CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಮುಂದಿನ ವಾರ ಮೋಜೋ ಮಸ್ತಿ

"ಮೋಜೋ' ಎಂಬ ಚಿತ್ರದ ಬಗ್ಗೆ ನೀವು ಕೇಳಿರಬಹುದು. ಥ್ರಿಲ್ಲರ್‌ ಹಿನ್ನೆಲೆಯ ಸಿನಿಮಾ. ಆ ಚಿತ್ರ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಚಿತ್ರ ಅಕ್ಟೋಬರ್‌ 27ಕ್ಕೆ ಬಿಡುಗಡೆಯಾಗುತ್ತಿದೆ. ಗಜಾನನ ಭಟ್‌ ಈ ಚಿತ್ರದ ನಿರ್ಮಾಪಕರಾದರೆ, ಶ್ರೀಶ ಬೆಳಕವಾಡಿ ನಿರ್ದೇಶಕರು. ನಿರ್ದೇಶಕ ಶ್ರೀಶ ಅವರಿಗೆ ಸಿನಿಮಾದ ಮೇಲೆ ಸಾಕಷ್ಟು ವಿಶ್ವಾಸವಿದೆ. ಆ ವಿಶ್ವಾಸಕ್ಕೆ ಕಾರಣ ಸಿನಿಮಾ ಬಿಡುಗಡೆಗೆ ಮುನ್ನವೇ ಸಿಗುತ್ತಿರುವ ಮೆಚ್ಚುಗೆ.

ಈಗಾಗಲೇ "ಮೋಜೋ' ಚಿತ್ರ ಕೆಲವು ಚಿತ್ರೋತ್ಸವಗಳಿಗೆ ಆಯ್ಕೆಯಾಗಿದೆ. ಕ್ಯಾಲಿಫೋರ್ನಿಯಾದ ಫಾಗ್‌ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಉತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದರೆ, ಲಾಸ್‌ ಏಂಜಲೀಸ್‌, ಗ್ಲೆಂಡೇಲ್‌ ಹಾಗೂ ಗೋಲ್ಡನ್‌ ಗೇಟ್‌ ಚಿತ್ರೋತ್ಸವಗಳಿಗೂ ಆಯ್ಕೆಯಾಗಿದೆ. ಇವೆಲ್ಲವೂ ಚಿತ್ರತಂಡಕ್ಕೆ ಚಿತ್ರದ ಮೇಲಿನ ವಿಶ್ವಾಸ ಹೆಚ್ಚಿಸಿರುವುದಂತೂ ಸುಳ್ಳಲ್ಲ. ನಿರ್ದೇಶಕ ಶ್ರೀಶ ಅವರ ಪ್ರಕಾರ, "ಮೋಜೋ' ಕನ್ನಡಕ್ಕೆ ಹೊಸ ಜಾನರ್‌ನ ಸಿನಿಮಾ.

"ಇದೊಂದು ಪ್ರೀಕಾಗ್ನಿಟೀವ್‌ ಥ್ರಿಲ್ಲರ್‌ ಜಾನರ್‌ಗೆ ಸೇರುವ ಸಿನಿಮಾವಾಗಿದ್ದು, ಚಿತ್ರದ ನಾಯಕ ಮುಂದೆ ನಡೆಯುವ ಘಟನೆಯನ್ನು ಮೊದಲೇ ತಿಳಿಯುವ ಶಕ್ತಿ ಪಡೆದಿರುತ್ತಾನೆ. ಈ ತರಹದ ಒಂದು ಹೊಸ ಕಾನ್ಸೆಪ್ಟ್ನೊಂದಿಗೆ ಸಿನಿಮಾ ಮಾಡಿರುವುದರಿಂದ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ' ಎಂಬ ವಿಶ್ವಾಸ ನಿರ್ದೇಶಕರದು. "ಕನ್ನಡಕ್ಕೆ ಇದು ಹೊಸ ಕಾನ್ಸೆಪ್ಟ್. ಪ್ರತಿ ಹಂತದಲ್ಲೂ ಇಲ್ಲಿ ಟ್ವಿಸ್ಟ್‌ ಇದೆ.

ಟೆಕ್ನಿಕಲಿ ಕೂಡಾ ಸಿನಿಮಾ ಸ್ಟ್ರಾಂಗ್‌ ಆಗಿದ್ದು, ಅದು ಕೂಡಾ ಚಿತ್ರದ ಪ್ಲಸ್‌' ಎನ್ನುವುದು ನಿರ್ದೇಶಕರ ಮಾತು. ಚಿತ್ರದಲ್ಲಿ ಮನು ನಾಯಕರಾಗಿ ನಟಿಸಿದ್ದು, ನಾಯಕರಾಗಿರುವ ಮೊದಲ ಚಿತ್ರದಲ್ಲೇ ಒಳ್ಳೆಯ ಪಾತ್ರ ಸಿಕ್ಕ ಖುಷಿ ಅವರದು. ನಾಯಕಿ ಅನುಷಾ ಇಲ್ಲಿ ಮನೋವೈದ್ಯೆಯಾಗಿ ಕಾಣಿಸಿಕೊಂಡಿದ್ದಾರಂತೆ. ಚಿತ್ರೀಕರಣಕ್ಕೆ ಮೊದಲು ರಿಹರ್ಸಲ್‌ ಮಾಡಿದ್ದರಿಂದ ಶೂಟಿಂಗ್‌ ಸ್ಪಾಟ್‌ನಲ್ಲಿ ಕಷ್ಟವಾಗಲಿಲ್ಲವಂತೆ. ಚಿತ್ರಕ್ಕೆ ಅರವಿಂದ್‌ ಸಂಗೀತ ನೀಡಿದ್ದಾರೆ.  

Back to Top