CONNECT WITH US  

ಕೆಸಿಸಿ ಕೌಂಟ್‌ಡೌನ್‌ ಶುರು

10 ದಿನಗಳ ಕಾಲ ಅಭ್ಯಾಸ ನಡೆಸುತ್ತಿರುವ ಶಿವಣ್ಣ

ಕನ್ನಡ ಚಲನಚಿತ್ರ ಕಪ್‌ನ ಎರಡನೇ ಅವತರಿಣಿಕೆಗೆ ದಿನಗಣನೆ ಶುರುವಾಗಿದೆ. ಮುಂದಿನ ಶನಿವಾರ ಮತ್ತು ಭಾನುವಾರ ಅಂದರೆ ಸೆಪ್ಟೆಂಬರ್‌ 8 ಮತ್ತು 9ರಂದು ಈ ಕ್ರಿಕೆಟ್‌ ಟೂರ್ನಿಯ ಎರಡನೇ ಆವೃತ್ತಿ ನಡೆಯಲಿದೆ. ಈ ಕಪ್‌ನಲ್ಲಿ ಆರು ತಂಡಗಳು ಭಾಗವಹಿಸುತ್ತಿದ್ದು, ಕನ್ನಡ ಚಿತ್ರರಂಗದ ಜನಪ್ರಿಯ ಸ್ಟಾರ್‌ಗಳಾದ ಶಿವರಾಜಕುಮಾರ್‌, ಪುನೀತ್‌ ರಾಜಕುಮಾರ್‌, ಸುದೀಪ್‌, ಉಪೇಂದ್ರ, ಗಣೇಶ್‌ ಮತ್ತು ಯಶ್‌ ಒಂದೊಂದು ತಂಡವನ್ನು ಪ್ರತಿನಿಧಿಸಲಿದ್ದಾರೆ.

ಇದರ ಜೊತೆಗೆ ಆರು ತಂಡಗಳಲ್ಲಿ ಪರಭಾಷೆಯ ಜನಪ್ರಿಯ ಕಲಾವಿದರಾದ ಸುನೀಲ್‌ ಶೆಟ್ಟಿ, ಧನುಷ್‌, ಅರ್ಬಾಜ್‌ ಖಾನ್‌, ಸೋಹೈಲ್‌ ಖಾನ್‌ ಮುಂತಾದವರು ಒಂದೊಂದು ತಂಡದಲ್ಲಿ ಆಡಲಿದ್ದಾರೆ. ಇದಲ್ಲದೆ ಆರು ಅಂತಾರಾಷ್ಟ್ರೀಯ ಆಟಗಾರರು ಈ ಟೂರ್ನಿಯಲ್ಲಿ ಆಡುತ್ತಿರುವುದು ವಿಶೇಷ. ಮತ್ತೂ ಒಂದು ವಿಶೇಷವೆಂದರೆ, ಕಳೆದ ಬಾರಿಯ ಕಪ್‌ ಗೆದ್ದಿರುವ ಶಿವರಾಜಕುಮಾರ್‌, ಈ ಬಾರಿ 10 ದಿನಗಳ ಕಾಲ ಪ್ರಾಕ್ಟೀಸ್‌ ನಡೆಸುತ್ತಿದ್ದಾರೆ.

ಹೌದು, ಈ ವಿಷಯವನ್ನು ಸ್ವತಃ ಸುದೀಪ್‌ ಸ್ಪಷ್ಟಪಡಿಸುತ್ತಾರೆ. "ಶಿವಣ್ಣ ಇದುವರೆಗೂ ಫ್ಯಾಮಿಲಿ ಜೊತೆಗೆ ಪ್ರವಾಸ ಹೋಗುವುದು ಬಿಟ್ಟರೆ, ಮಿಕ್ಕಂತೆ ರಜೆ ತೆಗೆದುಕೊಳ್ಳದೇ ಕೆಲಸ ಮಾಡುತ್ತಾರೆ. ಇದೇ ಮೊದಲ ಬಾರಿಗೆ ಅವರು 10 ದಿನಗಳ ಕಾಲ ಅಭ್ಯಾಸ ಮಾಡುತ್ತಿದ್ದಾರೆ. ಇನ್ನು ಗಣೇಶ್‌ ಅಸ ಪ್ರಾಕ್ಟೀಸ್‌ ಸೆಷನ್‌ಗಳಲ್ಲಿ ಭಾಗವಹಿಸುತ್ತಿದ್ದಾರೆ. ಬೇರೆ ಬೇರೆ ಕಲಾವಿದರು ಸಹ ಅಭ್ಯಾಸದಲ್ಲಿ ನಿರತರಾಗಿದ್ದಾರೆ' ಎನ್ನುತ್ತಾರೆ ಸುದೀಪ್‌.

ಸುದೀಪ್‌ ಎಂಬ ಕ್ರಿಕೆಟ್‌ ಮಾಂತ್ರಿಕ: ಈ ಕುರಿತು ಮಾತನಾಡುವ ಶಿವರಾಜಕುಮಾರ್‌, "ಮೊದಲ ಸೀಸನ್‌ನಲ್ಲಿ ಸುದೀಪ್‌ ಬಂದು ಕೆಸಿಸಿ ಬಗ್ಗೆ ಹೇಳಿದಾಗ, ಏನಿದು ನಾನು ಆಡಬೇಕಾ ಅಂತ ಅನಿಸಿತ್ತು. ಆದರೆ, ಈ ಟೂರ್ನಿಯನ್ನು ಸುದೀಪ್‌ ಶುರು ಮಾಡಿರುವುದರಿಂದ ಏನೋ ಇರುತ್ತದೆ ಅಂತ ನಾನು ಸೇರಿಕೊಂಡೆ. ಟೀಮ್‌ ಆಯ್ಕೆಗೆ ಬಂದಾಗ ಎಲ್ಲರಿಗೂ ಒಂದೊಂದು ಬ್ಲಾಕ್‌ ಕೋಟ್‌ ಕೊಡುವುದರ ಮೂಲಕ ಎಲ್ಲರೂ ಸರಿಸಮ ಎನ್ನುವುದು ತೋರಿಸಿಕೊಟ್ಟರು.

ಅವರ ಶಿಸ್ತು, ಪ್ಯಾಶನ್‌ ನೋಡಿ ಇನ್ನೂ ಖುಷಿಯಾಯಿತು. ಇಲ್ಲಿ ಯಾರೂ ದೊಡ್ಡೋರು, ಚಿಕ್ಕೋರು ಅಂತ ಇಲ್ಲ. ಇದೊಂದು ದೊಡ್ಡ ಪ್ರಯತ್ನ. ನಾನು ಸುದೀಪ್‌ಗೆ ಸಿ.ಎಂ ಅಂತ ಕರೆಯುತ್ತೀನಿ. ಸಿ.ಎಂ ಎಂದರೆ ನನ್ನ ಪ್ರಕಾರ ಕ್ರಿಕೆಟ್‌ ಮಾಂತ್ರಿಕ ಅಂತ. ಕಳೆದ ಬಾರಿಗಿಂತಲೂ ದೊಡ್ಡ ಮಟ್ಟದಲ್ಲಿ ಈ ಟೂರ್ನಿಯನ್ನು ಅವರು ಆಯೋಜಿಸಿದ್ದಾರೆ. ಈ ಬಾರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೂರ್ನಿ ನಡೆಯುತ್ತಿದೆ.

ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅನೇಕ ಪಂದ್ಯಗಳನ್ನ ನೋಡಿದ್ದೇನೆ. ನನಗೆ ಜಿ.ಆರ್‌. ವಿಶ್ವನಾಥ್‌, ಕ್ಲೈವ್‌ ಲಾಯ್ಡ ಅಂದರೆ ಬಹಳ ಇಷ್ಟ. ಬೆಂಗಳೂರು, ಚೆನ್ನೈ, ಮುಂಬೈ ಹೀಗೆ ಎಲ್ಲಾ ಟೆಸ್ಟ್‌ ಪಂದ್ಯಗಳು ನಡೆದರೂ ಹುಡುಕಿಕೊಂಡು ಹೋಗುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬಹಳಷ್ಟು ಪಂದ್ಯಗಳನ್ನು ನೋಡಿದ್ದೇನೆ. ಈಗ ಅಲ್ಲೇ ಆಡುವ ಅವಕಾಶ ಸಿಕ್ಕಿದೆ' ಎಂದು ಖುಷಿಪಡುತ್ತಾರೆ ಶಿವರಾಜಕುಮಾರ್‌.

ಮುಂದಿನ ಟೂರ್ನಿ ವಿದೇಶದಲ್ಲಿ: ಈ ಟೂರ್ನಿಗೆ ತಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎನ್ನುವ ಶಿವರಾಜಕುಮಾರ್‌. "ಸುದೀಪ್‌ ನನ್ನ ಸಹೋದರನಿದ್ದಂತೆ. ಅವರ ಈ ಸಾಹಸಕ್ಕೆ ನನ್ನ ಸಂಪೂರ್ಣ ಸಹಕಾರವಿರುತ್ತದೆ. ನಾವೆಲ್ಲಾ ಯಾವಾಗಲೂ ಜಗಳ ಮಾಡಿಕೊಳ್ತೀವಿ ಅಂತಾರೆ. ಆದರೆ, ನಾವು ಹಾಗಲ್ಲ. ಇಲ್ಲಿ ಯಾರು ಮುನ್ನಡೆಸುತ್ತಾರೆ ಎನ್ನುವುದು ಮುಖ್ಯವಲ್ಲ. ಎಲ್ಲರೂ ಜೊತೆಗೆ ಆಡುತ್ತಿರುವುದು ಮುಖ್ಯ. ಕಳೆದ ಬಾರಿ ಸರಿಯಾಗಿ ಪ್ರಾಕ್ಟೀಸ್‌ ಮಾಡುವುದಕ್ಕೆ ಆಗಲಿಲ್ಲ.

ಈ ಬಾರಿ ಮುಂಚಿತವಾಗಿ ಅಭ್ಯಾಸ ಮಾಡುತ್ತಿದ್ದೀನಿ. ಅಂತಾರಾಷ್ಟ್ರೀಯ ಆಟಗಾರರು, ಬೇರೆ ಭಾಷೆಯ ಕಲಾವಿದರ ಜೊತೆಗೆ ಆಟ ಆಡುತ್ತಿದ್ದೇವೆ.  ಆಟ ನೋಡುವುದಕ್ಕೆ ಬರುವ ಜನರಿಗೆ ಖುಷಿಯಾಗಬೇಕು. ಟಿ20 ವಾತಾವರಣ ಸೃಷ್ಟಿಸಬೇಕು. ಅದೇ ಕಾರಣಕ್ಕೆ ಈ ಬಾರಿ ತಯಾರಿ ಮಾಡಿಕೊಂಡು ಆಡುತ್ತಿದ್ದೇನೆ. ಇನ್ನು ಬಹಳ ಚೆನ್ನಾಗಿ ವ್ಯವಸ್ಥೆ ಮಾಡಿದ್ದಾರೆ. ಅದೆಲ್ಲಕ್ಕಿಂತ ಹೆಚ್ಚಾಗಿ ಟಿಕೆಟ್‌ನಿಂದ ಬರುವ ಹಣವನ್ನು ಕೊಡಗು ಸಂತ್ರಸ್ತರಿಗೆ ಕೊಡುತ್ತಿರುವುದು ಇನ್ನಷ್ಟು ಖುಷಿ ತಂದಿದೆ' ಎನ್ನುತ್ತಾರೆ ಶಿವರಾಜಕುಮಾರ್‌.

ಬರಬೇಡಿ ಅಂತ ಯಾರಿಗೂ ಗೇಟ್‌ ಹಾಕಿಲ್ಲ: ಇನ್ನು ಈ ಬಾರಿಯ ಟೂರ್ನಿಯಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ದೊಡ್ಡ ಸ್ಟಾರ್‌ಗಳು ಆಡುತ್ತಿದ್ದಾರೆ, ದರ್ಶನ್‌ ಅವರೊಬ್ಬರನ್ನು ಬಿಟ್ಟು. ಕಳೆದ ಸೀಸನ್‌ನಲ್ಲೂ ದರ್ಶನ್‌ ಅವರು ಭಾಗವಹಿಸಿರಲಿಲ್ಲ. ಈ ಕುರಿತು ಸುದೀಪ್‌ ಅವರನ್ನು ಕೆಸಿಸಿ ಪತ್ರಿಕಾಗೋಷ್ಠಿಯ ನಂತರ ಮಾಧ್ಯಮದರು ಕೇಳಿದಾಗ, "ನಾವು ಯಾರಿಗೂ ಬರಬೇಡಿ ಅಂತ ಗೇಟ್‌ ಹಾಕಿಲ್ಲ' ಎಂದು ಸ್ಪಷ್ಟಪಡಿಸಿದರು. ಈ ಕುರಿತು ಮಾತನಾಡಿದ ಸುದೀಪ್‌, "ನನ್ನ ಕಡೆಯಿಂದ ತಪ್ಪಾದರೆ, ಯಾರನ್ನ ಕೇಳಬೇಕು? ನನ್ನನ್ನು ತಾನೇ.

ಅದು ಬಿಟ್ಟು, ಶಿವರಾಜಕುಮಾರ್‌ ಮನೆ ಹತ್ತಿರ ಹೋಗಿ ಕೇಳುವುದು ಸರಿಯಾ? ಹಾಗೆಯೇ ಈ ವಿಷಯದಲ್ಲಿ ನೀವು ಅವರನ್ನು ಕೇಳಬೇಕು. ನನಗೆ ಸಂಬಂಧಿಸಿದ ಪ್ರಶ್ನೆಯನ್ನು ಮಾತ್ರ ಇಲ್ಲಿ ಕೇಳಿ. ನಾನು ನನ್ನ ಜೀವನಕ್ಕೆ ಸಂಬಂಧಪಟ್ಟಂತೆ ಹೇಳಬಲ್ಲೆ. ಒಂದು ಹಂತದಲ್ಲಿ ಹೆಂಡತಿ ಮತ್ತು ಫ್ಯಾಮಿಲಿ ವಿಷಯದಲ್ಲಿ ಮಾತನಾಡಬಲ್ಲೆ. ಅದು ಬಿಟ್ಟು ಬೇರೆಯವರ ಲೈಫ್ ಬಗ್ಗೆ ಮಾತನಾಡುವುದಕ್ಕೆ ಸಾಧ್ಯವಿಲ್ಲ. ನನಗೆ ಏನು ಸಂಬಂಧಪಟ್ಟಿದೆಯೋ ಅದನ್ನ ಮಾತ್ರ ಕೇಳಿ' ಎಂದು ಸುದೀಪ್‌ ಹೇಳಿದರು.


Trending videos

Back to Top