಂದಿಟ್ಟಿದ್ದಾರೆ. ಅವರು ಹೇಳುತ್ತಿರುವ ಕತೆ ಅಪ್ಪಟ ನಮ್ಮ ಕಾಲದ್ದು. ನಮ್ಮ ಮಹಾನಗರದ್ದು. ಆಸೆ,ಹೋಲಿಕೆ, ಹಪಾಹಪಿ, ನಿರ್ಭಾವುಕತೆ, ಮತ್ತೂಬ್ಬರನ್ನು ಗಮನಿಸಲೂ ತಾಳ್ಮೆಯಿಲ್ಲದ ಬದುಕಿನ ಲಯ ತಪ್ಪಿದ್ದನ್ನು ಹೇಮಂತ್‌ ಹೇಳುತ್ತಾ ಹೋಗುತ್ತಾರೆ. ಹಾಗೆ ಹೇಳುತ್ತಲೇ ಹೇಗೆ ಒಂದು ಜೀವನಶೈಲಿ ನಮ್ಮನ್ನು ಬರಡಾಗಿಸುತ್ತದೆ ಅನ್ನುವುದನ್ನೂ ತೋರಿಸುತ್ತಾರೆ.

ಇಂಥದ್ದೊಂದು ಕತೆಯನ್ನು ಹೇಳುವುದಕ್ಕೆ ಹೇಮಂತ್‌ ಅವರಿಗೆ ಅದೃಷ್ಟವಶಾತ್‌ ಅನಂತ್‌ನಾಗ್‌ ಸಿಕ್ಕಿದ್ದಾರೆ. ಸ್ಮತಿವಿಭ್ರಮೆಯಿಂದ ಬಳಲುವ ಅಪ್ಪನಾಗಿ ಅವರು ಹೃದಯ ಕಲಕುತ್ತಾರೆ. ಅನಂತ್‌ನಾಗ್‌ ಯಾವತ್ತಿದ್ದರೂ ಚೂಪುನೋಟಕ್ಕೆ ಹೆಸರಾದವರು. ಕಣ್ಣೋಟದಲ್ಲಿ, ಕಣ್ಣ ಹೊರಳಲ್ಲಿ ಅವರು ನಮ್ಮನ್ನು ಸೆಳೆದವರು. ಇಲ್ಲಿ ಕಣ್ಣೊಳಗೆ ಮರೆವು ಅವಿತುಕೂತಿದೆಯೇನೋ ಎಂಬಂತೆ ಅವರು ಮಂಕುನೋಟದಲ್ಲೇ ತಮ್ಮ ಪಾತ್ರವನ್ನು ಉದ್ಧರಿಸುತ್ತಾ ಹೋಗುತ್ತಾರೆ. ನಡೆಯಲ್ಲಿ ನುಡಿಯಲ್ಲಿ ಯಾರದೋ ಕಾರಲ್ಲಿ ಕೂತು ತಿರುಗಿ ನೋಡುವಲ್ಲಿ, ಯಾವುದೋ ಮನೆಯ ಜಗಲಿಯಲ್ಲಿ ಅನಾಥನಂತೆ ಕೂತ ಭಂಗಿಯಲ್ಲಿ, ಮಗನ ಸಿಟ್ಟನ್ನು ಭರಿಸುವ ನಿರಾತಂಕ ತಾಳ್ಮೆಯಲ್ಲಿ, ತನ್ನ ಪ್ರೇಮಕತೆಯನ್ನು ನೆನಪಿಸಿಕೊಂಡು ಹೇಳುವ ಸಂಭ್ರಮದಲ್ಲಿ, ಕಲ್ಲು ಬೆಂಚಿನ ಮೇಲೆ ಕಾಲಾಡಿಸುತ್ತಾ ತ್ರಿಶಂಕು ಸ್ಥಿತಿಯಲ್ಲಿ ಕೂತು ಮಗುವಾಗುವ ವೈಖರಿಯಲ್ಲಿ ಅನಂತ್‌ನಾಗ್‌ ಕಣ್ತುಂಬುತ್ತಾರೆ, ಕೆನ್ನೆಗಿಳಿಯುತ್ತಾರೆ.

ರಕ್ಷಿತ್‌ ಶೆಟ್ಟಿ ಮಗನ ಪಾತ್ರವನ್ನು ಜೀವಿಸಿದ್ದಾರೆ. ಚಿತ್ರ ಬೆಳೆಯುತ್ತಿದ್ದ ಹಾಗೇ ಪಾತ್ರದ ಸಂವಿಧಾನದಲ್ಲಾಗುವ ಬದಲಾವಣೆಯನ್ನು ಮಾತುಗಳಲ್ಲದೇ, ನಿಲುವಲ್ಲಿ ಕೂಡ ತೋರುವುದು ಸವಾಲಿನ ಕೆಲಸ. ಆರಂಭದ ಅಹಂಕಾರದಿಂದ ಕ್ರಮೇಣ ಮುದುಡುತ್ತಾ ಹೋಗಿ ಅರಳಿಕೊಳ್ಳುವ ತರುಣನಾಗಿ ರಕ್ಷಿತ್‌ ಶೆಟ್ಟಿ ಬಹುಸೊಗಸಾಗಿ ಪಾತ್ರಪರ್ಯಟನೆ ಮಾಡಿದ್ದಾರೆ. ಅವರನ್ನು ಸರಿಗಟ್ಟುವಂತೆ ಶ್ರುತಿ ಹರಿಹರನ್‌ ನಿರ್ಭಾರದಿಂದ ನಟಿಸಿದ್ದಾರೆ. ಶ್ರುತಿ ಅವರ ಸೂಕ್ಷ್ಮಜ್ಞತೆ ಅವರನ್ನು ಆ ಪಾತ್ರದೊಳಗೆ ನೇರ ಕರೆದೊಯ್ಯುತ್ತದೆ. 

ಅಚ್ಯುತ್‌ಕುಮಾರ್‌ ಅವರಿಗೆ ಸವಾಲಾಗುವ ಪಾತ್ರವೇನೂ ಇದರಲ್ಲಿಲ್ಲ. ಸವಾಲಲ್ಲದ ಸವಾಲನ್ನು ಕೂಡ ಅವರು ಗೆದ್ದಿದ್ದಾರೆ. ವಸಿಷ್ಟ ಎನ್‌ ಸಿಂಹ ಕನ್ನಡ ಚಿತ್ರರಂಗದಲ್ಲಿ ಬಹುಕಾಲ ಉಳಿಯುತ್ತಾರೆ ಮತ್ತು ಬೆಳಗುತ್ತಾರೆ.

-3-
ವೆಂಕೋಬರಾವ್‌ ಕಳೆದುಹೋಗಿದ್ದಾರೆಂದು ಅವರನ್ನು ಎಲ್ಲರೂ ಹುಡುಕುತ್ತಿದ್ದಾರೆ. ಆದರೆ ವೆಂಕೋಬರಾವ್‌ ಯಾರನ್ನೂ ಕಳಕೊಂಡಿಲ್ಲ. ಅವರ ಹೆಂಡತಿ ಅವರ ಭಾವಪ್ರಪಂಚದಲ್ಲಿ ಜೀವಂತ. ಎದುರಿಗೆ ಬಂದವನೇ ಮಗ ಶಿವ. ಹಾಗಿದ್ದರೆ ಕಳೆದುಹೋದವರು ಯಾರು? ನಿಧಾನವಾಗಿ ನಮ್ಮೊಳಗೆ ಇಳಿಯುವ ಚಿತ್ರ, ಕ್ರಮೇಣ ನಮ್ಮೊಳಗೆ ಬೆಳೆಯುತ್ತಾ ಹೋಗುವ ಪರಿ ಅನನ್ಯವಾಗಿದೆ. ಇಂಥದ್ದೊಂದು ಸಿನಿಮಾವನ್ನು ನಿರ್ಮಿಸಿದ ಪುಷ್ಕರ್‌ ಮಲ್ಲಿಕಾರ್ಜುನ ಮತ್ತು ರೂಪಿಸಿದ ಹೇಮಂತ್‌ ರಾವ್‌ ಮತ್ತು ತಂಡ ಕನ್ನಡದ ಸಾಧ್ಯತೆಗಳನ್ನೂ ಹಿಗ್ಗಿಸಿದೆ. ಅದಕ್ಕಾಗಿ ಚಿತ್ರತಂಡಕ್ಕೆ ಅಭಿನಂದನೆ. 

ಸೂಚನೆ: ಸಾಧ್ಯವಾದಷ್ಟೂ ಮಟ್ಟಿಗೆ ಕಪಾಲಿ ಚಿತ್ರಮಂದಿರದಲ್ಲಿ ಈ ಸಿನಿಮಾ ನೋಡಬೇಡಿ.  ಛಾಯಾಗ್ರಹಣ ಮತ್ತು ಸಂಗೀತ,  ಹಿನ್ನೆಲೆ ಸಂಗೀತದ ಗುಣಮಟ್ಟವನ್ನು ಹೇಳುವುದಕ್ಕೆ ಕಪಾಲಿ ಚಿತ್ರಮಂದಿರದ ಅತಿಕೆಟ್ಟ ಧ್ವನಿ ಮತ್ತು ಸ್ಕ್ರೀನಿಂಗು ಅವಕಾಶ ಮಾಡಿಕೊಟ್ಟಿಲ್ಲ.

-ಜೋಗಿ

Trending videos

Back to Top