CONNECT WITH US  

ರ್‍ಯಾಂಬೋ 2ಗೆ ಶ್ರೇಯ್‌ ನೃತ್ಯ ನಿರ್ದೇಶನ

ಶರಣ್‌ ಹುಟ್ಟುಹಬ್ಬದಂದು ಹಾಡು ಬಿಡುಗಡೆ

"ಇಂಡಿಯಾಸ್‌ ಡ್ಯಾನ್ಸಿಂಗ್‌ ಸೂಪರ್‌ಸ್ಟಾರ್‌'ನ ವಿಜೇತ ಮತ್ತು ಎಂಜೆ5 ಎಂಬ ಜನಪ್ರಿಯ ಮತ್ತು ಯಶಸ್ವಿ ನೃತ್ಯ ತಂಡದ ಸದಸ್ಯರಾಗಿರುವ ಶ್ರೇಯ್‌ ಖನ್ನಾ, ಈಗ ಇದೇ ಮೊದಲ ಬಾರಿಗೆ ಕನ್ನಡ ಚಿತ್ರವೊಂದಕ್ಕೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಶರಣ್‌ ಅಭಿನಯದ "ರ್‍ಯಾಂಬೋ 2' ಚಿತ್ರದ ಹಾಡೊಂದಕ್ಕೆ ಶ್ರೇಯ್‌ ನೃತ್ಯ ನಿರ್ದೇಶನ ಮಾಡಿದ್ದು, ಈ ಚಿತ್ರದ ಮೂಲಕ ಕನ್ನಡಕ್ಕೆ ಬಂದಿದ್ದಾರೆ.

ಶರಣ್‌, ಆಶಿಕಾ ಮುಂತಾದವರು ನೃತ್ಯ ಮಾಡಿರುವ ಈ ಹಾಡು ಶರಣ್‌ ಹುಟ್ಟುಹಬ್ಬದಂದು (ಫೆಬ್ರವರಿ 6) ಬಿಡುಗಡೆಯಾಗಲಿದೆ. ಶರಣ್‌ ತಮ್ಮ ಲಡ್ಡು ಸಿನಿಮಾ ಬ್ಯಾನರ್‌ನಡಿ ಈ "ರ್‍ಯಾಂಬೋ 2' ಚಿತ್ರವು ಬಿಡುಗಡೆಯಾಗುತ್ತಿದ್ದು, ಚಿತ್ರದ ನಿರ್ಮಾಣದಲ್ಲಿ ಅಟ್ಲಾಂಟ ನಾಗೇಂದ್ರ ಹಾಗೂ ಚಿತ್ರಕ್ಕೆ ಕೆಲಸ ಮಾಡುವ ತಂತ್ರಜ್ಞರು ಕೈ ಜೋಡಿಸಿದ್ದಾರೆ.

ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ, ಛಾಯಾಗ್ರಾಹಕ ಸುಧಾಕರ್‌ ರಾಜ್‌, ಸಂಕಲನಕಾರ ಕೆ.ಎಂ. ಪ್ರಕಾಶ್‌, ಕಲಾ ನಿರ್ದೇಶಕ ಮೋಹನ್‌ ಬಿ ಕೆರೆ, ಕ್ರಿಯೇಟಿವ್‌ ಹೆಡ್‌ ತರುಣ್‌ ಸುಧೀರ್‌ ಇವರೆಲ್ಲಾ ವರ್ಕಿಂಗ್‌ ಪಾಟ್ನìರ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಚಿತ್ರದಿಂದ ಬಂದ ಲಾಭದಲ್ಲಿ ಎಲ್ಲರಿಗೂ ಶೇರ್‌ ಸಿಗಲಿದೆಯಂತೆ.

ಈ ಹಿಂದೆ "ದಿಲ್‌ವಾಲ' ಚಿತ್ರ ಮಾಡಿದ್ದ ಅನಿಲ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶರಣ್‌ಗೆ ನಾಯಕಿಯಾಗಿ ಆಶಿಕಾ ನಟಿಸಿದ್ದಾರೆ. ಇನ್ನು ಚಿಕ್ಕಣ್ಣ ಸಹ ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, "ರ್‍ಯಾಂಬೋ 2' ಚಿತ್ರದ ಮೂಲಕ ಕನ್ನಡಕ್ಕೆ ಹೊಸ ಗಾಯಕಿಯ ಪರಿಚಯವಾಗುತ್ತಿದೆ.

ಅದೇ ನಟ ಹಾಗೂ ಕಲಾ ನಿರ್ದೇಶಕ ಅರುಣ್‌ ಸಾಗರ್‌ ಅವರ ಮುದ್ದಿನ ಮಗಳು ಅದಿತಿ. 15 ವರ್ಷದ ಅದಿತಿ ಈಗ "ರ್‍ಯಾಂಬೋ 2' ಚಿತ್ರದಲ್ಲಿ ಹಿನ್ನೆಲೆ ಗಾಯಕಿಯಾಗಿ ಪರಿಚಿತರಾಗಲಿದ್ದಾರೆ. ಈ ಚಿತ್ರಕ್ಕಾಗಿ ಅದಿತಿ ಅವರಿಂದ "ಧಮ್‌ ಮಾರೋ ಧಮ್‌ ...' ಎಂಬ ಹಾಡನ್ನು ಹಾಡಿಸಿದ್ದಾರೆ ಸಂಗೀತ ನಿರ್ದೇಶಕ ಅರ್ಜುನ್‌ ಜನ್ಯ. ಈ ಹಾಡು ಬಿಡುಗಡೆಯಾಗಿದ್ದು, ಸಾಕಷ್ಟು ಜನಪ್ರಿಯವಾಗಿದೆ.

Trending videos

Back to Top