ದಿಗಂತ್ ಕಥೆಯೊಂದು ಶುರುವಾಗಿದೆ
Team Udayavani, Oct 23, 2017, 10:57 AM IST
ದಿಗಂತ್ ಹೊಸ ಸಿನಿಮಾ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೇ. ಪುಷ್ಕರ್ ಹಾಗೂ ರಕ್ಷಿತ್ ಶೆಟ್ಟಿ ಜೊತೆಯಾಗಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಪೂಜಾ ದೇವರಿಯಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಆದರೆ, ಸಿನಿಮಾಕ್ಕೆ ಟೈಟಲ್ ಫೈನಲ್ ಆಗಿರಲಿಲ್ಲ. ಈಗ ಚಿತ್ರಕ್ಕೆ “ಕಥೆಯೊಂದು ಶುರುವಾಗಿದೆ’ ಎಂಬ ಟೈಟಲ್ ಇಡಲಾಗಿದೆ.
ಹೌದು, ಮೂಲಗಳ ಪ್ರಕಾರ, ದಿಗಂತ್ ಹಾಗೂ ಪೂಜಾ ದೇವರಿಯಾ ಚಿತ್ರಕ್ಕೆ “ಕಥೆಯೊಂದು ಶುರುವಾಗಿದೆ’ ಎಂದು ಟೈಟಲ್ ಇಡಲಾಗಿದೆ. ಅಂದಹಾಗೆ, “ಕಥೆಯೊಂದು ಶುರುವಾಗಿದೆ’ ಲವ್ಸ್ಟೋರಿ ಹಿನ್ನೆಲೆಯಲ್ಲಿ ಸಾಗಲಿದ್ದು, ಸಾಕಷ್ಟು ಹೊಸ ಅಂಶಗಳನ್ನು ಒಳಗೊಂಡಿದೆಯಂತೆ. ಈ ಚಿತ್ರವನ್ನು ಸೆನ್ನಾ ಹೆಗ್ಡೆ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಕಾಸರಗೋಡು ಮೂಲದ ಸೆನ್ನಾ ಹೆಗ್ಡೆಯವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ.
ಈ ಹಿಂದೆ ಮಲಯಾಳಂನಲ್ಲಿ “0-41*’ ಎಂಬ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗ ಕನ್ನಡದಲ್ಲಿ ದಿಗಂತ್ಗೆ ಸಿನಿಮಾ ಮಾಡುತ್ತಿದ್ದಾರೆ. ದಿಗಂತ್ ಅವರ ಮ್ಯಾನರೀಸಂಗೆ ತಕ್ಕಂತೆ ಈ ಸಿನಿಮಾ ಇದ್ದು, “ಪಂಚರಂಗಿ’ ನಂತರ ದಿಗಂತ್ ಅವರಿಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಇದೊಂದು ರೊಮ್ಯಾಂಟಿಕ್-ಕಾಮಿಡಿ ಚಿತ್ರವಾಗಿದ್ದು, ದಿಗಂತ್ ಕೆರಿಯರ್ನಲ್ಲಿ ವಿಭಿನ್ನ ಚಿತ್ರವಾಗಲಿದೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.
ಈಗಾಗಲೇ ಚಿತ್ರೀಕರಣ ಕೂಡಾ ಆರಂಭವಾಗಿದ್ದು, ಸದ್ದಿಲ್ಲದೇ ನಡೆಯುತ್ತಿದೆ. ಪುಷ್ಕರ್ ಹಾಗೂ ಪರಂವಾ ಬ್ಯಾನರ್ನಲ್ಲಿ ಈ ಚಿತ್ರ ತಯಾರಾಗುತ್ತಿದೆ. ಇದರ ಜೊತೆಗೆ ಇದೇ ಬ್ಯಾನರ್ನಲ್ಲಿ “ಭೀಮಸೇನ ನಳಮಹಾರಾಜ’ ಚಿತ್ರೀಕರಣ ನಡೆಯುತ್ತಿದ್ದು, “ಹಂಬಲ್ ಪೊಲಿಟಿಷಿಯನ್ ನೊಗರಾಜ್’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ರಕ್ಷಿತ್ ಶೆಟ್ಟಿ ನಾಯಕರಾಗಿರುವ “ಇವನೇ ಶ್ರೀಮನ್ನಾನಾರಾಯಣ’ ಚಿತ್ರ ಡಿಸೆಂಬರ್ನಲ್ಲಿ ಚಿತ್ರೀಕರಣಕ್ಕೆ ಹೊರಡಲಿದೆ.