CONNECT WITH US  

ಬಾಹುಬಲಿ ನೋಡಿ ದಕ್ಷಿಣ ಭಾರತದ ಚಿತ್ರಗಳ ಆಸೆ ಹುಟ್ಟಿತು

ನೋ ಸ್ಮೋಕಿಂಗ್‌ ಬೇಬಿ ಸಿಮ್ರಾನ್‌ ಹೇಳಿಕೆ

ನೀವು ಚಿತ್ರಮಂದಿರಕ್ಕೆ ಹೋದ ಕೂಡಲೇ ಮೊದಲು ನಿಮಗೆ ಸಿನಿಮಾಕ್ಕಿಂತ ಮುಂಚೆ "ಧೂಮಪಾನ ಹಾನಿಕಾರ' ಎಂಬ ಜಾಹೀರಾತು ಕಾಣುತ್ತದೆ. ತಂದೆ ಸಿಗರೇಟು ಸೇದುವುದನ್ನೇ ನೋಡುವ ಪುಟ್ಟ ಹೆಣ್ಣುಮಗಳು, ಹಿನ್ನೆಲೆಯಲ್ಲಿ "ಖುಷಿ ಯಾರಿಗೆ ಬೇಡ, ಧೂಮ್ರಪಾನಕ್ಕೆ ಬೆಲೆ ತೆರಬೇಕಾದಿತು' ಎಂಬ ಮಾತು ಕೇಳಿಬರುತ್ತಿದೆ. ಆ ಜಾಹೀರಾತಿನಲ್ಲಿ ಪುಟ್ಟ ಬಾಲಕಿಯಾಗಿ ಕಾಣಿಸಿಕೊಂಡವರು ಸಿಮ್ರಾನ್‌ ನಾಟೇಕರ್‌.

ಎಂಟು ವರ್ಷವಿರುವಾಗ ಆ ಜಾಹೀರಾತಿನಲ್ಲಿ ಸಿಮ್ರಾನ್‌ ಕಾಣಿಸಿಕೊಂಡಿದ್ದರು. ಇವತ್ತು ಸಿಮ್ರಾನ್‌ ನಾಯಕಿಯಾಗಿದ್ದಾರೆ. ಆದರೆ, ಚಿತ್ರಮಂದಿರಗಳಲ್ಲಿ ಇವತ್ತಿಗೂ ಅದೇ ಜಾಹೀರಾತು. ಕನ್ನಡದ "ಕಾಜಲ್‌' ಚಿತ್ರದಲ್ಲಿ ಈ ನೋ ಸ್ಮೋಕಿಂಗ್‌ ಬೇಬಿ ಸಿಮ್ರಾನ್‌ ನಟಿಸಿದ್ದಾರೆ. ಮೊದಲ ಬಾರಿಗೆ ಕನ್ನಡ ಚಿತ್ರದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಕಾಲಿಟ್ಟಿರುವ ಸಿಮ್ರಾನ್‌ ಜೊತೆಗಿನ ಚಿಟ್‌ಚಾಟ್‌ ಇಲ್ಲಿದೆ ...
  
* ನೀವು ಎಂಟು ವರ್ಷವಿದ್ದಾಗ ಚಿತ್ರೀಕರಿಸಿದ ಜಾಹೀರಾತು ಈಗಲೂ ಪ್ರಸಾರವಾಗುತ್ತಿದೆ?
ಹೌದು, ನಾನು ಎಂಟು ವರ್ಷವಿರುವಾಗ ಮಾಡಿದ ಮೊದಲ ಜಾಹೀರಾತಿದು. ಆ ಜಾಹೀರಾತು ಚಿತ್ರೀಕರಣವಾಗಿ ನಾಲ್ಕು ವರ್ಷ ಅದನ್ನು ಬಳಸಿರಲಿಲ್ಲ. ನಾನು ಕೂಡಾ ಮರೆತು ಬಿಟ್ಟಿದ್ದೆ. ಆ ನಂತರ ಹಾಕಿದರು. ಅದೊಂದು ದಿನ ನನ್ನ ಅಮ್ಮನ ಫ್ರೆಂಡ್‌ ಫೋನ್‌ ಮಾಡಿ, "ನಿಮ್ಮ ಮಗಳ ಜಾಹೀರಾತು ಬರುತ್ತಿದೆ' ಎಂದು ಹೇಳಿದಾಗಲೇ ನನಗೆ ಈ ಜಾಹೀರಾತು ಬಳಕೆಯಾಯಿತೆಂದು ಗೊತ್ತಾಗಿದ್ದು.

* ಆ ಜಾಹೀರಾತು ನೋಡಿದಾಗ ನಿಮಗೆ ಹೇಗನಿಸುತ್ತಿದೆ?
ಖುಷಿಯಾಗುತ್ತಿದೆ. ಸಿಗರೇಟು ಸೇದಬೇಡಿ ಎಂದು ಹೇಳುವ ಜಾಹೀರಾತಾಗಿರುವುದರಿಂದ ನನಗೆ ಹೆಮ್ಮೆ ಇದೆ. ಎಲ್ಲರೂ ನನ್ನನ್ನ "ನೋ ಸ್ಮೋಕಿಂಗ್‌ ಹುಡುಗಿ' ಎಂದು ಕರೆಯುತ್ತಾರೆ.

* ನಿಮ್ಮ ಬಣ್ಣದ ಬದುಕಿನ ಪಯಣದ ಬಗ್ಗೆ ಹೇಳಿ?
ನಾನು 150ಕ್ಕೂ ಹೆಚ್ಚು ಜಾಹೀರಾತು ಮಾಡಿದ್ದೇನೆ. 4 ಟಿವಿ ಶೋ, ಕೆಲವು ಹಿಂದಿ ಸಿನಿಮಾ ಹಾಗೂ ಒಂದು ಗುಜರಾತಿ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದೇನೆ. 

* ಕನ್ನಡ ಸಿನಿಮಾ ಮಾಡಲು ಕಾರಣ?
ನನಗೆ ಹಿಂದಿನಿಂದಲೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇತ್ತು. ಆದರೆ ಹೇಗೆ ಮತ್ತು ಯಾರನ್ನು ಸಂಪರ್ಕಿಸಬೇಕೆಂದು ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ ನನಗೆ "ಕಾಜಲ್‌' ಚಿತ್ರದ ಅವಕಾಶ ಬಂತು. ಕಥೆ ಹಾಗೂ ನನ್ನ ಪಾತ್ರ ಇಷ್ಟವಾಗಿ ಒಪ್ಪಿಕೊಂಡೆ.

* ದಕ್ಷಿಣ ಭಾರತೀಯ ಚಿತ್ರಗಳಲ್ಲಿ ನಟಿಸಬೇಕೆಂಬ ನಿಮ್ಮ ಕನಸಿಗೆ ಕಾರಣವೇನು?
ನಿಜ ಹೇಳಬೇಕೆಂದರೆ ನಾನು "ಬಾಹುಬಲಿ' ಚಿತ್ರ ನೋಡಿ ಫಿದಾ ಆಗಿದ್ದೆ. ಆ ನಂತರ ನನಗೆ ಸೌತ್‌ ಇಂಡಿಯನ್‌ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಬಂತು.

* ನೀವು "ಕಾಜಲ್‌' ಚಿತ್ರಕ್ಕಾಗಿ ಮೂರು ಹಿಂದಿ ಸಿನಿಮಾಗಳನ್ನು ಬಿಟ್ಟಿದೀರಂತೆ?
ಹೌದು, ನಾನು ಈ ಕಥೆ ಕೇಳಿ ಒಪ್ಪಿಕೊಂಡ ಸಮಯದಲ್ಲೇ ಆ ಸಿನಿಮಾಗಳ ಅವಕಾಶ ಬಂತು. ಆದರೆ, ನನಗೆ ಸೌತ್‌ ಇಂಡಿಯನ್‌ ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದರಿಂದ ನಾನು ಹಿಂದಿ ಸಿನಿಮಾಗಳನ್ನು ಬಿಟ್ಟೆ.

* "ಕಾಜಲ್‌' ಚಿತ್ರದಲ್ಲಿ ನಿಮ್ಮ ಪಾತ್ರವೇನು?
ನಾನಿಲ್ಲಿ ಅಮೆರಿಕಾದಿಂದ ಇಲ್ಲಿನ ಹಳ್ಳಿಯೊಂದಕ್ಕೆ ಬರುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಇಲ್ಲಿಗೆ ಬಂದ ನಂತರ ಏನೆಲ್ಲಾ ಆಗುತ್ತದೆ, ಅಮೆರಿಕಾದಲ್ಲಿ ಹುಟ್ಟಿ ಬೆಳೆದ ನಾನು ಇಲ್ಲಿನ ವಾತಾರವರಣಕ್ಕೆ ಹೇಗೆ ಹೊಂದಿಕೊಳ್ಳುತ್ತೇನೆ ಎಂಬ ಅಂಶದೊಂದಿಗೆ ನನ್ನ ಪಾತ್ರ ಸಾಗುತ್ತದೆ. 

* ಮುಂದೆ ಕನ್ನಡದಲ್ಲಿ ಅವಕಾಶ ಸಿಕ್ಕರೆ ನಟಿಸುತ್ತೀರಾ?
ಖಂಡಿತಾ ನಟಿಸುತ್ತೇನೆ. ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಆಸೆ ನನಗಿದೆ. 

ಇಂದು ಹೆಚ್ಚು ಓದಿದ್ದು

ಚುನಾವಣೆ ಹಿನ್ನೆಲೆಯಲ್ಲಿ ಜೈಪುರದಲ್ಲಿ ಬುಧವಾರ ಬಿಜೆಪಿ ಮತ್ತು ಕಾಂಗ್ರೆಸ್‌ಗಾಗಿ ಪ್ರಚಾರ ಸಾಮಗ್ರಿಗಳನ್ನು ಸಿದ್ಧಪಡಿಸುತ್ತಿರುವ ಕಾರ್ಯಕರ್ತರು.

Nov 15, 2018 07:29am

Trending videos

Back to Top