CONNECT WITH US  

3 ಪೆಗ್‌ ಹಾಡು ಮಾಡಿದ್ದು ಚಂದನ್‌ ಶೆಟ್ಟಿ ಅಲ್ಲ

ಹಾಡು ಮಾಡಿದ್ದು ನಾನೇ ಅಂತಾರೆ ವಿಜೇತ್‌ ಕೃಷ್ಣ

"ಮೂರೇ ಮೂರು ಪೆಗ್‌ಗೆ ತಲೆ ಗಿರಗಿರ ಗಿರಗಿರ ಅಂದಿದೆ...' "3 ಪೆಗ್‌' ಆಲ್ಬಂನ ಅತ್ಯಂತ ಜನಪ್ರಿಯವಾದ ಈ ರ್ಯಾಪ್‌ ಸಾಂಗ್‌ ಕೇಳಿದಾಕ್ಷಣ, ಎಲ್ಲರಿಗೂ ಚಂದನ್‌ಶೆಟ್ಟಿ ನೆನಪಾಗುತ್ತಾರೆ. ಇದೊಂದೇ ಹಾಡಿನ ಮೂಲಕ ಚಂದನ್‌ಶೆಟ್ಟಿ ಸುದ್ದಿಯಾಗಿದ್ದಂತೂ ಸುಳ್ಳಲ್ಲ. ಆದರೆ, ಈ ಹಾಡು ಸೂಪರ್‌ಹಿಟ್‌ ಆಗೋಕೆ ಕಾರಣ ಚಂದನ್‌ಶೆಟ್ಟಿ ಒಬ್ಬರೇ ಕಾರಣವಲ್ಲ, ತಾವೂ ಕಾರಣ ಅಂತ ಯುವ ಸಂಗೀತ ನಿರ್ದೇಶಕ ವಿಜೇತ್‌ ಕೃಷ್ಣ.

ಹಾಗಂತ ಸ್ವತಃ ಅವರೇ ಮಾಧ್ಯಮ ಮುಂದೆ ಹೇಳಿಕೊಂಡಿದ್ದಾರೆ. ಈ ವಿಜೇತ್‌ ಕೃಷ್ಣ. ಇವರು ಬೇರಾರೂ ಅಲ್ಲ, ಅರ್ಜುನ್‌ ಸರ್ಜಾ ಕುಟುಂಬದ ಪ್ರತಿಭೆ. ಇಂದು "ಮೂರೇ ಮೂರು ಪೆಗ್‌ಗೆ ...' ಹಾಡಿನಲ್ಲಿ ಅವರ ಶ್ರಮವೂ ಇದೆ. ಆದರೆ, ಅದೇಕೋ, ವಿಜೇತ್‌ ಕೃಷ್ಣ ಅವರ ಹೆಸರು ಮಾತ್ರ ಎಲ್ಲೂ ಕೇಳಿಬರುತ್ತಿಲ್ಲ. ಬಹಳಷ್ಟು ಜನರಿಗೆ "3 ಪೆಗ್‌' ಹಾಡು ಹುಟ್ಟಿಕೊಂಡಿದ್ದು ವಿಜೇತ್‌ಕೃಷ್ಣ ಅವರಿಂದ ಅನ್ನೋದು ಗೊತ್ತಿಲ್ಲ.

ಆ ಕುರಿತು, ಸ್ವತಃ ವಿಜೇತ್‌ ಕೃಷ್ಣ ಅವರೇ ಪತ್ರಕರ್ತರ ಜೊತೆ ಮಾತನಾಡಿದ್ದಾರೆ. "3 ಪೆಗ್‌' ಆಲ್ಬಂ ಸಾಂಗ್‌ ಹಿಟ್‌ ಆಗಿದೆ. ಆ ಬಗ್ಗೆ ಖುಷಿಯೂ ಇದೆ. ಆದರೆ, ಚಂದನ್‌ ಶೆಟ್ಟಿ ಅವರ ಹೆಸರೇ ಕೇಳಿಬರುತ್ತಿದೆ. ಸಹಜವಾಗಿಯೇ ತೆರೆಯ ಮೇಲೆ ಯಾರು ಕಾಣುತ್ತಾರೋ, ಅವರೇ ಸುದ್ದಿಯಾಗುತ್ತಾರೆ. ತೆರೆ ಹಿಂದೆ ಕೆಲಸ ಮಾಡಿದವರ್ಯಾರೂ ಹೆಚ್ಚು ಸುದ್ದಿಯಾಗದೆ ತೆರೆಹಿಂದೆ ಸರಿಯುತ್ತಾರೆ. ಆ ಹಾಡಿಗೆ ಸಂಗೀತ ಕೊಟ್ಟಿದ್ದೇನೆ ಎಂಬ ಹೆಮ್ಮೆ ನನ್ನದು' ಎನ್ನುತ್ತಾರೆ ವಿಜೇತ್‌.

ವಿಜೇತ್‌ ಹೇಳುವಂತೆ, "3 ಪೆಗ್‌'ಗೆ ಅವರು ಸಂಗೀತ ಸಂಯೋಜಿಸಿದ್ದು 2010ರಲ್ಲಂತೆ. "ಆಗಿನ್ನೂ ಚಂದನ್‌ಹಾಡೋಕೆ ಬರ್ತಾ ಇರಲಿಲ್ಲ. ಒಮ್ಮೆ ಸಿಕ್ಕಾಗ, ಯಾವ ಮ್ಯೂಸಿಕ್‌ ಮಾಡಿದ್ದೀಯ ಅಂದಾಗ, ಸೂರಜ್‌ ಮನೆಯಲ್ಲೇ ನಾನು ಮಾಡಿದ್ದ ಒಂದಷ್ಟು ಟ್ಯೂನ್ಸ್‌ ಕೇಳಿಸಿದ್ದೆ. ಆಗಲೇ, 2012 ರಲ್ಲಿ "ಮೂರೇ ಮೂರು ಪೆಗ್‌ಗೆ ತಲೆ ...' ಸಾಹಿತ್ಯ ಬರೆದ. ಸುಮ್ಮನೆ ರೆಕಾರ್ಡ್‌ ಮಾಡಿದ್ವಿ. ಚೆನ್ನಾಗಿ ಬಂದಿತ್ತು. ಆದರೆ, ಟೀಮ್‌ ಇರಲಿಲ್ಲ.

ಕ್ಯಾಮೆರಾಮೆನ್‌, ಎಡಿಟರ್‌ ಯಾರೂ ಗೊತ್ತಿಲ್ಲದ್ದರಿಂದ ಆರು ವರ್ಷ ಹಾಗೇ ಆ ಹಾಡು ಮಾಡಿಕೊಂಡಿದ್ದೆ. ನಂತರ ಒಂದು ಟೀಮ್‌ ರೆಡಿಯಾಯ್ತು. ಪಬ್‌ಗಳಲ್ಲಿ ಕನ್ನಡ ಸಾಂಗ್‌ ಕೇಳುವಂತಾಗಬೇಕು ಅಂತ "3ಪೆಗ್‌' ರ್ಯಾಪ್‌ ಸಾಂಗ್‌ ಮಾಡಿದ್ವಿ. 2016ರಲ್ಲಿ ಆ ಹಾಡು ಚಿತ್ರೀಕರಣಗೊಂಡು ಹೊರಬಂತು. ಅಷ್ಟೆಲ್ಲಾ ಶ್ರಮ ಹಾಕಿದ್ದಕ್ಕೆ ಎಲ್ಲೂ ಹೆಸರು ಬಂದಿಲ್ಲ' ಎಂದು ಬೇಸರಿಸಿಕೊಳ್ಳುತ್ತಾರೆ ವಿಜೇತ್‌.

ಈಗ ಚಂದನ್‌ಗೆ ಕಾಲ್‌ ಮಾಡಿದರೂ, ಸರಿಯಾಗಿ ಪ್ರತಿಕ್ರಿಯಿಸದೆ, ಬೇರೆಯವರಿಗೆ ಫೋನ್‌ ಕೊಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ ವಿಜೇತ್‌. "ಬಹಳ ಬೇಸರವಾಯ್ತು. ನಾನೂ ಸುಮ್ಮನಾದೆ. ಎಷ್ಟೋ ಜನ, ನಾನು ಹೇಳಿದಾಗಲಷ್ಟೇ, "ಆ ಹಾಡಿಗೆ ನೀನಾ ಸಂಗೀತ ಕೊಟ್ಟಿರೋದು' ಅಂತ ಹೇಳ್ಳೋರು. ಒಂದಂತೂ ನಿಜ, ಫ್ರೆಂಡ್‌ಶಿಪ್‌ನಲ್ಲಿ ಕೆಲಸ ಮಾಡಿದ್ವಿ.ಆ ಪ್ರಾಜೆಕ್ಟ್ ಫೈಲ್‌ ನನ್ನ ಬಳಿ ಇದೆ. ರೈಟ್ಸ್‌ ನನ್ನದೇ. ಅದರ ಸಂಪಾದನೆ ಎಷ್ಟಾಗಿದೆ ಅನ್ನುವುದು ಗೊತ್ತಿಲ್ಲ.

ನನಗೆ ಕೇವಲ 15 ಸಾವಿರ ರುಪಾಯಿ ಸಂಭಾವನೆ ಬಂದಿದ್ದು ಬಿಟ್ಟರೆ ಬೇರೇನೂ ಇಲ್ಲ. ಸಾಕಷ್ಟು ಸ್ಟೇಜ್‌ ಶೋಗಳು ನಡೆದಿವೆ. ಹಾಡು ಪಾಪ್ಯುಲರ್‌ ಆಗಿದೆ. ಆದರೆ, ಚಂದನ್‌ ಶೆಟ್ಟಿ ಎಲ್ಲೂ ನನ್ನ ಹೆಸರು ಪ್ರಸ್ತಾಪ ಮಾಡುತ್ತಿಲ್ಲವೇಕೆ ಎಂಬುದು ಗೊತ್ತಿಲ್ಲ. ನಾನು ಕೇಳ್ಳೋಕು ಹೋಗಿಲ್ಲ. ನಾನೊಬ್ಬ ಸಂಗೀತ ನಿರ್ದೇಶಕ, ಆ ಹಾಡಿಗಿಂತಲೂ ಚೆನ್ನಾಗಿ ಇನ್ನೊಂದು ಹಾಡನ್ನು ಕಟ್ಟಿಕೊಡಬಲ್ಲೆ' ಎಂದು ವಿಶ್ವಾಸದಿಂದ ಹೇಳುತ್ತಾರೆ ವಿಜೇತ್‌.

ಇನ್ನು ಹಣದ ವಿಷಯದ ಬಗ್ಗೆ ಮಾತನಾಡುವ ಅವರು, "ಯೂ ಟ್ಯೂಬ್‌ನಲ್ಲಿ ಸಾಕಷ್ಟು ವೀಕ್ಷಣೆಯಾಗಿದೆ. ಎಷ್ಟು ಹಣ ಬಂದಿದೆ ಎಂಬ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ನನಗೆ ಸಂಭಾವನೆ ಹೋಗಲಿ, ಮಾಡಿದ ಕೆಲಸ ಬಗ್ಗೆ ಹೆಸರು ಕೂಡ ಇಲ್ಲ. ಆರಂಭದಲ್ಲಿ ಕೆಲಸ ಮಾಡುವಾಗ, ಇದರಿಂದ ಬಂದ ಹಣವನ್ನು ಎಲ್ಲರೂ ಹಂಚಿಕೊಳ್ಳೋಣ ಎಂಬ ಮಾತಾಗಿತ್ತು.

ಆದರೆ, ಫ್ರೆಂಡ್‌ಶಿಪ್‌ನಲ್ಲಿ ಅಗ್ರಿಮೆಂಟ್‌ ಇರದೆ, ಬಾಯಿ ಮಾತಲ್ಲಿ ಮಾತುಕತೆ ನಡೆದಿತ್ತು. ಈಗ ಆ ವಿಷಯ ಕ್ಲೋಸ್ಡ್ ಬುಕ್‌. ಮೊದಲು "ಹಾಳಾಗೋದೆ' ಎಂಬ ಆಲ್ಬಂಗೂ ನಾನು ಪ್ರೋಗ್ರಾಮಿಂಗ್‌ ಮಾಡಿದೆ. ಅಲ್ಲೂ ಕೂಡ ಫ್ರೆಂಡ್‌ಶಿಪ್‌ಗಾಗಿ ಕೆಲಸ ಮಾಡಿದೆ.  ನನ್ನ ಪ್ರಕಾರ, ತೆರೆಮೇಲೆ ಕಾಣಿಸಿಕೊಂಡವರಷ್ಟೇ ಹೈಲೈಟ್‌ ಆಗ್ತಾರೆ, ಹಿಂದೆ ಕೆಲಸ ಮಾಡಿದವರ್ಯಾರು ಎಂಬ ಬಗ್ಗೆ ತಲೆಕೆಡಿಸಿಕೊಳ್ಳಲ್ಲ.

ಅದೇ ಬೇಸರ. ಹಾಗಂತ ಸುಮ್ಮನೆ ಕೂರಲ್ಲ. ಮುಂದೆ, ಹೊಸ ಪ್ರತಿಭೆಗಳನ್ನು ಹುಡುಕಿ ರ್ಯಾಪ್‌ ಸಾಂಗ್‌ ಮಾಡ್ತೀನಿ. ಸದ್ಯಕ್ಕೆ ಸಂಗೀತ ನೀಡಿರುವ "ರವಿ ಹಿಸ್ಟರಿ', "ಪ್ರಯಾಣಿಕರ ಗಮನಕ್ಕೆ', "ಹಾಫ್ ಬಾಯಲ್ಡ್‌' ಮತ್ತು "ಗ್ರೂಫಿ' ಎಂಬ ಚಿತ್ರಗಳು ಬಿಡುಗಡೆಗೆ ರೆಡಿಯಾಗುತ್ತಿವೆ' ಎಂದು ಹೇಳುತ್ತಾರೆ ವಿಜೇತ್‌

ನನ್ನಿಂದ ಚಿರು; ಅವರಿಂದ ಅರ್ಜುನ್‌ ಜನ್ಯ ಪರಿಚಯ
ಇನ್ನು ಚಂದನ್‌ ಶೆಟ್ಟಿಗೆ ಅರ್ಜುನ್‌ ಜನ್ಯ ಅವರ ಪರಿಚಯವಾಗಿದ್ದರ ಕುರಿತು ಮಾತನಾಡುವ ಅವರು, "2008 ರಲ್ಲಿ ನಾನು, ಧ್ರುವ ಸರ್ಜಾ, ಸೂರಜ್‌, ಚಂದನ್‌ ಎಲ್ಲರೂ ಸೇರಿ "ಡೌನ್ಸ್‌ ಆರ್‌ ರಿದಮ್ಸ್‌' ಎಂಬ ಆಲ್ಬಂ ಮೂಲಕ ಕೆರಿಯರ್‌ ಶುರು ಮಾಡಿದ್ವಿ. ಮೈಸೂರಲ್ಲಿ ಚಂದನ್‌ ವಿದ್ಯಾವಿಕಾಸ್‌ ಕಾಲೇಜ್‌ನಲ್ಲಿ ಬಿಬಿಎಂ ಓದುದುತ್ತಿದ್ದ.

ನಾನು ಡಿಪ್ಲೊಮೋ ಓದುತ್ತಿದ್ದೆ. ಆಗ ಸ್ಟೇಜ್‌ ಮೇಲೆ ಚಂದನ್‌ ಪರ್‌ಫಾರ್ಮ್ ಮಾಡುತ್ತಿದ್ದ. ಬ್ಯಾಕ್‌ ಸ್ಟೇಜ್‌ಗೆ ಹೋಗಿ ನಾವಂದು ಆಲ್ಬಂ ಮಾಡ್ತಾ ಇದೀವಿ, ಇಂಟ್ರೆಸ್ಟ್‌ ಇದೆಯಾ ಅಂತ ಕೇಳಿದಾಗ, ಬರ್ತೀನಿ ಮಾಡೋಣ ಅಂದ್ರು. ಅಲ್ಲಿಂದ ನಮ್ಮೊಂದಿಗೆ ಚಂದನ್‌ ಆಲ್ಬಂನಲ್ಲಿ ಕೆಲಸ ಮಾಡೋಕೆ ಶುರುಮಾಡಿದ. ನಮ್ಮೊಂದಿರುವಾಗಲೇ, ಧ್ರುವ ಚಿರಂಜೀವಿ ಅವರ ಪರಿಚಯವಾಯ್ತು.

ಅಲ್ಲಿಂದ ಚಿರು, ಅರ್ಜುನ್‌ ಜನ್ಯಾ ಅವರ ಪರಿಚಯ ಮಾಡಿಸಿದರು. ಇಬ್ಬರೂ ಅರ್ಜುನ್‌ ಜನ್ಯ ಜತೆ ಕೆಲಸ ಮಾಡುತ್ತಿದ್ದೆವು. ಅದಕ್ಕೂ ಮುನ್ನ 2004 ರಲ್ಲೇ ನಾವು ಕನ್ನಡ ರ್ಯಾಪ್‌ ಸಾಂಗ್‌ ಪರಿಚಯ ಮಾಡಿದ್ವಿ, ನಾನು ರಾಕೇಶ್‌ ಅಡಿಗ, ಸೂರಜ್‌ ಇತರೆ ಗೆಳೆಯರು ರ್ಯಾಪ್‌ ಸಾಂಗ್‌ ಕಾನ್ಸೆಪ್ಟ್ ಹುಟ್ಟುಹಾಕಿದ್ದೆವು' ಎನ್ನುತ್ತಾರೆ ವಿಜೇತ್‌ ಕೃಷ್ಣ.

Trending videos

Back to Top