ಇರುವುದೆಲ್ಲವ ಬಿಟ್ಟು ಫಸ್ಟ್ ಲುಕ್
Team Udayavani, Jan 14, 2018, 10:47 AM IST
ಮೇಘನಾ ರಾಜ್, ತಿಲಕ್ ಮತ್ತು ಶ್ರೀ ಅಭಿನಯದ “ಇರುವುದೆಲ್ಲವ ಬಿಟ್ಟು’ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಗಿದಿದ್ದು, ಸಂಕ್ರಾಂತಿ ಹಬ್ಬದ ವಿಶೇಷವಾಗಿ ಜ.14 (ಇಂದು) ಚಿತ್ರದ ಫಸ್ಟ್ಲುಕ್ ಬಿಡುಗಡೆ ಮಾಡಲಾಗುತ್ತಿದೆ. ವಿಶೇಷವೆಂದರೆ, ಚಿತ್ರದ ಫಸ್ಟ್ಲುಕ್ ಪೋಸ್ಟರ್ ಅನ್ನು ನಟಿ ಮೇಘನಾ ರಾಜ್ ಅವರು ತಮ್ಮ ಫೇಸ್ಬುಕ್ ಲೈವ್ನಲ್ಲಿ ಮಧ್ಯಾಹ್ನ 12.30ಕ್ಕೆ ಬಿಡುಗಡೆ ಮಾಡಲಿದ್ದಾರೆ.
ಅದಕ್ಕೆ ಕಾರಣವೂ ಇದೆ. ಮೇಘನಾ ರಾಜ್ ಅವರ ಮುಖಪುಟದಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಮಂದಿ ಅಭಿಮಾನಿಗಳು ಫಾಲೋ ಮಾಡುತ್ತಿದ್ದಾರೆ. ಆ ಖುಷಿಗೆ ಅವರು ಸಂಕ್ರಾಂತಿ ಸ್ಪೆಷಲ್ ಆಗಿ ಭಾನುವಾರ (ಇಂದು) ಲೈವ್ ಮಾಡುವ ಮೂಲಕ ಚಿತ್ರದ ಫಸ್ಟ್ಲುಕ್ ರಿಲೀಸ್ ಮಾಡುತ್ತಿದ್ದಾರೆ. ಕಾಂತ ಕನ್ನಳ್ಳಿ ನಿರ್ದೇಶನದ “ಇರುವುದೆಲ್ಲವ ಬಿಟ್ಟು’ ಚಿತ್ರವನ್ನು ದೇವರಾಜ್ ದಾವಣಗೆರೆ ನಿರ್ಮಿಸುತ್ತಿದ್ದಾರೆ.
“ಇರುವುದೆಲ್ಲವ ಬಿಟ್ಟು’ ಈ ಶೀರ್ಷಿಕೆಗೆ “ಇರುವೆ ಬಿಟ್ಟುಕೊಳ್ಳುವುದೇ ಜೀವನ’ ಎಂಬ ಅಡಿಬರಹವಿದೆ. ಇಷ್ಟರಲ್ಲೇ ಮಂಗಳೂರಿನಲ್ಲಿ ಅಚ್ಯುತರಾವ್, ಅರುಣ ಬಾಲರಾಜ್ ಅವರ ಭಾಗದ ಚಿತ್ರೀಕರಣ ಶುರುವಾಗಲಿದ್ದು, ನಂತರ ಊಟಿಯಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ವಿಲಿಯಮ್ ಡೇವಿಡ್ ಕ್ಯಾಮೆರಾ ಹಿಡಿದರೆ, ಶ್ರೀಧರ್ ವಿ. ಸಂಭ್ರಮ್ ಸಂಗೀತವಿದೆ.