ರಾಕಿಂಗ್ ಸ್ಟಾರ್ ಜೊತೆ ಮಿಲ್ಕಿ ಬ್ಯೂಟಿ | Udayavani - ಉದಯವಾಣಿ
   CONNECT WITH US  
echo "sudina logo";

ರಾಕಿಂಗ್ ಸ್ಟಾರ್ ಜೊತೆ ಮಿಲ್ಕಿ ಬ್ಯೂಟಿ

"ಕೆಜಿಎಫ್' ಹಾಡಿಗೆ ಹೆಜ್ಜೆ ಹಾಕಿದ ನಂತರ ತಮನ್ನಾ ಟ್ವೀಟ್!

ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ "ಕೆಜಿಎಫ್' ಚಿತ್ರದಲ್ಲಿ ಯಶ್ ಜೊತೆ ಡ್ಯಾನ್ಸ್ ಮಾಡಿದ ಮಿಲ್ಕಿ ಬ್ಯೂಟಿ ನಟಿ ತಮನ್ನಾ ಭಾಟಿಯಾ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಟ್ವೀಟ್ ಮಾಡಿದ್ದಾರೆ. ಯಶ್ ಜೊತೆ ತಮನ್ನಾ "ಜೋಕೆ ನಾನು ಬಳ್ಳಿಯ ಮಿಂಚು' ಎಂಬ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಈ ಹಾಡಿನ ಚಿತ್ರೀಕರಣ ಪೂರ್ಣಗೊಂಡಿದೆ. ಸದ್ಯ ತಮನ್ನಾ ಯಶ್ ಜೊತೆ ಡ್ಯಾನ್ಸ್ ಮಾಡಿದ ಫಸ್ಟ್ ಲುಕ್ ಅನ್ನು ತಮ್ಮ ಸಾಮಾಜಿಕ ಜಾಲತಾಣ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

"ಯಶ್ ಜೊತೆ ಜೋಕೆ ಹಾಡಿಗೆ ಚಿತ್ರೀಕರಣ ಮಾಡುವಾಗ ಒಳ್ಳೆಯ ಸಮಯ ಕಳೆದಿದ್ದೇನೆ. ಇಡೀ ಚಿತ್ರತಂಡ ನನಗೆ ಮನೆಯ ಅನುಭವವನ್ನು ನೀಡಿದ್ದು, ಎಲ್ಲರಿಗೂ ತುಂಬು ಹೃದಯದ ಧನ್ಯವಾದ. ಅಲ್ಲದೇ ಎಲ್ಲರೂ ಕೆಜಿಎಫ್ ಚಿತ್ರವನ್ನು ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ನೋಡಲು ನಿಮ್ಮ ಹತ್ತಿರದ ಚಿತ್ರಮಂದಿರಕ್ಕೆ ಭೇಟಿ ನೀಡಿ' ಎಂದು ಮಿಲ್ಕಿ ಬ್ಯೂಟಿ ಟ್ವೀಟ್ ಮಾಡಿದ್ದಾರೆ.

ಇನ್ನು ಈ ರೆಟ್ರೋ ಹಾಡಿಗೆ ಜಾನಿ ಮಾಸ್ಟರ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ಅಂದಹಾಗೆ, "ಪರೋಪಕಾರಿ' ಚಿತ್ರಕ್ಕೆ ಎಲ್‌.ಆರ್‌. ಈಶ್ವರಿ ಅವರು ಹಾಡಿದ "ಜೋಕೆ ನಾನು ಬಳ್ಳಿಯ ಮಿಂಚು, ಕಣ್ಣು ಕತ್ತಿಯ ಅಂಚು ...' ಹಾಡನ್ನು ಈ ಚಿತ್ರಕ್ಕಾಗಿ ರೀಮಿಕ್ಸ್‌ ಮಾಡಿದ್ದು, ವಿಶೇಷ ಸೆಟ್‍ವೊಂದರಲ್ಲಿ ಚಿತ್ರಿಕರಿಸಲಾಗಿದೆ.

ತಮನ್ನಾ ಕನ್ನಡದಲ್ಲಿ ಕಾಣಿಸಿಕೊಳ್ಳುತ್ತಿರುವುದು ಇದು ಮೊದಲೇನಲ್ಲ. ಇದಕ್ಕೂ ಮುನ್ನ ನಿಖಿಲ್‌ ಕುಮಾರ್‌ ಅಭಿನಯದ "ಜಾಗ್ವಾರ್‌' ಚಿತ್ರದ ಐಟಂ ಡ್ಯಾನ್ಸ್‌ವೊಂದರಲ್ಲೂ ಕಾಣಿಸಿಕೊಂಡಿದ್ದರು. ಈಗ ಎರಡನೆಯ ಬಾರಿಗೆ ಕನ್ನಡ ಚಿತ್ರದಲ್ಲಿ ಅವರು ಮಿಂಚಿದ್ದಾರೆ. "ಕೆಜಿಎಫ್' ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಸಹ ಬಹುತೇಕ ಮುಗಿದಿದ್ದು, ಸೆಪ್ಟೆಂಬರ್‌ ಕೊನೆಯ ಹೊತ್ತಿಗೆ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಚಿಸುತ್ತಿದೆ.

"ಕೆಜಿಎಫ್' ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆಯುವುದರ ಜೊತೆಗೆ ನಿರ್ದೇಶನ ಮಾಡುತ್ತಿದ್ದಾರೆ ಪ್ರಶಾಂತ್‌ ನೀಲ್‌. ಯಶ್‌ ಜೊತೆಗೆ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದು, ಮಿಕ್ಕಂತೆ ಅಚ್ಯುತ್‌ ಕುಮಾರ್‌, ವಸಿಷ್ಠ ಸಿಂಹ ಮುಂತಾದವರು ನಟಿಸುತ್ತಿದ್ದಾರೆ. ರವಿ  ಬಸ್ರೂರು ಸಂಗೀತ ಮತ್ತು ಭುವನ್‌ ಗೌಡ ಛಾಯಾಗ್ರಹಣವಿರುವ ಈ ಚಿತ್ರವನ್ನು ಹೊಂಬಾಳೆ ಪ್ರೊಡಕ್ಷನ್ಸ್‌ನಡಿ ವಿಜಯ್‌ಕುಮಾರ್‌ ಕಿರಗಂದೂರು ನಿರ್ಮಿಸುತ್ತಿದ್ದಾರೆ.

Trending videos

Back to Top