CONNECT WITH US  

ಹೊಸಬರ ಕಾರುಬಾರು: ಈ ವಾರ ತೆರೆಗೆ ಆರು

ಏಪ್ರಿಲ್‌ ಮೊದಲ ವಾರ ಆರು, ಎರಡನೇ ವಾರ ಮೂರು ಈಗ ಮೂರನೇ ವಾರ ಮತ್ತೆ ಆರು!  ಏನಿದು ಎಂದು ಯೋಚಿಸಬಹುದು. ಇದು ವಾರ ವಾರ ಬಿಡುಗಡೆಯಾದ ಸಿನಿಮಾಗಳ ಸಂಖ್ಯೆ. ಏಪ್ರಿಲ್‌ ಮೊದಲ ವಾರ ಆರು ಸಿನಿಮಾಗಳು ಬಿಡುಗಡೆಯಾಗಿದ್ದವು. "ಅಂಧಗಾರ', "ಹುಚ್ಚ-2', "ನಂಜುಂಡಿ ಕಲ್ಯಾಣ', "ಮದುವೆ ದಿಬ್ಬಣ', "ಜಯಮಹಲ್‌ ರಹಸ್ಯ' ಹಾಗೂ "ವರ್ತಮಾನ' ಚಿತ್ರಗಳು ಬಿಡುಗಡೆಯಾಗಿದ್ದವು.

ಎರಡನೇ ವಾರ (ಏ.13) "ಸೀಜರ್‌', "ದಳಪತಿ' ಜೊತೆಗೆ ಉತ್ತರ ಕರ್ನಾಟಕದಲ್ಲಿ ಬಿಡುಗಡೆಯಾಗಿ 25 ದಿನ ಪೂರೈಸಿದ "ಅಬ್ಬೆ ತುಮಕೂರು ಸಿದ್ಧಿಪುರುಷ ವಿಶ್ವಾರಾಧ್ಯರು'  ಚಿತ್ರ ಕಳೆದ ವಾರ ಬೆಂಗಳೂರಿನಲ್ಲಿ ಬಿಡುಗಡೆಯಾಗಿತ್ತು. ಹಾಗಾಗಿ ಮೂರು ಚಿತ್ರ ಎನ್ನಬಹುದು. ಈ ವಾರ ಮತ್ತೆ ಆರು ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ. "6 ಟು 6', "ಎಟಿಎಂ', "ರುಕ್ಕು', "ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು', "ಕೃಷ್ಣ ತುಳಸಿ' ಹಾಗೂ "ಸಾಗುವ ದಾರಿಯಲ್ಲಿ' ಚಿತ್ರಗಳು ಈ ವಾರ ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

ಈ ಮೂಲಕ ಹೊಸಬರ ಚಿತ್ರಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರೇಕ್ಷಕರದು. ನಿಮಗೆ ಗೊತ್ತಿರುವಂತೆ ಸದ್ಯಕ್ಕೆ ಕನ್ನಡದಲ್ಲಿ ಯಾವುದೇ ಸ್ಟಾರ್‌ಗಳ ಸಿನಿಮಾಗಳಿಲ್ಲ. ಕನ್ನಡದಿಂದ ಕನ್ನಡ ಚಿತ್ರಕ್ಕೆ ಯಾವುದೇ ಸ್ಪರ್ಧೆಯಿಲ್ಲ. ಈ ಕಾರಣದಿಂದಲೇ ಬಹುತೇಕ ಹೊಸಬರು ಈಗ ತಮ್ಮ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಸಿನಿಮಾ ಚೆನ್ನಾಗಿದ್ದರೆ ಅದೃಷ್ಟ ಖುಲಾಯಿಸಬಹುದೆಂಬ ನಂಬಿಕೆ ಹೊಸಬರದು.

ಅದಕ್ಕೆ ಪೂರಕವಾಗಿ ಹೊಸಬರ "ಗುಳ್ಟು' ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಮತ್ತೆ ಹೊಸಬರಲ್ಲಿ ನಂಬಿಕೆ ಮೂಡಿದೆ. ಮೇನಕದಲ್ಲಿ ತೆರೆಕಂಡಿದ್ದ ಚಿತ್ರ ಈಗ ಅಪರ್ಣದಲ್ಲಿದೆ. ಹೀಗೆ ಹೊಸಬರ ಚಿತ್ರವೊಂದಕ್ಕೆ ಚಿತ್ರರಂಗದಿಂದ ಹಾಗೂ ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೋತ್ಸಾಹ ಮತ್ತಷ್ಟು ಹೊಸಬರನ್ನು ಹುರಿದುಂಬಿಸಿದ್ದು ಸುಳ್ಳಲ್ಲ. ಅದೇ ಉತ್ಸಾಹದೊಂದಿಗೆ ಈಗ ತಮ್ಮ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.

ಈ ವಾರ ತೆರೆಕಾಣುತ್ತಿರುವ ಆರು ಚಿತ್ರಗಳು ಬಹುತೇಕ ಹೊಸಬರದೇ. "ಸಾಗುವ ದಾರಿಯಲ್ಲಿ' ಚಿತ್ರದ ನಾಯಕ ಅನೂಪ್‌ ಹಾಗೂ "ಕೃಷ್ಣ ತುಳಸಿ' ಚಿತ್ರದ ಸಂಚಾರಿ ವಿಜಯ್‌ ಹೊಸಬರಲ್ಲ ಅನ್ನೋದು ಬಿಟ್ಟರೆ ಉಳಿದಂತೆ ಆ ಚಿತ್ರದ ನಿರ್ದೇಶಕರು ಹಾಗೂ ತಂಡ ಹೊಸಬರಿಂದ ಕೂಡಿದೆ. 
 
ಯಾವ್ಯಾವ ಸಿನಿಮಾ, ಏನ್‌ ಕಥೆ
ಈ ವಾರ ತೆರೆಕಾಣುತ್ತಿರುವ "6 ಟು 6' ಸಿನಿಮಾದ ಬಗ್ಗೆ ಹೇಳುವುದಾದರೆ ಈ ಚಿತ್ರವನ್ನು ಶ್ರೀನಿವಾಸ್‌ ಶಿಡ್ಲಘಟ್ಟ ನಿರ್ದೇಶಿಸಿದ್ದಾರೆ. ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೂ ನಡೆಯುವಂತಹ ಘಟನೆಗಳನ್ನು ಇಟ್ಟುಕೊಂಡು ಚಿತ್ರ ಮಾಡಿರುವುದರಿಂದ, ಈ ಚಿತ್ರಕ್ಕೆ "6 ಟು 6' ಎಂಬ ಹೆಸರನ್ನು ಇಡಲಾಗಿದೆ. ಸ್ವರೂಪಿಣಿ ಹಾಗೂ ತಾರಕ್‌ ಪೊನ್ನಪ್ಪ ನಾಯಕ-ನಾಯಕಿಯಾಗಿ ಕಾಣಿಸಿಕೊಂಡಿದ್ದು, ಮಿಕ್ಕಂತೆ ಸುರೇಶ್‌ ಹೆಬ್ಳೀಕರ್‌, ಸದಾಶಿವ ಬ್ರಹ್ಮಾವರ್‌, ಮೈಸೂರು ರಮಾನಂದ್‌ ಸೇರಿದಂತೆ ಹಲವಾರು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಈ ವಾರ ತೆರೆಕಾಣುತ್ತಿರುವ "ಎಟಿಎಂ' ("ಅಟೆಂಪ್ಟ್ ಟು ಮರ್ಡರ್‌') ಚಿತ್ರ ತನ್ನ ಹೆಸರಿನಿಂದಲೇ ಗಮನ ಸೆಳೆದಿದೆ. ಅಮರ್‌ ಎನ್ನುವವರು ಈ ಚಿತ್ರದ ನಿರ್ದೇಶಕರು.  ಕೆಲ ವರ್ಷಗಳ ಹಿಂದೆ ನಡೆದ "ಎಟಿಎಂ' ದರೋಡೆಯನ್ನಿಟ್ಟುಕೊಂಡು ಈ ಸಿನಿಮಾದ ಕಥೆ ಮಾಡಿದ್ದಾರೆ ನಿರ್ದೇಶಕರು. ಹಾಗಂತ ಯಥಾವತ್‌ ಅದನ್ನೇ ಇಟ್ಟುಕೊಂಡು ಸಿನಿಮಾ ಮಾಡಿಲ್ಲವಂತೆ. ಅದಕ್ಕೊಂದಿಷ್ಟು ಸಿನಿಮೀಯ ಟ್ವಿಸ್ಟ್‌ಗಳನ್ನು ಸೇರಿಸಿ ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ನಾಯಕನಿಗಿಂತ ಹೆಚ್ಚು ಸ್ಕೋಪ್‌ ಇರೋದು ವಿಲನ್‌ಗಂತೆ.

ಅದೇ ಕಾರಣಕ್ಕೆ ವಿಲನ್‌ಗೆ ವಿಶೇಷ ಗೆಟಪ್‌ ಕೂಡಾ ಇದೆಯಂತೆ. ಅನೂಪ್‌ ಸಾ.ರಾ.ಗೋವಿಂದು ನಾಯಕರಾಗಿರುವ "ಸಾಗುವ ದಾರಿಯಲ್ಲಿ' ಚಿತ್ರವನ್ನು ಶಿವಕುಮಾರ್‌ ನಿರ್ದೇಶಿಸಿದ್ದು, ಚಿತ್ರಕ್ಕೆ ಸವಾಲುಗಳ ಚಕ್ರವ್ಯೂಹ ಎಂಬ ಟ್ಯಾಗ್‌ಲೈನ್‌ ಇದೆ. ಸಂಚಾರಿ ವಿಜಯ್‌, ಮೇಘನಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ "ಕೃಷ್ಣ ತುಳಸಿ' ಚಿತ್ರ ಕೂಡಾ ಈ ವಾರ ತೆರೆಕಾಣುತ್ತಿದ್ದು, ಇಲ್ಲಿ ಸಂಚಾರಿ ವಿಜಯ್‌ ಅಂದನಾಗಿ ಕಾಣಿಸಿಕೊಂಡಿದ್ದಾರಂತೆ.

ಚಿತ್ರವನ್ನು ಸುಖೇಶ್‌ ನಾಯಕ್‌ ನಿರ್ದೇಶಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ "ರುಕ್ಕು' ಎಂಬ ಚಿತ್ರ ಯಾವತ್ತೋ ತೆರೆಕಾಣಬೇಕಿತ್ತು. ಆದರೆ, ಚಿತ್ರ ಈ ವಾರ ತೆರೆಕಾಣುತ್ತಿದೆ. ಬಸವರಾಜು ಬಳ್ಳಾರಿ ಈ ಚಿತ್ರದ ನಿರ್ದೆಶಕರು. "ರುಕ್ಕು' ಚಿತ್ರ  ಹಳ್ಳಿಯ ಕಥೆಯನ್ನು ಹೊಂದಿದೆಯಂತೆ.. ಇಡೀ ಸಿನಿಮಾ ಹಳ್ಳಿಯ ಹಿನ್ನೆಲೆಯಲ್ಲೇ ನಡೆಯುತ್ತದೆಯಂತೆ.

"ನಾಗವಲ್ಲಿ ವರ್ಸಸ್‌ ಆಪ್ತಮಿತ್ರರು' ಚಿತ್ರ ಕೂಡಾ ಈ ವಾರ ತೆರೆಕಾಣುತ್ತಿದ್ದು, ಅರುಣ್‌ ಈ ಚಿತ್ರದ ನಿರ್ದೇಶಕರು. ವಿಷ್ಣುವರ್ಧನ್‌ ಹಾಗೂ ಸೌಂದರ್ಯ ಸಾವಿಗೆ ನಾಗವಲ್ಲಿ ಕಾರಣನಾ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆಯಂತೆ. ಮೊದಲೇ ಹೇಳಿದಂತೆ ಕನ್ನಡದಿಂದ ಯಾವುದೇ ದೊಡ್ಡ ಸಿನಿಮಾ ಅಥವಾ ಸ್ಟಾರ್‌ ಸಿನಿಮಾಗಳು ಬಿಡುಗಡೆಯಾಗುತ್ತಿಲ್ಲ. ಆದರೆ, ತೆಲುಗಿನ ಮಹೇಶ್‌ ಬಾಬು ನಟನೆಯ "ಭರತ್‌ ಆನೆ ನೇನು' ಚಿತ್ರ ಏಪ್ರಿಲ್‌ 20 ರಂದು ತೆರೆಕಾಣುತ್ತಿದೆ. 

Back to Top