CONNECT WITH US  

"ಕುರುಕ್ಷೇತ್ರ' ಚಿತ್ರವೇ ಮೊದಲು ಬಿಡುಗಡೆಯಾಗಬೇಕು: ನಿಖೀಲ್‌

"ಸೀತಾರಾಮ ಕಲ್ಯಾಣ' ಚಿತ್ರ ಬಿಡುಗಡೆಗೂ ಮುನ್ನ "ಕುರುಕ್ಷೇತ್ರ' ಮಾಡಬಾರದು ಎಂದು ಹೇಳಿಲ್ಲ ಮತ್ತು "ಕುರುಕ್ಷೇತ್ರ' ಚಿತ್ರದ ಬಿಡುಗಡೆ ತಡವಾಗುತ್ತಿರುವುದಕ್ಕೆ ತಾವು ಕಾರಣರಲ್ಲ ಎಂದು ನಿಖೀಲ್‌ ಕುಮಾರ್‌ ಹೇಳಿದ್ದಾರೆ.

ದರ್ಶನ್‌ ಅಭಿನಯದ 50ನೇ ಚಿತ್ರವಾದ "ಕುರುಕ್ಷೇತ್ರ'ದಲ್ಲಿ ನಿಖೀಲ್‌ ಅಭಿಮನ್ಯುವಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಕೆಲಸಗಳು ಮುಗಿದಿದೆ. ಆದರೆ, ನಿಖೀಲ್‌ ಡಬ್ಬಿಂಗ್‌ ಮಾತ್ರ ಇನ್ನೂ ಮುಗಿದಿಲ್ಲ. "ಸೀತಾರಾಮ ಕಲ್ಯಾಣ' ಚಿತ್ರವು ಮೊದಲು ಬಿಡುಗಡೆಯಾಗಲೀ ಎಂಬ ಕಾರಣಕ್ಕೆ, ನಿಖೀಲ್‌ ಡಬ್ಬಿಂಗ್‌ ಮಾಡದೆ ಚಿತ್ರವನ್ನು ವಿಳಂಬ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಅಕ್ಟೋಬರ್‌ನಲ್ಲಿ "ಸೀತಾರಾಮ ಕಲ್ಯಾಣ' ಬಿಡುಗಡೆಯಾದ ನಂತರ ನಿಖೀಲ್‌ ಕುಮಾರ್‌, "ಕುರುಕ್ಷೇತ್ರ' ಚಿತ್ರದಲ್ಲಿನ ತಮ್ಮ ಕೆಲಸವನ್ನು ಮುಗಿಸಿಕೊಡುವುದಕ್ಕೆ ಯೋಚಿಸುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ.

"ಸೀತಾರಾಮ ಕಲ್ಯಾಣ' ಚಿತ್ರದ ಪತ್ರಿಕಾಗೋಷ್ಠಿಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಅವೆಲ್ಲಾ ಸುಳ್ಳು ಸುದ್ದಿಗಳು. ಅವರ ಚಿತ್ರವೇ ಮೊದಲು ಬಿಡುಗಡೆಯಾಗಲಿ. ಅದಾದ ನಂತರ ನಾವು "ಸೀತಾರಾಮ ಕಲ್ಯಾಣ' ಚಿತ್ರವನ್ನು ಬಿಡುಗಡೆ ಮಾಡುತ್ತೇವೆ. ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ. ಚಿತ್ರಕ್ಕೆ ನಾನಿನ್ನೂ ಡಬ್ಬಿಂಗ್‌ ಮಾಡಿಲ್ಲ. "ಸೀತಾರಾಮ ಕಲ್ಯಾಣ' ಚಿತ್ರದಲ್ಲಿ ತೊಡಗಿಸಿಕೊಂಡಿದ್ದರಿಂದ ಆಗಲಿಲ್ಲ. ಅವರು ಯಾವಾಗ ಕರೆದರೂ ಹೋಗಿ ಡಬ್ಬಿಂಗ್‌ ಮಾಡಿ ಬರುತ್ತೇನೆ. ಒಂದೆರೆಡು ದಿನಗಳ ಕೆಲಸ ಇದೆ ಅಷ್ಟೇ. ನನ್ನಿಂದ ಯಾವತ್ತೂ ನಿರ್ಮಾಪಕರಿಗೆ ತೊಂದರೆ ಆಗಿಲ್ಲ. ಅವರು ಯಾವಾಗ ಕರೆದರೂ ನಾನು ರೆಡಿ' ಎನ್ನುತ್ತಾರೆ ನಿಖೀಲ್‌.

ಇನ್ನು ಚಿತ್ರದಲ್ಲಿ ನಿಖೀಲ್‌ ಅವರ ಪಾತ್ರ ಸ್ವಲ್ಪ ದೊಡ್ಡದಾಯಿತು ಎಂದು ದರ್ಶನ್‌ ಬೇಸರಿಸಿಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆಯಲ್ಲಾ ಎಂಬ ಪ್ರಶ್ನೆಗೆ, "ಅಭಿಮನ್ಯು ಮಾತ್ರ ಕಾಲ್ಪನಿಕ ಪಾತ್ರವಲ್ಲ. "ಕುರುಕ್ಷೇತ್ರ'ದಲ್ಲಿ ಅಭಿಮನ್ಯು ಪಾತ್ರ ಎಷ್ಟಿರಬೇಕೋ ಅಷ್ಟಿದೆ. ನಾನು ಸಾಕಷ್ಟು ಶ್ರಮ ಹಾಕಿ ಕೆಲಸ ಮಾಡಿದ್ದೇನೆ. ದ್ವಿತೀಯಾರ್ಧದಲ್ಲಿ 12 ನಿಮಿಷಗಳ ಒಂದು ದೊಡ್ಡ ಆ್ಯಕ್ಷನ್‌ ದೃಶ್ಯವಿದೆ. ಸೆಕೆಂಡ್‌ ಹಾಫ್ನಲ್ಲಿ ಆ್ಯಕ್ಷನ್‌ ಇಲ್ಲ ಎಂದು ಮುನಿರತ್ನ ಅವರೇ ಆ ಸಾಹಸ ದೃಶ್ಯವನ್ನು ಹಾಕಿದ್ದಾರೆ. ನಾನು 70ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸಿದ್ದೇನೆ. ಇನ್ನು 22 ದಿನಗಳ ಕಾಲ ತರಬೇತಿ ಪಡೆದಿದ್ದೇನೆ' ಎನ್ನುತ್ತಾರೆ ನಿಖೀಲ್‌.

Trending videos

Back to Top