CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಗೆದ್ದ ಖುಷಿಯಲ್ಲಿ ಶಿವಣ್ಣ

"ಎರಡು ದಿನ ಆತಂಕವಿತ್ತು. ಅದೀಗ ದೂರವಾಗಿದೆ. ಫ್ಯಾಮಿಲಿ ಸಮೇತ ಬಂದು ಚಿತ್ರ ನೋಡುತ್ತಿದ್ದಾರೆ. ಈ ಖುಷಿಯಲ್ಲಿ ಏನು ಮಾತಾಡಬೇಕೋ ಗೊತ್ತಾಗುತ್ತಿಲ್ಲ...' - ಹೀಗೆ ನಾನ್‌ಸ್ಟಾಪ್‌ ಮಾತುಗಳಲ್ಲಿ ಹೇಳಿಕೊಂಡಿದ್ದು ನಿರ್ದೇಶಕ ಮಂಜು ಸ್ವರಾಜ್‌. ಅವರು ಹೇಳಿದ್ದು ಯಶಸ್ವಿ ಪ್ರದರ್ಶನ ಕಾಣುತ್ತಿರುವ "ಶ್ರೀಕಂಠ' ಚಿತ್ರದ ಬಗ್ಗೆ. ನಿರ್ದೇಶಕ ಮಂಜು ಸ್ವರಾಜ್‌ ಚಿತ್ರದ ಗಳಿಕೆ ಬಗ್ಗೆ ಹೇಳಲಿಲ್ಲ. ಅದ್ಭುತ ಯಶಸ್ಸು ಕಾಣುತ್ತಿದೆ ಎಂದಷ್ಟೇ ಹೇಳಿ, ಶಿವರಾಜ್‌ಕುಮಾರ್‌ ಅವರ ಸಹಕಾರ, ಪ್ರೋತ್ಸಾಹ ಇರದಿದ್ದರೆ ಇಂಥದ್ದೊಂದು ಸಿನಿಮಾ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎನ್ನುತ್ತಾರೆ ಮಂಜು.

"ಚಿತ್ರದ ಹೆಸರು "ಶ್ರೀಕಂಠ' ಅಂದಾಗ ಎಲ್ಲರಿಗೂ ಮಾಸ್‌ ಚಿತ್ರ ಅನಿಸಿತ್ತು. ಆದರೆ, ಇದೊಂದು ಕಂಪ್ಲೀಟ್‌ ಫ್ಯಾಮಿಲಿ ಸಿನಿಮಾ. ಶಿವರಾಜ್‌ಕುಮಾರ್‌ ಇರದಿದ್ದರೆ, ಈ ಸಿನಿಮಾ ಮಾಡಲು ಆಗುತ್ತಿರಲಿಲ್ಲ. ಒಬ್ಬ ಸೂಪರ್‌ಸ್ಟಾರ್‌ ಕಾಮನ್‌ ಮ್ಯಾನ್‌ ಆಗಿ ಕಾಣಿಸಿಕೊಳ್ಳುವುದೆಂದರೆ ಸುಲಭವಲ್ಲ. ಶಿವಣ್ಣ ಅವರ ಪ್ರೋತ್ಸಾಹವೇ ಸಿನಿಮಾ ಚೆನ್ನಾಗಿ ಬರಲು ಕಾರಣ. ಎಲ್ಲಾ ಕ್ರೆಡಿಟ್‌ ಅವರಿಗೇ ಹೋಗಬೇಕು. ಇನ್ನು, ನಾವು ಎಷ್ಟೇ ಟೆನನ್‌ನಲ್ಲಿದ್ದರೂ ಶಿವಣ್ಣ ಕೂಲ್‌ ಆಗಿ ಎಲ್ಲವನ್ನೂ ನಿಭಾಯಿಸುತ್ತಿದ್ದರು. ಟ್ರಾಫಿಕ್‌ ಇದ್ದರೂ, ಅವರೇ ನಿಂತು ಸಮಸ್ಯೆ ಬಗೆಹರಿಸುತ್ತಿದ್ದರು.

ಯಶವಂತಪುರದಲ್ಲಿರುವ ಸುಲಭ್‌ ಶೌಚಾಲಯದಲ್ಲಿ ಯಾವುದೇ ಮುಜುಗರ ಇಲ್ಲದೆ ಹೋಗಿ ಚಿತ್ರೀಕರಣಕ್ಕೆ ಸಹಕರಿಸಿದರು. ಇನ್ನೊಂದು ಗ್ರೇಟ್‌ ವಿಷಯವೆಂದರೆ, ವಿಜಯನಗರದಲ್ಲಿ ಭಿಕ್ಷುಕರು ಮಲಗುವ ಜಾಗದಲ್ಲಿ ರಾತ್ರಿ, ಅಲ್ಲೆ ಬಿದ್ದಿದ್ದ ಗೋಣಿ ಚೀಲ ಒದ್ದು ಮಲಗುವ ಸೀನ್‌ನಲ್ಲೂ ಕಾಣಿಸಿಕೊಂಡರು. ಅಲ್ಲೆಲ್ಲಾ ಕಸ ಬಿದ್ದಿದ್ದು, ಜಾಗ ಕೆಟ್ಟದ್ದಾಗಿದ್ದರೂ ಶಿವಣ್ಣ ಲೆಕ್ಕಿಸದೆ, ಸಿನಿಮಾ ಚೆನ್ನಾಗಿ ಬರಬೇಕು ಎಂಬ ಆಸೆಯಿಂದ ಒಬ್ಬ ನಟನಾಗಿ ಪರಿಪೂರ್ಣತೆಯಿಂದ ಕೆಲಸ ಮಾಡಿದ್ದಕ್ಕೆ ಈ ಗೆಲುವು ಸಿಗಲು ಕಾರಣ' ಎಂಬುದು ಮಂಜು ಸ್ವರಾಜ್‌ ಅಭಿಪ್ರಾಯ.

ಶಿವರಾಜ್‌ಕುಮಾರ್‌ ಅವರಿಗೆ ವಿಮರ್ಶೆಗಳು ಚೆನ್ನಾಗಿ ಬಂದಿದ್ದನ್ನು ನೋಡಿ ಖುಷಿಯಾಯಿತಂತೆ. "ಒಂದು ಒಳ್ಳೇ ಕಥೆಗೆ ಸಿಕ್ಕ ಪ್ರತಿಫ‌ಲವಿದು. ಎಲ್ಲಾ ಕಡೆಯಿಂದಲೂ ಚಿತ್ರದ ಬಗ್ಗೆ ಒಳ್ಳೇ ಮಾತು ಕೇಳಿಬರುತ್ತಿವೆ. ನಾನೂ ಕಾಮನ್‌ ಮ್ಯಾನ್‌ ಆಗಿಯೇ ಸಿನಿಮಾ ನೋಡಿದೆ. ಮಂಜು ಇಡೀ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಬರುವ ಪ್ರತಿಯೊಂದು ಪಾತ್ರಗಳು ವಿಶೇಷ ಎನಿಸುತ್ತವೆ. ಸಮುದ್ರದ ಅಲೆಗಳಂತೆ ಎಮೋಷನ್ಸ್‌ ಹೃದಯಕ್ಕೆ ಬಡಿದು ಹೋಗುತ್ತವೆ. ಇಂಥದ್ದೊಂದು ಸಿನಿಮಾ ಕೊಟ್ಟ ಇಡೀ ಟೀಮ್‌ಗೆ ಥ್ಯಾಂಕ್ಸ್‌.

ಒಳ್ಳೇ ತಂಡ ಇದ್ದರೆ, ಇಂತಹ ಒಳ್ಳೇ ಸಿನಿಮಾಗಳು ಬರುತ್ತವೆ. ನಾನು ಪ್ರಯೋಗಕ್ಕೆ ಒಳಪಡದೆ ಸಹಜವಾಗಿ ಅಭಿನಯಿಸಿದ್ದೇನೆ. ಯಾಕೆಂದರೆ, ನಾನು ಸ್ಟಾರ್‌ ಎಂಬ ಭಾವನೆ ಇಟ್ಟುಕೊಂಡಿಲ್ಲ. ನಮ್ಮ ಫ್ಯಾಮಿಲಿಯಲ್ಲಿ ಹಾಗೆ ಬೆಳೆಸಿದ್ದಾರೆ. ಡಾ.ರಾಜ್‌ಕುಮಾರ್‌ ಮಗ ಅನ್ನುವುದಕ್ಕಿಂತ ಮುತ್ತುರಾಜ್‌ ಮಗನಾಗಿ ಬೆಳೆದೆ. ಹಾಗಾಗಿ ಅದು ಸಾಧ್ಯವಾಗಿದೆ' ಎನ್ನುತ್ತಾರೆ ಶಿವಣ್ಣ. ಮುಂದಿನ ದಿನಗಳಲ್ಲಿ ಲಂಡನ್‌, ಯುಎಸ್‌ ಮತ್ತು ಯುಎಇ ದೇಶಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಚನೆ ನಿರ್ಮಾಪಕ ಮನು ಗೌಡಗಿದೆ.

ಇಂದು ಹೆಚ್ಚು ಓದಿದ್ದು

Back to Top