CONNECT WITH US  

ಹಾರರ್‌, ಥ್ರಿಲ್ಲರ್‌ನತ್ತ ಮಾಲಾಶ್ರೀ!

ತೂಕ ಇಳಿದಿದೆ; ಗೆಟಪ್‌ ಬದಲಾಗಲಿದೆ

ಮಾಲಾಶ್ರೀ ನಟಿಸಿರುವ "ಉಪ್ಪು ಹುಳಿ ಖಾರ' ಚಿತ್ರ ನವೆಂಬರ್‌ 24 ರಂದು ಬಿಡುಗಡೆಯಾಗುತ್ತಿದೆ. ಈ ನಡುವೆಯೇ ಮಾಲಾಶ್ರೀಯವರು ಎರಡು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ಬಾರಿ ಆ್ಯಕ್ಷನ್‌ ಬದಲು ಹೊಸ ಜಾನರ್‌ನಲ್ಲಿ ಮಾಲಾಶ್ರೀಯವರು ಕಾಣಿಸಿಕೊಳ್ಳುತ್ತಿದ್ದು, ಥ್ರಿಲ್ಲರ್‌ ಹಾಗೂ ಹಾರರ್‌ ಜಾನರ್‌ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ಹೊಸ ಗೆಟಪ್‌ನಲ್ಲಿ ದರ್ಶನ ಕೊಡಲಿದ್ದಾರೆ. ಈ ಎರಡು ಚಿತ್ರಗಳು ಹೊಸ ವರ್ಷಕ್ಕೆ ಅಂದರೆ ಜನವರಿಯಲ್ಲಿ ಆರಂಭವಾಗಲಿವೆ. 

ಅಂದಹಾಗೆ, ಈ ಚಿತ್ರಗಳಿಗಾಗಿ ಮಾಲಾಶ್ರೀ ತಮ್ಮ ಲುಕ್‌, ಗೆಟಪ್‌ ಎಲ್ಲವನ್ನು ಬದಲಿಸಿಕೊಳ್ಳಲಿದ್ದಾರೆ. ಏಕೆಂದರೆ, ಚಿತ್ರದ ಪಾತ್ರ ತುಂಬಾ ವಿಶೇಷವಾಗಿದ್ದು, ಅದಕ್ಕಾಗಿ ಈಗಾಗಲೇ ತಯಾರಿ ನಡೆಸುತ್ತಿದ್ದಾರಂತೆ. ಮತ್ತೂಂದೆಡೆ ಮಾಲಾಶ್ರೀಯವರು ಈಗ ಸಖತ್‌ ಸ್ಲಿಮ್‌ ಆಗಿದ್ದಾರೆ. 9 ಕೆಜಿಯಷ್ಟು ತೂಕ ಇಳಿಸಿಕೊಂಡಿರುವ ಅವರು ಸತತವಾಗಿ ವರ್ಕೌಟ್‌ನಲ್ಲಿ ತೊಡಗಿದ್ದಾರೆ. ದಿನಕ್ಕೆ ಮೂರು ಗಂಟೆಗಳ ಕಾಲ ವರ್ಕೌಟ್‌ ಮಾಡಿ ತೂಕ ಇಳಿಸಿಕೊಂಡಿರುವ ಮಾಲಾಶ್ರೀಯವರಿಗೆ ಮತ್ತಷ್ಟು ಕೆಜಿ ಇಳಿಸಿಕೊಳ್ಳುವ ಇರಾದೆ ಇದೆ. ಆ ನಿಟ್ಟಿನಲ್ಲಿ ಅವರ ವರ್ಕೌಟ್‌ ಸಾಗುತ್ತಿದೆ.

"ನಾನು "ಉಪ್ಪು ಹುಳಿ ಖಾರ' ಚಿತ್ರದ ನಂತರ ಯಾವೊಂದು ಚಿತ್ರವನ್ನೂ ಒಪ್ಪಿಕೊಂಡಿರಲಿಲ್ಲ. ಬಹಳಷ್ಟು ಜನ ಚಿತ್ರ ಮಾಡೋಕೆ ಬಂದಿದ್ದರು. ಈ ಬಾರಿ ವಿಭಿನ್ನ ಚಿತ್ರವಷ್ಟೇ ಅಲ್ಲ, ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳಬೇಕು ಅಂತಾಸೆ. "ದುರ್ಗಿ' ಚಿತ್ರದಲ್ಲಿ ಮೊದಲ ಬಾರಿಗೆ ಬಾಯ್‌ಕಟ್‌ನಲ್ಲಿ ಕಾಣಿಸಿಕೊಂಡೆ. ಅಲ್ಲಿಂದ, ಇಲ್ಲಿಯವರೆಗೂ ಒಂದೇ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಹಾಗಾಗಿ ಈ ಬಾರಿ ಗೆಟಪ್‌ ಸಹ ಬದಲಾಗಿದೆ. ಇನ್ನು ಈಗಾಗಲೇ 9 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದೇನೆ. ಹಾಗಂತ ಡಯಟಿಂಗ್‌ ಮಾಡಿಲ್ಲ.

ಜನವರಿಯಲ್ಲಿ ಚಿತ್ರ ಪ್ರಾರಂಭವಾಗುವಷ್ಟರಲ್ಲಿ ಇನ್ನೊಂದಿಷ್ಟು ತೂಕ ಕಳೆದುಕೊಂಡಿರುತ್ತೇನೆ' ಎನ್ನುತ್ತಾರೆ ಮಾಲಾಶ್ರೀ. ಈ ಎರಡು ಚಿತ್ರಗಳ ಪೈಕಿ ಒಂದನ್ನು ರಾಮು ನಿರ್ಮಿಸಿದರೆ, ಇನ್ನೊಂದು ಚಿತ್ರವನ್ನು ಬೇರೆ ನಿರ್ಮಾಪಕರು ನಿರ್ಮಿಸುತ್ತಿದ್ದಾರೆ. ಚಿತ್ರದ ಹೆಸರೇನು, ನಿರ್ದೇಶಕರು ಯಾರು ಎಂಬ ವಿಷಯ ಕೇಳಿದರೆ, ಅವೆಲ್ಲಾ ರಾಮು ಅವರ ಬಾಯಿಂದಲೇ ಬರಲಿ ಎಂದು ತಪ್ಪಿಸಿಕೊಳ್ಳುತ್ತಾರೆ ಮಾಲಾಶ್ರೀ. ಅಂದ ಹಾಗೆ, ಈ ಚಿತ್ರ 2018ರ ಜನವರಿಯಲ್ಲಿ ಪ್ರಾರಂಭವಾಗಲಿದೆ.

Trending videos

Back to Top