CONNECT WITH US  

ರಶ್ಮಿಕಾ ಈಗ ಕ್ರಿಕೆಟರ್‌

ಕಿರಿಕ್‌ ಹುಡುಗಿ ಈಗ ತೆಲುಗಿನಲ್ಲಿ ಬಿಝಿ

ಕನ್ನಡ ಚಿತ್ರರಂಗದ ಮೂಲಕ ಸಿನಿಪಯಣ ಆರಂಭಿಸಿ, ಆ ನಂತರ ಬೇರೆ ಬೇರೆ ಭಾಷೆಯಲ್ಲಿ ಸಾಕಷ್ಟು ನಟಿಯರು ಬಿಝಿಯಾಗಿದ್ದಾರೆ. ಈಗ ಆ ಸಾಲಿಗೆ ಸೇರುವ ಮತ್ತೂಬ್ಬ ನಟಿ ಎಂದರೆ ಅದು ರಶ್ಮಿಕಾ ಮಂದಣ್ಣ. "ಕಿರಿಕ್‌ ಪಾರ್ಟಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ರಶ್ಮಿಕಾ ಈಗ ತೆಲುಗಿನಲ್ಲಿ ಬಹುಬೇಡಿಕೆಯ ನಟಿ. ಈಗಾಗಲೇ ರಶ್ಮಿಕಾ ನಟಿಸಿರುವ ತೆಲುಗಿನ "ಚಲೋ' ಚಿತ್ರ ಬಿಡುಗಡೆಯಾಗಿದ್ದು, ಈ ಮೂಲಕ ರಶ್ಮಿಕಾಗೆ ತೆಲುಗಿನಲ್ಲಿ ಮತ್ತಷ್ಟು ಅವಕಾಶಗಳು ಸಿಗುತ್ತಿವೆ.

ಸದ್ಯ ರಶ್ಮಿಕಾ ಕೈಯಲ್ಲಿ ಎರಡು ತೆಲುಗು ಸಿನಿಮಾಗಳಿವೆ. ನಾಗಾರ್ಜುನ ಹಾಗೂ ನಾನಿ ಕಾಂಬಿನೇಶನ್‌ನಲ್ಲಿ ಬರುತ್ತಿರುವ ಸಿನಿಮಾದಲ್ಲೂ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದು, ಇಲ್ಲಿ ನಾನಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಲ್ಲದೇ "ಅರ್ಜುನ್‌ ರೆಡ್ಡಿ' ಖ್ಯಾತಿಯ ವಿಜಯ್‌ ದೇವರಕೊಂಡ ಅಭಿನಯದ "ಡಿಯರ್‌ ಕಾಮ್ರೆಡ್‌' ಸಿನಿಮಾದಲ್ಲೂ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ.

ಇತ್ತೀಚೆಗೆ ವಿಜಯ್‌ ದೇವರಕೊಂಡ ಅವರ ಹುಟ್ಟುಹಬ್ಬದ ದಿನ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ರಶ್ಮಿಕಾ ಕ್ರಿಕೆಟರ್‌ ಆಗಿ ಕಾಣಿಸಿಕೊಳ್ಳಲಿದ್ದಾರಂತೆ. ತೆಲಂಗಾಣ ಪರ ಆಡುವ ಕ್ರಿಕೆಟ್‌ ಆಟಗಾರ್ತಿಯಾಗಿ ಕಾಣಿಸಿಕೊಳ್ಳಲಿರುವ ರಶ್ಮಿಕಾ, ಇದಕ್ಕಾಗಿ ಈಗಾಗಲೇ ಕ್ರಿಕೆಟ್‌ ತರಬೇತಿಯನ್ನೂ ಪಡೆಯುತ್ತಿದ್ದಾರಂತೆ.

ಫೀಲ್ಡಿಂಗ್‌, ಬ್ಯಾಟಿಂಗ್‌ ಸೇರಿದಂತೆ ಕ್ರಿಕೆಟ್‌ನ ವಿವಿಧ ಪಟ್ಟುಗಳನ್ನು ರಶ್ಮಿಕಾ ಅಭ್ಯಾಸಿಸುತ್ತಿದ್ದಾರೆನ್ನಲಾಗಿದೆ. ಇನ್ನು, ರಾಜ್‌ಮೌಳಿ ನಿರ್ದೇಶಿಸುತ್ತಿರುವ ರಾಮ್‌ಚರಣ್‌ ತೇಜಾ ಹಾಗೂ ಜೂ.ಎನ್‌ಟಿಆರ್‌ ಕಾಂಬಿನೇಶನ್‌ನಲ್ಲಿ ತಯಾರಾಗಲಿರುವ ಚಿತ್ರದಲ್ಲೂ ರಶ್ಮಿಕಾಗೆ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಓಡಾಡುತ್ತಿದೆ. ಆದರೆ, ಈ ಬಗ್ಗೆ ರಶ್ಮಿಕಾ ಆಗಲೀ, ಚಿತ್ರತಂಡವಾಗಲೀ ಯಾವುದೇ ಹೇಳಿಕೆ ನೀಡಿಲ್ಲ.

ತೆಲುಗಿನಲ್ಲಿ ಹೆಚ್ಚು ಬಿಝಿಯಾಗುತ್ತಾ ಹೋಗುತ್ತಿರುವ ರಶ್ಮಿಕಾ ಕನ್ನಡದಿಂದ ದೂರವಾಗುತ್ತಿದ್ದಾರಾ ಎಂಬ ಪ್ರಶ್ನೆ ಸಹಜವಾಗಿಯೇ ನಿಮ್ಮನ್ನು ಕಾಡಬಹುದು. ಸದ್ಯ ರಶ್ಮಿಕಾ ಕನ್ನಡದಲ್ಲಿ ದರ್ಶನ್‌ ಜೊತೆ "ಯಜಮಾನ' ಸಿನಿಮಾ ಬಿಟ್ಟರೆ ಬೇರೆ ಯಾವುದೇ ಸಿನಿಮಾಗಳಲ್ಲೂ ನಟಿಸುತ್ತಿಲ್ಲ. ಸಾಕಷ್ಟು ಅವಕಾಶಗಳು ಬಂದರೂ ರಶ್ಮಿಕಾ ಮಾತ್ರ ತೆಲುಗಿನಲ್ಲಿ ಬಿಝಿ ಇರುವುದರಿಂದ ಬೇರೆ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿಲ್ಲ ಎಂಬ ಮಾತಿದೆ. 

Trending videos

Back to Top