CONNECT WITH US  

ಶ್ರೀಮನ್ನಾರಾಯಣನಿಗೆ ರಕ್ಷಿತ್‌ ವರ್ಕೌಟ್‌ ಶುರು

ರಕ್ಷಿತ್‌ ಶೆಟ್ಟಿ ನಾಯಕರಾಗಿ ನಟಿಸಲಿರುವ "ಅವನೇ ಶ್ರೀಮನ್ನಾರಾಯಣ' ಚಿತ್ರದ ಚಿತ್ರೀಕರಣ ಪ್ರಾರಂಭಕ್ಕೆ ದಿನಗಣನೆ ಪ್ರಾರಂಭವಾಗಿದೆ. ಈ ಚಿತ್ರ ಫೆಬ್ರವರಿ 10 ರಿಂದ ಆರಂಭವಾಗಲಿದೆ. ಚಿತ್ರ ದೊಡ್ಡ ಮಟ್ಟದಲ್ಲಿ ತಯಾರಾಗುತ್ತಿದ್ದು, ಮೋಹನ್‌ ಬಿ ಕೆರೆ ಸ್ಟುಡಿಯೋದಲ್ಲಿ ಸೆಟ್‌ ಹಾಕಲಾಗುತ್ತಿದೆ.

ಈ ಚಿತ್ರದ ಮತ್ತೂಂದು ವಿಶೇಷವೆಂದರೆ ಈ ಚಿತ್ರಕ್ಕಾಗಿ ರಕ್ಷಿತ್‌ ಶೆಟ್ಟಿ 8 ಪ್ಯಾಕ್‌ ಮಾಡುತ್ತಿದ್ದಾರೆ. ಈಗಾಗಲೇ ವರ್ಕೌಟ್‌ ಆರಂಭಿಸಿದ್ದು, ಚಿತ್ರೀಕರಣ ಆರಂಭವಾಗುವ ಹೊತ್ತಿಗೆ ಕಟ್ಟುಮಸ್ತಾಗಿರಲಿದ್ದಾರೆ. ಚಿತ್ರದ ದೃಶ್ಯವೊಂದಕ್ಕಾಗಿ 8 ಪ್ಯಾಕ್‌ ಮಾಡುತ್ತಿದ್ದು, ಸದ್ಯ ರಕ್ಷಿತ್‌ ವರ್ಕೌಟ್‌ ಜೋರಾಗಿ ಸಾಗುತ್ತಿದೆ.

"ಅವನೇ ಶ್ರೀಮನ್ನಾರಾಯಣ' ಚಿತ್ರದಲ್ಲಿ ರಕ್ಷಿತ್‌ ಶೆಟ್ಟಿ ಐದು ಗೆಟಪ್‌ಗ್ಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರಂತೆ. ಚಿತ್ರದಲ್ಲಿ ಅವರದ್ದು ಭ್ರಷ್ಟ ಪೊಲೀಸ್‌ ಅಧಿಕಾರಿಯ ಪಾತ್ರ. 80ರ ದಶಕದ ಉತ್ತರ ಕರ್ನಾಟಕದ ಊರೊಂದರಲ್ಲಿ ನಡೆಯುವ ಕಾಲ್ಪನಿಕ ಘಟನೆಯನ್ನಿಟ್ಟುಕೊಂಡು ಈ ಚಿತ್ರ ಮಾಡಲಾಗುತ್ತಿದೆ.

ಈ ಚಿತ್ರದಲ್ಲಿ ರಕ್ಷಿತ್‌ಗೆ ನಾಯಕಿಯಾಗಿ ಸಾನ್ವಿ ಶ್ರೀವಾತ್ಸವ್‌ ನಟಿಸುತ್ತಿದ್ದು, ಅಚ್ಯುತ್‌ ಕುಮಾರ್‌ ಸಹ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಇನ್ನು ಚಿತ್ರವನ್ನು ಪುಷ್ಕರ, ಪ್ರಕಾಶ್‌ (ರಂಗಿ ತರಂಗ) ಮತ್ತು ರಕ್ಷಿತ್‌ ಸೇರಿ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಸಚಿನ್‌ ನಿರ್ದೇಶಿಸುತ್ತಿದ್ದಾರೆ.

Trending videos

Back to Top