CONNECT WITH US  
echo "sudina logo";

ಮಯೂರಿ ಹೊಸ ಸಿಗ್ನೇಚರ್‌

ಕೈಯಲ್ಲೀಗ ಆರು ಸಿನಿಮಾ

ನಟಿ ಮಯೂರಿ ಕೈಯಲ್ಲಿ ಐದು ಸಿನಿಮಾಗಳಿರುವ ಮೂಲಕ ಸಿಕ್ಕಾಪಟ್ಟೆ ಬಿಝಿಯಾಗಿದ್ದಾರೆಂಬ ವಿಷಯವನ್ನು ಕೆಲ ದಿನಗಳ ಹಿಂದಷ್ಟೇ ನೀವು ಇದೇ ಬಾಲ್ಕನಿಯಲ್ಲಿ ಓದಿದ್ದೀರಿ. ಈಗ ಅದಕ್ಕೆ ಮತ್ತೂಂದು ಚಿತ್ರ ಸೇರ್ಪಡೆಯಾಗಿದೆ. ಅದು "ಸಿಗ್ನೇಚರ್‌'. ಹೌದು, "ಸಿಗ್ನೇಚರ್‌' ಎಂಬ ಹೊಸ ಸಿನಿಮಾವನ್ನು ಮಯೂರಿ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಗುರು ಮದ್ಲೇಸರ ನಿರ್ದೇಶಕರಾಗುತ್ತಿದ್ದಾರೆ.

ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದಿದ್ದ ಗುರು ಅವರು "ಸಿಗ್ನೇಚರ್‌' ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಚಿತ್ರವನ್ನು ಪೂರ್ಣಿಮಾ ಭಾಸ್ಕರ್‌ ಪೂಜಾರಿ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ರಂಜಿತ್‌ ಎಂಬ ಹೊಸ ಮುಖ ನಾಯಕರಾಗಿ ನಟಿಸುತ್ತಿದ್ದು, ಸುಧಾರಾಣಿ ಇಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. 

ಚಿತ್ರದ ಕಥೆ ಲವ್‌ಸ್ಟೋರಿಯ ಜೊತೆಗೆ ಗಂಭೀರ ವಿಷಯವೊಂದನ್ನು ಕೂಡಾ ಹೊಂದಿದೆಯಂತೆ. ಜಿಲ್ಲಾಧಿಕಾರಿ ಹಾಗೂ ಮಾಜಿ ಮುಖ್ಯಮಂತ್ರಿಯೊಬ್ಬರ ನಡುವಿನ ಜಿದ್ದಾಜಿದ್ದಿ ಸೇರಿದಂತೆ ಅನೇಕ ಅಂಶಗಳು ಚಿತ್ರದಲ್ಲಿ ಪ್ರಮುಖವಾಗಿವೆಯಂತೆ. ಚಿತ್ರದಲ್ಲಿ ನಿರ್ಮಾಪಕರ ಮಗಳು ಬೇಬಿ ಮಾನ್ಯಾ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಇನ್ನು, ಮಯೂರಿ ಇಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಮಗಳಾಗಿ ಕಾಣಿಸಿಕೊಳ್ಳುತ್ತಿದ್ದು, ಅವರ ಪಾತ್ರ ತುಂಬಾ ಭಿನ್ನವಾಗಿದೆ ಎಂಬುದು ನಿರ್ದೇಶಕರ ಮಾತು.

ಚಿತ್ರಕ್ಕೆ ವಿ.ಮನೋಹರ್‌ ಅವರ ಸಂಗೀತ, ಜೀವನ್‌ ಗೌಡ ಛಾಯಾಗ್ರಹಣ, ವಿಶ್ವ ಸಂಕಲನವಿದೆ. ಉಡುಪಿ, ಮಲ್ಪೆ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದ್ದು, ಎರಡನೇ ಹಂತದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆಯಲಿದೆಯಂತೆ. ಅಂದಹಾಗೆ, ಈಗಾಗಲೇ ಮಯೂರಿ ಕೈಯಲ್ಲಿ "8 ಎಂಎಂ', "ನನ್ನ ಪ್ರಕಾರ', "ಆಟಕ್ಕುಂಟು ಲೆಕ್ಕಕ್ಕಿಲ್ಲ', "ರುಸ್ತುಂ' ಹಾಗೂ "ಮೌನಂ' ಚಿತ್ರಗಳಿದ್ದು, ಈಗ "ಸಿಗ್ನೇಚರ್‌' ಸೇರ್ಪಡೆಯಾಗಿದೆ. 

Trending videos

Back to Top