CONNECT WITH US  

ನಾಯಕ-ನಾಯಕಿ ಇರದ ಚಿತ್ರಕ್ಕೆ ಹಾಸ್ಯವೇ ಎಲ್ಲಾ...

ಭೂತಯ್ಯನ ಮೊಮ್ಮಗನ ಸೆಕೆಂಡ್‌ ಟ್ರೇಲರ್‌ ರಿಲೀಸ್‌ ಮಾಡಿದ ಕಿಟ್ಟಿ

1974ರಲ್ಲಿ ಸಿದ್ಧಲಿಂಗಯ್ಯ ನಿರ್ದೇಶನದ "ಭೂತಯ್ಯನ ಮಗ ಅಯ್ಯು' ಬಿಡುಗಡೆಯಾಗಿ ಕನ್ನಡ ಚಿತ್ರರಂಗದಲ್ಲಿ ಇತಿಹಾಸ ಬರೆದಿದ್ದು ಎಲ್ಲರಿಗೂ ಗೊತ್ತು. ವಿಷ್ಣುವರ್ಧನ್‌, ಲೋಕೇಶ್‌ ಹಾಗೂ ಎಂ.ಪಿ.ಶಂಕರ್‌ ಅಭಿನಯದ ಚಿತ್ರ ಎವರ್‌ಗ್ರೀನ್‌ ಅನ್ನುವುದೂ ಗೊತ್ತು. ಅದೇ ಶೀರ್ಷಿಕೆ ಹೊತ್ತ "ಭೂತಯ್ಯನ ಮೊಮ್ಮಗ ಅಯ್ಯು' ಎಂಬ ಚಿತ್ರ ಶುರುವಾಗಿ, ಮುಗಿದಿದ್ದೂ ಗೊತ್ತಿದೆ. ಹೊಸ ಸುದ್ದಿ ಅಂದರೆ, ಇತ್ತೀಚೆಗೆ ಶ್ರೀನಗರ ಕಿಟ್ಟಿ ಆ ಚಿತ್ರದ ಎರಡನೇ ಟ್ರೇಲರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಿರ್ದೇಶಕ ನಾಗರಾಜ್‌ ಪೀಣ್ಯ ಅವರು ಈಗಾಗಲೇ ಬಿಡುಗಡೆ ಮಾಡಿದ ಚಿತ್ರದ ಮೊದಲ ಟ್ರೇಲರ್‌ ಬಗ್ಗೆ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಅದೇ ಖುಷಿಯಲ್ಲಿ ಅವರು ನಟ ಶ್ರೀನಗರ ಕಿಟ್ಟಿ ಅವರಿಂದ ಎರಡನೇ ಟ್ರೇಲರ್‌ ಬಿಡುಗಡೆ ಮಾಡಿಸಿದ್ದಾರೆ. ಟ್ರೇಲರ್‌ ಬಿಡುಗಡೆ ಮಾಡಿದ ಕಿಟ್ಟಿ, ಕನ್ನಡದಲ್ಲಿ "ಭೂತಯ್ಯನ ಮೊಮ್ಮಗ ಅಯ್ಯು' ಜೋರು ಸದ್ದು ಮಾಡಲಿ' ಎಂದು ಹಾರೈಸಿದ್ದಾರೆ. ಚಿತ್ರಕ್ಕೆ "ಯು/ಎ' ಪ್ರಮಾಣಪತ್ರ ಸಿಕ್ಕಿದೆ. 

ಚಿತ್ರದ ವಿಶೇಷವೆಂದರೆ, ಇಲ್ಲಿ ನಾಯಕ ಇಲ್ಲ, ನಾಯಕಿಯೂ ಇಲ್ಲ. ಕೇವಲ ಹಾಸ್ಯ ಕಲಾವಿದರೇ ತುಂಬಿರುವ ಚಿತ್ರದಲ್ಲಿ ಕಥೆಯೇ ನಾಯಕ, ನಾಯಕಿ ಎಂಬುದು ನಿರ್ದೇಶಕರ ಮಾತು. ಹಳ್ಳಿ ಸೊಗಡಿನಲ್ಲೇ ಸಾಗುವ ಈ ಸಿನಿಮಾದ ತುಂಬ ಹಾಸ್ಯ ಕಲಾವಿದರ ದಂಡೇ ಇರಲಿದೆ. ಚಿಕ್ಕಣ್ಣ, ಹೊನ್ನವಳ್ಳಿ ಕೃಷ್ಣ, ಬುಲೆಟ್‌ ಪ್ರಕಾಶ್‌, ತಬಲಾ ನಾಣಿ, ಶ್ರುತಿ ಹರಿಹರನ್‌, ಪ್ರಶಾಂತ್‌ ಸಿದ್ಧಿ, ಗಿರಿಜಾ ಲೋಕೇಶ್‌, ಕೀರ್ತಿರಾಜ್‌, ಉಮೇಶ್‌ ಇತರರು ನಟಿಸಿದ್ದಾರೆ.

ಚಿತ್ರಕ್ಕೆ ಏಳು ಮಂದಿ ಹಣ ತೊಡಗಿಸಿದ್ದಾರೆ. ವರಪ್ರಸಾದ್‌, ರವಿಶಂಕರ್‌, ಅನಿಲ್‌, ಸುನಿಲ್‌, ಹನುಮಂತ್‌ರಾಜು, ಹರೀಶ್‌, ವೆಂಕಟೇಶ್‌ ನಿರ್ಮಾಪಕರಾಗಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದರೆ, ನಂದಕುಮಾರ್‌ ಕ್ಯಾಮೆರಾ ಹಿಡಿದಿದ್ದಾರೆ. ಮಾರ್ಚ್‌ನಲ್ಲಿ ಚಿತ್ರ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.

Trending videos

Back to Top