CONNECT WITH US  

ಕೋಮಲ ಹಿಂದೆ ಹೊರಟ ಪ್ರೇಮ್‌!

ಅವಳಿಂದ್ಲೇ ಇಂಗ್ಲೀಷ್‌ನಲ್ಲಿ ಫೇಲ್‌ ಆದವರ ನೆನಪಿನ ಕಥೆ

ಕನ್ನಡ ಚಿತ್ರರಂಗದಲ್ಲಿ ಬಹುಶಃ ಇಂದ್ರಸೇನ ಅವರ ಹೆಸರು ಗೊತ್ತೇ ಇರುತ್ತೆ. ಹಲವು ಚಿತ್ರಗಳಲ್ಲಿ ಸಂಗೀತ ನೀಡಿದವರು ಇಂದ್ರಸೇನ. ಅಷ್ಟೇ ಅಲ್ಲ, ಗೀತೆ ರಚನೆ, ಕಥೆ, ಸಂಭಾಷಣೆ, ಚಿತ್ರಕಥೆಯಲ್ಲೂ ತೊಡಗಿಸಿಕೊಂಡವರು. ಈಗೇಕೆ ಅವರ ವಿಷಯ ಅನ್ನುವುದಕ್ಕೆ ಒಂದು ಕಾರಣವಿದೆ. ಅವರೀಗ ಒಂದು ಚಿತ್ರಕ್ಕೆ ಸಂಭಾಷಣೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಆ ಚಿತ್ರಕ್ಕೆ "ಕೆ ಫಾರ್‌ ಕೋಮಲ' ಎಂದು ನಾಮಕರಣ ಮಾಡಲಾಗಿದೆ. ಈ ಚಿತ್ರದ ಹೀರೋ ನೆನಪಿರಲಿ ಪ್ರೇಮ್‌.

ಈ ಚಿತ್ರದ ಶೀರ್ಷಿಕೆಗೆ "ಇವಳಿಂದ್ಲೇ ನಾನ್‌ ಇಂಗ್ಲೀಷ್‌ನಲ್ಲಿ ಫೇಲು..' ಎಂಬ ಅಡಿಬರಹವಿದೆ. ಅಲ್ಲಿಗೆ ಇದೊಂದು ಮಧುರ ನೆನಪಿನ ಪಿಸುಮಾತುಗಳ ನಡುವಣ ಚಿತ್ರಣ ಅನ್ನೋದು ಗೊತ್ತಾಗುತ್ತೆ. ಈ ಚಿತ್ರಕ್ಕೆ ಶಶಾಂಕ್‌ ರಾಜ್‌ ನಿರ್ದೇಶನ ಮಾಡುತ್ತಿದ್ದಾರೆ. ಮೈಸೂರಿನ ಶಶಿಕುಮಾರ್‌ ಅವರು ಈ ಚಿತ್ರ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ನಾಯಕಿಯ ಹುಡುಕಾಟ ನಡೆಯುತ್ತಿದೆ. ಇಂದ್ರಸೇನ ಅವರು ಸುಮಾರು 21 ಚಿತ್ರಗಳಿಗೆ ಸಂಗೀತ ನೀಡಿದ್ದಾರೆ.

ಆ ಪೈಕಿ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದಿರುವುದು ಉಂಟು. "ನೀನಿಲ್ಲದ ಮಳೆ' ಚಿತ್ರಕ್ಕೂ ಇಂದ್ರಸೇನ ಸಂಭಾಷಣೆ ಬರೆದು, ಸಂಗೀತದೊಂದಿಗೆ ಗೀತೆ ರಚಿಸಿದ್ದಾರೆ. ಬಹುತೇಕ ಹೊಸಬರ ಚಿತ್ರಗಳಿಗೆ ಸಂಗೀತ ಕೊಡುತ್ತಲೇ ಬಂದಿರುವ ಇಂದ್ರಸೇನ ಅವರಿಗೆ ಬರವಣಿಗೆ ಮೇಲೆ ಸಾಕಷ್ಟು ತುಡಿತ. ಅದು ಅವರನ್ನು ಸಂಭಾಷಣೆಕಾರರನ್ನಾಗಿಸಿದೆ. "ಕೆ ಫಾರ್‌ ಕೋಮಲ' ರೆಗ್ಯುಲರ್‌ ಕಮರ್ಷಿಯಲ್‌ ಚಿತ್ರ.

ಲವ್‌ಸ್ಟೋರಿ ಇಲ್ಲಿದ್ದರೂ, ಪ್ರತಿಯೊಬ್ಬರ ಲೈಫ‌ಲ್ಲಿ ಹೈಸ್ಕೂಲ್‌ ಮಟ್ಟದಲ್ಲೊಬ್ಬ ನೆನಪಿನ ಗೆಳತಿ, ಹುಡುಗಿ, ಲವ್ವರ್‌ ಇದ್ದೇ ಇರುತ್ತಾಳೆ. ಮದುವೆಯಾಗಿ ಹೆಂಡ್ತಿ, ಮಕ್ಕಳ ಜತೆ ಹೋಗುವಾಗ, ಎಲ್ಲೋ ಒಂದು ಕಡೆ ಆ ಹೈಸ್ಕೂಲ್‌ ಹುಡುಗಿ, ಗೆಳತಿ ಅಥವಾ ಹಳೇ ಲವ್ವರ್‌ ಎದುರಾದಾಗ, ಹಿಂದಿನ ನೆನಪಿನಂಗಳದಲ್ಲಿ ಆಗುವಂತಹ ತಳಮಳ. ಆಕೆಯ ನೋಟಕ್ಕೆ ಬಿದ್ದು, ಲವ್‌ ಮಾಡಿ, ಫೇಲ್‌ ಆಗಿದ್ದನ್ನು ನೆನಪಿಸಿಕೊಳ್ಳುವ ಸಂದರ್ಭಗಳು ಹಳೇ ಮಧುರ ಕಥೆಯನ್ನು ಹೇಳುತ್ತವೆ. ಅಂತಹ ಅನೇಕ ವಿಷಯಗಳು ಈ ಚಿತ್ರದಲ್ಲಿವೆ ಎಂಬುದು ಇಂದ್ರಸೇನ ಅವರ ಮಾತು.

ಅಂದಹಾಗೆ, ಫೆಬ್ರವರಿಯಲ್ಲಿ ಚಿತ್ರಕ್ಕೆ ಚಾಲನೆ ಸಿಗಲಿದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿರಲಿವೆ. ಜತೆಗೆ ಎರಡು ಬಿಟ್‌ ಇದೆ. ಇದೊಂದು ಮ್ಯೂಸಿಕಲ್‌ ಲವ್‌ಸ್ಟೋರಿಯಾಗಿದ್ದರೂ, ಅಪ್ಪಟ ಮನರಂಜನೆ ಇರಲಿದೆ. ಚಿತ್ರಕ್ಕೆ ನೆನಪಿರಲಿ ಪ್ರೇಮ್‌ ಈಗ ಹೀರೋ ಆಗಿ ಪಕ್ಕಾ ಆಗಿದ್ದಾರೆ. ಉಳಿದಂತೆ ರವಿಶಂಕರ್‌ ನಟಿಸುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಚಿತ್ರಕ್ಕೆ  ಪ್ರಭು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಚೈನೈ ಮೂಲದ ಪ್ರಭು ಅವರಿಗೆ ಕನ್ನಡದ ಮೊದಲ ಚಿತ್ರವಿದು ಎಂಬುದು ಅವರ ಹೇಳಿಕೆ.

Trending videos

Back to Top