CONNECT WITH US  

ಶಶಾಂಕ್‌ ಸಿನಿಮಾಸ್‌ ಶುರು, ಉಪೇಂದ್ರ ಗುರು!

ಈ ಹಿಂದೆ ಶಶಾಂಕ್‌, ತಾವು ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕುವುದಾಗಿ, ಅಜೇಯ್‌ ರಾವ್‌
ಅಭಿನಯದಲ್ಲಿ "ತಾಯಿಗೆ ತಕ್ಕ ಮಗ' ಎಂಬ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವುದಾಗಿ ಹೇಳಿದ್ದರು.

"ಮುಂಗಾರು ಮಳೆ - 2' ನಂತರ ಆ ಚಿತ್ರ ಶುರುವಾಗಲಿದೆ ಎಂದು ಸಹ ಹೇಳಿದ್ದರು. ಈಗ ಅಲ್ಲೊಂದು ಬದಲಾವಣೆಯಾಗಿದೆ. "ತಾಯಿಗೆ ತಕ್ಕ ಮಗ' ಬದಲು, ಶಶಾಂಕ್‌ ಇನ್ನೊಂದು ಚಿತ್ರ ಶುರು ಮಾಡಲಿದ್ದಾರೆ. ಆ ಚಿತ್ರದ
ನಾಯಕ ಉಪೇಂದ್ರ. ಹೌದು, ಉಪೇಂದ್ರ ಅಭಿನಯದಲ್ಲಿ ಶಶಾಂಕ್‌ ಒಂದು ಹೊಸ ಚಿತ್ರ ನಿರ್ದೇಶನ
ಮಾಡುತ್ತಿದ್ದಾರೆ. ಈ ಚಿತ್ರದ ನಿರ್ದೇಶನವಷ್ಟೇ ಅಲ್ಲ, ಶಶಾಂಕ್‌ ಸಿನಿಮಾಸ್‌ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ, ಅದರ ಮೂಲಕ ಹೊಸ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈಗಾಗಲೇ ಅವರು ಉಪೇಂದ್ರ ಅವರಿಗೆ ಕಥೆ ಹೇಳಿದ್ದಾರಂತೆ. ಕಥೆ ಮೆಚ್ಚಿಕೊಂಡಿರುವ ಉಪೇಂದ್ರ, "ಮಾಡೋಣ ಗುರುವೇ' ಎಂದು ಹೇಳಿ ಕಳುಹಿಸಿದ್ದಾರೆ. ಇನ್ನು ಚಿತ್ರದ ಕೆಲಸಗಳು
ಶುರುವಾಗಬೇಕಿದೆ.

ಈ ಚಿತ್ರ ಪ್ರಾರಂಭವಾಗುವುದೇನಿದ್ದರೂ, ಮುಂದಿನ ವರ್ಷವೇ. ಏಕೆಂದರೆ, ಉಪೇಂದ್ರ ಅವರ "ಡಾ ಮೋದಿ'
ಎಂಬ ಚಿತ್ರ ನವೆಂಬರ್‌ನಲ್ಲಿ ಶುರುವಾಗಲಿದೆ. ಅದಾದ ನಂತರ ಮಂಜು ಮಾಂಡವ್ಯ ನಿರ್ದೇಶನದಲ್ಲಿ ಉಪೇಂದ್ರ
ಅಭಿನಯಿಸುತ್ತಾರಂತೆ. ಅದು ಅವರ ಅಭಿನಯದ 50ನೇ ಚಿತ್ರವಾಗಲಿದ್ದು, ಶಶಾಂಕ್‌ ನಿರ್ದೇಶನದ ಚಿತ್ರ 51ನೆಯ
ಚಿತ್ರವಾಗುವ ಸಾಧ್ಯತೆ ಇದೆ.

Trending videos

Back to Top