CONNECT WITH US  

ಬಿಡುಗಡೆ ಮುನ್ನ ಹೈಪ್‌ ಆದ ಹೈಪರ್‌!

ಟ್ರೈಲರ್‌ಗೆ 20 ಲಕ್ಷಕ್ಕೂ ಹೆಚ್ಚು ಹಿಟ್ಸ್‌

ಯಾವುದೇ ಒಂದು ಸಿನಿಮಾ ಸಾಮಾಜಿಕ ತಾಣದಲ್ಲಿ ಸಿಕ್ಕಾಪಟ್ಟೆ ಹೈಪ್‌ ಆಗುತ್ತೆ ಅಂದರೆ, ಅದಕ್ಕೆ ಮುಖ್ಯ ವಾಗಿ ಚಿತ್ರದಲ್ಲಿರುವ ಗಟ್ಟಿತನ. ಈಗಾಗಲೇ 20 ಲಕ್ಷಕ್ಕೂ ಹೆಚ್ಚು ಹಿಟ್ಸ್‌ ಪಡೆದಿರುವ ಹೊಸಬರ ಚಿತ್ರವೊಂದು ಸದ್ಯಕ್ಕೆ ಸಾಮಾಜಿಕ ತಾಣದಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಗೆ ಮುನ್ನವೇ ಹೈಪ್‌ ಆದ ಚಿತ್ರದ ಹೆಸರು "ಹೈಪರ್‌'. ಬೆರಳೆಣಿಕೆ ಕಲಾವಿದರನ್ನು ಹೊರತುಪಡಿಸಿದರೆ. ಇದು ಬಹುತೇಕ ಹೊಸಬರ ಚಿತ್ರ.

ಈ ಚಿತ್ರದ ಟ್ರೈಲರ್‌ ಮತ್ತು ಹಾಡುಗಳಿಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಸಿಕ್ಕಿದೆ. ಇತ್ತೀಚೆಗಷ್ಟೇ ಚಿತ್ರತಂಡ ಟ್ರೈಲರ್‌ ಒಂದನ್ನು ಬಿಡುಗಡೆ ಮಾಡಿತ್ತು. ಆ ಟ್ರೈಲರ್‌ ವೀಕ್ಷಿಸಿದ ಮಂದಿಯ ಸಂಖ್ಯೆ ಬರೋಬ್ಬರಿ 20 ಲಕ್ಷ ನೋಟವನ್ನು ಮೀರಿದೆ. ಸಹಜವಾಗಿಯೇ ಚಿತ್ರತಂಡಕ್ಕೆ ಈ ಬೆಳವಣಿಗೆ ಖುಷಿ ಕೊಟ್ಟಿದೆ. ಅಂದಹಾಗೆ, ಅರ್ಜುನ್‌ ಆರ್ಯ ಚಿತ್ರದ ನಾಯಕ. ಇವರಿಗೆ ಶೀಲಾ ನಾಯಕಿ. ಗಣೇಶ್‌ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಎಂ.ಕಾರ್ತಿಕ್‌ ಈ ಚಿತ್ರದ ನಿರ್ಮಾಪಕರು. "ಎಮ್‌ ಬಿಗ್‌ ಪಿಕ್ಚರ್' ಬ್ಯಾನರ್‌ನಲ್ಲಿ ಚಿತ್ರ ತಯಾರಾಗಿದೆ. ಡಿ.ಇಮಾನ್‌ ಸಂಗೀತ ನೀಡಿದ್ದಾರೆ. ವಿಶೇಷವೆಂದರೆ, ನಾಲ್ವರು ನಿರ್ದೇಶಕರು ಈ ಚಿತ್ರದ ಹಾಡುಗಳಿಗೆ ಗೀತೆ ರಚಿಸಿದ್ದಾರೆ.  "ಭರ್ಜರಿ' ಚೇತನ್‌ಕುಮಾರ್‌, ಎ.ಪಿ.ಅರ್ಜುನ್‌, ಗೌಸ್‌ಪೀರ್‌ ಮತ್ತು "ರ್‍ಯಾಂಬೋ' ನಿರ್ದೇಶಕ ಅನಿಲ್‌ ಅವರು ಗೀತೆ ರಚಿಸಿದ್ದಾರೆ. ವಿಜಯಪ್ರಕಾಶ್‌, ವೈಕೂಮ್‌ ವಿಜಯಲಕ್ಷ್ಮೀ, ಅನುರಾಧಭಟ, ಚೇತನ್‌, ಮಾಲತಿ ಹಾಡಿದ್ದಾರೆ.

"ಹೈಪರ್‌' ಪಕ್ಕಾ ಕಮರ್ಷಿಯಲ್‌ ಚಿತ್ರವಾಗಿದ್ದು, ಇಲ್ಲಿ ಪ್ರೀತಿ, ಆ್ಯಕ್ಷನ್‌ ಹಾಗೂ ಸೆಂಟಿಮೆಂಟ್‌ ಅಂಶಗಳು ತುಂಬಿಕೊಂಡಿವೆ. ಇಲ್ಲಿ ಇನ್ನೊಂದು ವಿಶೇಷತೆಯೂ ಇದೆ. ಅದು ರೈತರಿಗೆ ಸಂಬಂಧಿಸಿದ್ದು. ಯಾಕೆಂದರೆ, ಚಿತ್ರದ ನಾಯಕ ಅರ್ಜುನ್‌ ಆರ್ಯ ಅವರೇ ಚಿತ್ರಕ್ಕೆ ಕಥೆ ಬರೆದು, ಅವರಿಲ್ಲಿ ಪರಿಸರ ಪ್ರೇಮಿಯಾಗಿ ಕಾಣಿಸಿಕೊಂಡಿದ್ದಾರೆ. ಜಮ್ಮು, ಕಾಶ್ಮೀರದ ಸೂಕ್ಷ್ಮ ಪ್ರದೇಶದಲ್ಲಿ "ಹೈಪರ್‌' ಚಿತ್ರೀಕರಣಗೊಂಡಿದೆ.

 ಚಿತ್ರಕ್ಕೆ ಥ್ರಿಲ್ಲರ್‌ ಮಂಜು, ಮಾಸ್‌ ಮಾದ, ವಿಕ್ರಮ್‌ ಮೋರ ಹಾಗೂ ನೂರ್‌ ಚಿತ್ರದ ಭರ್ಜರಿ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದಾರೆ. ಚಿತ್ರದಲ್ಲಿ ರಂಗಾಯಣ ರಘು, ಅಚ್ಯುತ್‌ಕುಮಾರ್‌, ಶೋಭರಾಜ್‌, ಬುಲೆಟ್‌ ಪ್ರಕಾಶ್‌, ಶ್ರೀನಿವಾಸ್‌ ಪ್ರಭು, ವೀಣಾ ಸುಂದರ್‌ ಸೇರಿದಂತೆ ಇತರೆ ಕಲಾವಿದರು ನಟಿಸಿದ್ದಾರೆ. ಜೂನ್‌ 29 ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

Trending videos

Back to Top