CONNECT WITH US  

ಶನಿವಾರ ದಿ ವಿಲನ್‌ನ ಮೂರನೇ ಹಾಡು ಬಿಡುಗಡೆ

"ಲವ್‌ ಆಯ್ತು ನಿನ್‌ ಮ್ಯಾಲೆ ...' ಅಂತಿದ್ದಾರೆ ಪ್ರೇಮ್‌

"ದಿ ವಿಲನ್‌' ಚಿತ್ರದ "ಐ ಆ್ಯಮ್‌ ವಿಲನ್‌' ಮತ್ತು "ಟಿಕ್‌ ಟಿಕ್‌ ಟಿಕ್‌' ಎಂಬ ಎರಡು ಹಾಡುಗಳು ಬಿಡುಗಡೆಯಾಗಿದ್ದು, ಎರಡೂ ಹಿಟ್‌ ಆಗಿವೆ. ಈ ಪೈಕಿ "ಐ ಆ್ಯಮ್‌ ವಿಲನ್‌' ಹಾಡು, ಯೂಟ್ಯೂಬ್‌ನಲ್ಲಿ ನಾಲ್ಕು ಮಿಲಿಯನ್‌ ಹಿಟ್ಸ್‌ ಕಂಡರೆ, "ಟಿಕ್‌ ಟಿಕ್‌ ಟಿಕ್‌' ಹಾಡು ಎರಡು ಮಿಲಿಯನ್‌ ಹಿಟ್ಸ್‌ ಕಂಡಿವೆ.

ಹೀಗಿರುವಾಗಲೇ ಚಿತ್ರದ ಮೂರನೆಯ ಹಾಡನ್ನು ಬಿಡುಗಡೆ ಮಾಡುವುದಕ್ಕೆ ಪ್ರೇಮ್‌ ಸಜ್ಜಾಗಿದ್ದು, ಆಗಸ್ಟ್‌ 4ರ ಶನಿವಾರದಂದು ಈ ಹಾಡನ್ನು ಬಿಡುಗಡೆ ಮಾಡುತ್ತಿದ್ದಾರೆ. "ಲವ್‌ ಆಯ್ತು ನಿನ್‌ ಮ್ಯಾಲೆ ...' ಎಂದು ಸಾಗುವ ಈ ಹಾಡನ್ನು ಪ್ರೇಮ್‌ ಬರೆದಿರುವುದಷ್ಟೇ ಅಲ್ಲ, ಸ್ವತಃ ಹಾಡಿದ್ದಾರೆ.

ಈ ಹಾಡಿನಲ್ಲಿ ಶಿವರಾಜಕುಮಾರ್‌, ಸುದೀಪ್‌ ಮತ್ತು ಆ್ಯಮಿ ಜಾಕ್ಸನ್‌ ಕಾಣಿಸಿಕೊಂಡಿದ್ದು, ಆ್ಯಮಿ ಜಾಕ್ಸನ್‌ ಅವರು ಶಿವರಾಜಕುಮಾರ್‌ ಹಾಗೂ ಸುದೀಪ್‌ ಇಬ್ಬರಿಗೂ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಪೈಕಿ ಶಿವರಾಜಕುಮಾರ್‌ ಅವರ ಜೊತೆಗೆ ರೆಟ್ರೋ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.

"ನೀ ನನ್ನ ಗೆಲ್ಲಲಾರೆ' ಚಿತ್ರದ "ಜೀವ ಹೂವಾಗಿದೆ ಭಾವ ಜೇನಾಗಿದೆ ...' ಹಾಡನ್ನು ನೆನಪಿಸುವ ಈ ಹಾಡಿನಲ್ಲಿ ಡಾ ರಾಜಕುಮಾರ್‌ ಮತ್ತು ಮಂಜುಳಾ ಅವರು ತೊಟ್ಟಿದ್ದ ಕಾಸ್ಟೂಮ್‌ಗಳನ್ನು ಹೋಲುವ ಕಾಸ್ಟೂéಮ್‌ಗಳನ್ನೇ ಇಲ್ಲಿ ಬಳಸಲಾಗಿದೆ. ಈಗಾಗಲೇ ಈ ಹಾಡಿನ ಬಗ್ಗೆ ನಿರೀಕ್ಷೆ ಹೆಚ್ಚಿದ್ದು, ಶನಿವಾರ ಅಧಿಕೃತವಾಗಿ ಬಿಡುಗಡೆಯಾಗಲಿದೆ.

"ದಿ ವಿಲನ್‌' ಚಿತ್ರಕ್ಕೆ ಪ್ರೇಮ್‌ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದು, ಸಿ.ಆರ್‌. ಮನೋಹರ್‌ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತವಿದ್ದು, ಚಿತ್ರದಲ್ಲಿ ಶಿವರಾಜಕುಮಾರ್‌, ಸುದೀಪ್‌, ಆ್ಯಮಿ ಜಾಕ್ಸನ್‌, ಮಿಥುನ್‌ ಚಕ್ರವರ್ತಿ, ಶ್ರೀಕಾಂತ್‌, ತಿಲಕ್‌ ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಅರ್ಜುನ್‌ ಜನ್ಯ ಅವರ ಸಂಗೀತವಿದೆ. ಈಗಾಗಲೇ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿರುವ ಈ ಚಿತ್ರವು ವರಮಹಾಲಕ್ಷ್ಮೀ ಹಬ್ಬದಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದ ಬಿಡುಗಡೆ ವಿಳಂಬವಾದರೂ, ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

Trending videos

Back to Top