CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಕೆ.ಜಿ.ರಸ್ತೆಯಲ್ಲಿ ಸಿನ್ಮಾ ಟ್ರಾಫಿಕ್‌

ಸಿನಿಮಾಗಳ ಬಿಡುಗಡೆ ವಾರದಿಂದ ವಾರಕ್ಕೆ ಹೆಚ್ಚಾಗುತ್ತಲೇ ಇದೆ. ಕಳೆದ ವಾರ ಐದು ಸಿನಿಮಾಗಳು ಬಿಡುಗಡೆಯಾಗಿದ್ದವು. ಅದಕ್ಕಿಂತ ಹಿಂದಿನ ವಾರ ನಾಲ್ಕು ಸಿನಿಮಾಗಳು ತೆರೆಗೆ ಬಂದಿದ್ದವು. ಹೀಗೆ ಸತತವಾಗಿ ವಾರಕ್ಕೆ ನಾಲ್ಕೈದು ಸಿನಿಮಾಗಳು ಬಿಡುಗಡೆಯಾಗುತ್ತಾ ಅದೃಷ್ಟ ಪರೀಕ್ಷೆ ಮಾಡಿಕೊಳ್ಳುತ್ತಲೇ ಇವೆ. ಆದರೆ, ಈ ವಾರ ಮಾತ್ರ ಬರೋಬ್ಬರಿ ಏಳು ಸಿನಿಮಾಗಳು ತೆರೆಕಾಣುತ್ತಿರೋದು ವಿಶೇಷ.

ಇತ್ತೀಚಿನ ದಿನಗಳಲ್ಲಿ ಒಂದೇ ವಾರದಲ್ಲಿ ಏಳು ಸಿನಿಮಾಗಳು ತೆರೆಕಂಡ ಉದಾಹರಣೆ ಇರಲಿಲ್ಲ. ಈ ಹಿಂದೆ ಏಳು ಸಿನಿಮಾಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿದ್ದರೂ ಕೊನೆಕ್ಷಣದಲ್ಲಿ ಬಿಡುಗಡೆಯನ್ನು ಮುಂದಕ್ಕೆ ಹಾಕಿದ್ದವು. ಈ ವಾರ ಕೆ.ಜಿ.ರಸ್ತೆ ಏಳು ಸಿನಿಮಾಗಳ ಬಿಡುಗಡೆಗೆ ಸಾಕ್ಷಿಯಾಗುತ್ತಿದೆ. 

ಈ ಶುಕ್ರವಾರ ಅಂದರೆ ಜುಲೈ 21 ರಂದು "ಧೈರ್ಯಂ', "ದಾದಾ ಇಸ್‌ ಬ್ಯಾಕ್‌', "ಆಪರೇಷನ್‌ ಅಲಮೇಲಮ್ಮ', "ಮೀನಾಕ್ಷಿ', "ಟಾಸ್‌', "ಶ್ವೇತ' ಹಾಗೂ "ಟ್ರಿಗರ್‌' ಚಿತ್ರಗಳು ಈ ವಾರ ತೆರೆಕಾಣುತ್ತಿವೆ. ಹೊಸಬರ ಹಾಗೂ ಈಗಾಗಲೇ ಚಿತ್ರಪ್ರೇಮಿಗಳಿಗೆ ಪರಿಚಿತರಾಗಿರುವವರ ಚಿತ್ರಗಳು ಈ ಪಟ್ಟಿಯಲ್ಲಿವೆ ಎಂಬುದು ವಿಶೇಷ. ಆ್ಯಕ್ಷನ್‌, ಲವ್‌ಸ್ಟೋರಿ, ಕಾಮಿಡಿ, ಹಾರರ್‌ ಜಾನರ್‌ಗೆ ಸೇರಿದ ಚಿತ್ರಗಳು ಒಂದೇ ವಾರ ಒಟ್ಟಿಗೆ ತೆರೆಕಾಣುವ ಮೂಲಕ ಪ್ರೇಕ್ಷಕರಿಗೆ ಆಯ್ಕೆಯ ಅವಕಾಶ ಮಾಡಿಕೊಟ್ಟಿವೆ. 

ಅಜೇಯ್‌ ರಾವ್‌ ಮೊದಲ ಬಾರಿಗೆ ಆ್ಯಕ್ಷನ್‌ ಇಮೇಜ್‌ನಲ್ಲಿ ಕಾಣಿಸಿಕೊಂಡಿರುವ "ಧೈರ್ಯಂ' ಚಿತ್ರವನ್ನು ಶಿವತೇಜಸ್‌ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ "ಮಳೆ' ಚಿತ್ರ ನಿರ್ಮಿಸಿದ್ದ ಶಿವ ತೇಜಸ್‌ ಅವರ ಎರಡನೇ ಚಿತ್ರವಿದು. ಚಿತ್ರದಲ್ಲಿ ಆದಿತಿ ನಾಯಕಿಯಾಗಿ ನಟಿಸಿದ್ದು, ರವಿಶಂಕರ್‌ ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಡಾ.ರಾಜು ನಿರ್ಮಾಣ ಮಾಡಿದ್ದಾರೆ.

ಮಧ್ಯಮ ವರ್ಗದ ಹುಡುಗನೊಬ್ಬ ತನಗೆ ಬರುವ ಸಮಸ್ಯೆಗಳನ್ನು ಧೈರ್ಯದಿಂದ ಹೇಗೆ ಎದುರಿಸುತ್ತಾನೆಂಬ ಅಂಶಗಳೊಂದಿಗೆ ಈ ಚಿತ್ರ ಸಾಗುತ್ತದೆ. ಈಗಾಗಲೇ ಚಿತ್ರದ ಟ್ರೇಲರ್‌ ಹಾಗೂ ಹಾಡುಗಳಿಗೆ ಮೆಚ್ಚುಗೆ ವ್ಯಕ್ತವಾಗಿರುವುದರಿಂದ ಸಿನಿಮಾವನ್ನು ಕೂಡಾ ಜನ ಇಷ್ಟಪಡುತ್ತಾರೆಂಬ ವಿಶ್ವಾಸದಲ್ಲಿ ಚಿತ್ರತಂಡ ಶುಕ್ರವಾರಕ್ಕಾಗಿ ಎದುರು ನೋಡುತ್ತಿದೆ. ಚಿತ್ರ ತ್ರಿವೇಣಿಯಲ್ಲಿ ಬಿಡುಗಡೆಯಾಗುತ್ತಿದೆ.

ಇನ್ನು "ದಾದಾ ಇಸ್‌ ಬ್ಯಾಕ್‌' ಚಿತ್ರವನ್ನು ಈ ಹಿಂದೆ "ಗೊಂಬೆಗಳ ಲವ್‌' ಮಾಡಿದ ಸಂತೋಷ್‌ ನಿರ್ದೇಶನ ಮಾಡಿದ್ದು, ಅರುಣ್‌ ನಾಯಕರಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಪಾರ್ಥಿಬನ್‌ ಕೂಡಾ ಪ್ರಮುಖ ಪಾತ್ರ ಮಾಡಿದ್ದು, ಶಾರದಾ ಚಿತ್ರಮಂದಿರಲ್ಲಿ ಚಿತ್ರ ತೆರೆಕಾಣುತ್ತಿದೆ. ಸುನಿ ನಿರ್ದೇಶನದ "ಆಪರೇಷನ್‌ ಅಲಮೇಲಮ್ಮ' ಒಂದು ಹೊಸ ಪ್ರಯೋಗದ ಚಿತ್ರವಾಗಿದ್ದು, ಚಿತ್ರದಲ್ಲಿ ರಿಷಿ ಹಾಗೂ ಶ್ರದ್ಧಾ ಶ್ರೀನಾಥ್‌ ನಟಿಸಿದ್ದಾರೆ.

ಟ್ರೇಲರ್‌ ಹಿಟ್‌ ಆಗಿದ್ದು, ಚಿತ್ರದ ಮೇಲೂ ಚಿತ್ರತಂಡ ಸಾಕಷ್ಟು ನಿರೀಕ್ಷೆ ಇಟ್ಟಿದೆ. ಈ ಚಿತ್ರ ಕೆ.ಜಿ.ರಸ್ತೆಯ ಸಂತೋಷ್‌ ಚಿತ್ರಮಂದಿರದಲ್ಲಿ ತೆರೆಕಾಣುತ್ತಿದೆ. ಇದಲ್ಲದೇ, ವಿಜಯರಾಘವೇಂದ್ರ ಐದು ವರ್ಷಗಳ ಹಿಂದೆ ಒಪ್ಪಿಕೊಂಡು ನಟಿಸಿದ "ಟಾಸ್‌' ಚಿತ್ರ ಕೂಡಾ ಈ ವಾರ ಬಿಡುಗಡೆಯಾಗುತ್ತಿದ್ದು, ಈ ಚಿತ್ರವನ್ನು ದಯಾಳ್‌ ಪದ್ಮನಾಭನ್‌ ನಿರ್ದೇಶಿಸಿದ್ದಾರೆ. ಈ ಹಿಂದೆ ಈ ಚಿತ್ರಕ್ಕೆ "ಒಂದು ರೂಪಾಯಿ ಎರಡು ಪ್ರೀತಿ' ಎಂದು ಟೈಟಲ್‌ ಇಡಲಾಗಿತ್ತು.

ಈಗ ಅದು ಟ್ಯಾಗ್‌ಲೈನ್‌ ಆಗಿ "ಟಾಸ್‌' ಎಂಬ ಟೈಟಲ್‌ನೊಂದಿಗೆ ಬಿಡುಗಡೆಯಾಗುತ್ತಿದೆ. ಇದಲ್ಲದೇ, "ಶ್ವೇತ' ಎಂಬ ಹಾರರ್‌ ಸಿನಿಮಾ ಸ್ವಪ್ನ ಚಿತ್ರಮಂದಿರದಲ್ಲಿ, "ಟ್ರಿಗರ್‌' ಎಂಬ ಚಿತ್ರ ಭೂಮಿಕಾದಲ್ಲಿ ಬಿಡುಗಡೆಯಾಗುತ್ತಿದೆ. ಜೊತೆಗೆ ಶುಭಾಪೂಂಜಾ ಅಭಿನಯದ "ಮೀನಾಕ್ಷಿ' ಚಿತ್ರ ಕೂಡಾ ತನ್ನ ಬಿಡುಗಡೆಯನ್ನು ಘೋಷಿಸಿಕೊಂಡಿದ್ದು, ಕೆ.ಜಿ.ರಸ್ತೆಯ ಚಿತ್ರಮಂದಿರ ಘೋಷಿಸಿಲ್ಲ. ವಾರದಿಂದ ವಾರಕ್ಕೆ ಬಿಡುಗಡೆಯಾಗುತ್ತಿರುವ ಸಿನಿಮಾಗಳ ಸಂಖ್ಯೆ ಹೆಚ್ಚಾಗುತ್ತಿರುವ ಮೂಲಕ ಥಿಯೇಟರ್‌ ಸಮಸ್ಯೆ ಕೂಡಾ ಎದುರಾಗುತ್ತಿದೆ.

ಹಿಂದಿನ ವಾರ ತೆರೆಕಂಡ ಚಿತ್ರಗಳು ಒಂದೇ ವಾರಕ್ಕೆ ಥಿಯೇಟರ್‌ ಬಿಟ್ಟುಕೊಡುವಂತಾಗಿದೆ. ಹಾಗಾಗಿಯೇ "ಹೊಂಬಣ್ಣ', "ಕಥಾವಿಚಿತ್ರ' ಸೇರಿದಂತೆ ಅನೇಕ ಚಿತ್ರಗಳು ಈಗ ಪ್ರಮುಖ ಚಿತ್ರಮಂದಿರಗಳಲ್ಲಿಲ್ಲ. ಈ ನಡುವೆಯೇ ಎರಡು ವಾರಗಳ ಹಿಂದೆ ತೆರೆಕಂಡಿದ್ದ "ಒಂದು ಮೊಟ್ಟೆಯ ಕಥೆ' ಚಿತ್ರಕ್ಕೆ ಈಗ ಕೆ.ಜಿ.ರಸ್ತೆಯಲ್ಲಿ ಚಿತ್ರಮಂದಿರ ಸಿಕ್ಕಿದ್ದು, ಅನುಪಮ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣುತ್ತಿದೆ. 

Back to Top