ಮೂರ್ಕಲ್ ಎಸ್ಟೇಟ್ ಚಿತ್ರೀಕರಣ ಪೂರ್ಣ
Team Udayavani, Jun 16, 2018, 10:57 AM IST
ಹೊಸಬರು ಸೇರಿ ಮಾಡಿರುವ “ಮೂರ್ಕಲ್ ಎಸ್ಟೇಟ್’ ಎಂಬ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಭದ್ರಾವತಿ ಮೂವೀ ಮೇಕರ್ಸ್ ಬ್ಯಾನರ್ನಲ್ಲಿ ಕುಮಾರ್ ನಿರ್ಮಿಸಿರುವ ಈ ಚಿತ್ರವನ್ನು ಪ್ರಮೋದ್ಕುಮಾರ್ ನಿರ್ದೇಶನ ಮಾಡಿದ್ದಾರೆ. ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಜವಾಬ್ದಾರಿಯನ್ನೂ ಇವರೇ ವಹಿಸಿಕೊಂಡಿದ್ದಾರೆ. ರವಿಚಂದ್ರನ್ ಮತ್ತು ಫಣೀಶ್ ಅವರೊಂದಿಗೆ ಕೆಲಸ ಮಾಡಿದ ಅನುಭವ ಇರುವ ಪ್ರಮೋದ್ ಕುಮಾರ್ ಅವರಿಗೆ ಇದು ಮೊದಲ ಚಿತ್ರ.
ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರು ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಸುಮಾರು 35 ದಿನಗಳ ಕಾಲ “ಮೂರ್ಕಲ್ ಎಸ್ಟೇಟ್’ ಚಿತ್ರಕ್ಕೆ ಚಿತ್ರೀಕರಣ ಮಾಡಲಾಗಿದೆ. ಚಿತ್ರಕ್ಕೆ ಎಲ್. ಕೃಷ್ಣ ಹಾಗೂ ಮುನಿಸ್ವಾಮಿ ಸಹ ನಿರ್ಮಾಪಕರು. ಅಂದಹಾಗೆ, “ಮೂರ್ಕಲ್ ಎಸ್ಟೇಟ್” ಒಂದು ಹಾರಾರ್ ಚಿತ್ರ. ಈ ಚಿತ್ರದಲ್ಲಿ ಪ್ರವೀಣ್ ಅವರು ನಾಯಕನಾಗಿ ನಟಿಸಿದ್ದಾರೆ. ಅವರಿಗೆ ಪ್ರಕೃತಿ ನಾಯಕಿ.
ಈ ಹಿಂದೆ “ಡೇಸ್ ಆಫ್ ಬೋರಾಪುರ’ ಚಿತ್ರದಲ್ಲಿ ನಾಯಕಿಯಾಗಿದ್ದ ಪ್ರಕೃತಿ ಅವರಿಗೆ ಇದು ಎರಡನೇ ಚಿತ್ರ. ಚಿತ್ರಕ್ಕೆ “ಲೂಸ್ ಕಲೆಕ್ಷನ್” ಖ್ಯಾತಿಯ ಸುದ್ದು ರಾಯ್ ಸಂಗೀತ ನೀಡಿದ್ದಾರೆ. ರಾಖೀ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಮರಿಸ್ವಾಮಿ ಸಂಕಲನ ಮಾಡಿದ್ದಾರೆ. ಇಷ್ಟರಲ್ಲೆ ಆಡಿಯೋ ಹಾಗೂ ಟ್ರೇಲರ್ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸಿದೆ.