CONNECT WITH US  

ತಿಲಕ್‌ ಈಗ ಕಮಾಂಡೋ; ತಮಿಳು ತಂಡದ ಕನ್ನಡ ಚಿತ್ರದಲ್ಲಿ ನಟನೆ

ತಿಲಕ್‌ ಈಗ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಳ್ಳೋಕೆ ಸಜ್ಜಾಗಿದ್ದಾರೆ. ಹೀಗೆಂದಾಕ್ಷಣ, ಇನ್ನೇನೋ ಕಲ್ಪನೆ ಬೇಡ. ಅವರೀಗ ಹೊಸ ಚಿತ್ರವೊಂದರಲ್ಲಿ ಆರ್ಮಿ ಮ್ಯಾನ್‌ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರಷ್ಟೇ. ಆ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಪಕ್ಕಾ ಆಗಿಲ್ಲ. ಚೆನ್ನೈನ ಲೆಸ್ಲಿ ಎನ್ನುವವರು ಆ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಲೆಸ್ಲಿ ಅವರು ತಮಿಳಿನಲ್ಲಿ ಆ ಚಿತ್ರ ಮಾಡುವ ಯೋಚನೆಯಲ್ಲಿದ್ದರು. ಚಿತ್ರದ ಪಾತ್ರಕ್ಕೆ ನಯನಾತಾರಾ ಅವರೇ ಬೇಕಿದ್ದರಿಂದ, ಅವರ ಡೇಟ್ಸ್‌ ಸದ್ಯಕ್ಕಿರಲಿಲ್ಲ. ಹಾಗಾಗಿ, ಲೆಸ್ಲಿ ಅವರು ಮೊದಲು ಕನ್ನಡದಲ್ಲಿ ಆ ಚಿತ್ರವನ್ನು ಮಾಡಿ ನಂತರ ತಮಿಳಿನಲ್ಲಿ ಮಾಡಲು ನಿರ್ಧರಿಸಿ, ಇಲ್ಲಿ ಚಿತ್ರ ಮಾಡೋಕೆ ಸಜ್ಜಾಗಿದ್ದಾರೆ ಎಂಬುದು ತಿಕಲ್‌ ಮಾತು.

ತಿಲಕ್‌ ಈ ಚಿತ್ರದಲ್ಲಿ ಕಮಾಂಡೋ ಪಾತ್ರ ನಿರ್ವಹಿಸುತ್ತಿದ್ದಾರೆ. "ಅದೊಂದು ಸೈನ್ಸ್‌ ಫಿಂಕ್ಷನ್‌ ಕಥೆ. ಕನ್ನಡದಲ್ಲಿ ಸಾಕಷ್ಟು ಆ ಬಗೆಯ ಚಿತ್ರ ಬಂದಿರಬಹುದು. ಆದರೆ, ನನ್ನ ಮಟ್ಟಿಗೆ ಹೇಳುವುದಾದರೆ, ಲೆಸ್ಲಿ ಅವರ ಕಥೆ ಭಿನ್ನವಾಗಿದೆ. ತೆರೆಯ ಮೇಲೆ ಹೇಗೆ ತರಬೇಕು ಎಂಬ ಪ್ಲಾನಿಂಗ್‌ ಕೂಡ ಚೆನ್ನಾಗಿ ಮಾಡಿಕೊಂಡಿದ್ದಾರೆ. 

ಚಿಕ್ಕಮಗಳೂರು, ಕಳಸ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಈ ಚಿತ್ರದ ಇನ್ನೊಂದು ವಿಶೇಷವೆಂದರೆ, ಇದೇ ಮೊದಲ ಸಲ ಕಮಾಂಡೋ ಪಾತ್ರ ನಿರ್ವಹಿಸುತ್ತಿದ್ದೇನೆ. ಇಲ್ಲಿ ನನ್ನ ಗೆಟಪ್‌ ಸಹ ಬದಲಾಗಿದೆ. ಅಂದರೆ, ಕ್ಲೀನ್‌ ಶೇವ್‌ ಮಾಡಿಕೊಂಡು ಪಕ್ಕಾ ಆರ್ಮಿ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಶನಿವಾರದವರೆಗೂ "ಇರುವುದೆಲ್ಲವ ಬಿಟ್ಟು' ಚಿತ್ರದ ಚಿತ್ರೀಕರಣ ನಡೆಯಲಿದೆ. ಆ ಚಿತ್ರದ ಪಾತ್ರಕ್ಕೆ ದಾಡಿ ಬಿಟ್ಟಿದ್ದು, ಭಾನುವಾರ ಕ್ಲೀನ್‌ ಶೇವ್‌ ಮಾಡಿಕೊಳ್ಳಲಿದ್ದೇನೆ. ಮುಂದಿನ ವಾರವೇ ಚಿತ್ರದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದೆ. ಬಹುತೇಕ ತಮಿಳು ತಂತ್ರಜ್ಞರೇ ಇಲ್ಲಿ ಕೆಲಸ ಮಾಡಲಿದೆ. ಇನ್ನುಳಿದಂತೆ, ಕಲಾವಿದರ ಆಯ್ಕೆ ಕೂಡ ನಡೆಯುತ್ತಿದೆ' ಎಂದು ವಿವರ ಕೊಡುತ್ತಾರೆ ತಿಲಕ್‌.

"ಸರ್ವಸ್ವ' ಚಿತ್ರದ ನಂತರ ತಿಲಕ್‌ "ದಿ ವಿಲನ್‌' ಚಿತ್ರ ಒಪ್ಪಿಕೊಂಡು, ಅದಾಗಲೇ ಲಂಡನ್‌ ಹಾಗು ಬ್ಯಾಂಕಾಕ್‌ನಲ್ಲಿ ನಡೆದ ಚಿತ್ರೀಕರಣದಲ್ಲಿ ಭಾಗವಹಿಸಿ ಬಂದಿದ್ದಾರೆ. ಆ ಬಳಿಕ ಮೇಘನಾ ರಾಜ್‌ ಅವರೊಂದಿಗೆ "ಇರುವುದೆಲ್ಲವ ಬಿಟ್ಟು' ಚಿತ್ರದಲ್ಲಿ ನಟಿಸಿದ್ದಾರೆ. ಇನ್ನಷ್ಟು ಕಥೆಗಳನ್ನು ಕೇಳುತ್ತಿದ್ದಾರೆ. ಆದರೆ, ಯಾವುದನ್ನೂ ಅಂತಿಮ ಮಾಡಿಲ್ಲ ಎಂಬುದು ಅವರ ಮಾತು.

Back to Top