CONNECT WITH US  

ಅದಿತಿ ಈಗ ಮಿನುಗು ನಕ್ಷತ್ರ!

ಆಪರೇಷನ್‌ಗೆ ರೆಡಿಯಾದ ಯಜ್ಞಾಶೆಟ್ಟಿ

ಕನ್ನಡದಲ್ಲೀಗ ಸಸ್ಪೆನ್ಸ್‌ ಥ್ರಿಲ್ಲರ್‌ ಚಿತ್ರಗಳ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಿವೆ. ಆ ಸಾಲಿಗೆ ಈಗ "ಆಪರೇಷನ್‌ ನಕ್ಷತ್ರ' ಚಿತ್ರ ಹೊಸ ಸೇರ್ಪಡೆ. ಹೌದು, ಕಲಾವಿದರು ಹಾಗೂ ತಂತ್ರಜ್ಞರನ್ನು ಹೊರತುಪಡಿಸಿ ಹೊಸಬರೇ ಸೇರಿಕೊಂಡು "ಆಪರೇಷನ್‌' ಮಾಡಲು ಹೊರಟಿದ್ದಾರೆ. ಈಗಾಗಲೇ ಸದ್ದಿಲ್ಲದೆ ಚಿತ್ರೀಕರಣ ಕೂಡ ಶುರುವಾಗಿದೆ.  ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ನಾಯಕಿ ಪ್ರಧಾನ ಚಿತ್ರ.

ಹಾಗಂತ, ನಾಯಕಿಗಿದ್ದಷ್ಟೇ ಪ್ರಾಮುಖ್ಯತೆ ನಾಯಕನಿಗೂ ಇದೆ. ಅಂದಹಾಗೆ, ಈ ಚಿತ್ರಕ್ಕೆ ಯಜ್ಞಾ ಶೆಟ್ಟಿ ಮತ್ತು ಅದಿತಿ ಪ್ರಭುದೇವ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರಿಗೂ ಇಲ್ಲಿ ಸರಿಸಮಾನ ಪಾತ್ರವಿದೆ. ಇನ್ನು, "ಜಲ್ಸಾ' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಿರಂಜನ್‌ ಒಡೆಯರ್‌ ಈ ಚಿತ್ರದ ಹೀರೋ. ಅವರೊಂದಿಗೆ ಲಿಖೀತ್‌ ಸೂರ್ಯ ಕೂಡ ನಾಯಕರಾಗಿ ನಟಿಸುತ್ತಿದ್ದಾರೆ. ಅಲ್ಲಿಗೆ  ಈ ಚಿತ್ರಕ್ಕೆ ಇಬ್ಬರು ನಾಯಕಿಯರು.

ಅವರಿಬ್ಬರಿಗೆ ನಾಯಕರು ಕಾಣಿಸಿಕೊಳ್ಳುತ್ತಿದ್ದಾರೆ. ಮಧುಸೂದನ್‌ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಈ ಹಿಂದೆ "ಅಯೋಧ್ಯೆಪುರ' ಚಿತ್ರ ನಿರ್ಮಿಸಿದ್ದ ಮಧುಸೂದನ್‌, ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಫೈವ್‌ಸ್ಟಾರ್‌ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕೆ ಐವರು ಗೆಳೆಯರು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಸಾಫ್ಟ್ವೇರ್‌ ಕ್ಷೇತ್ರದಲ್ಲಿರುವ ನಂದಕುಮಾರ್‌, ಕಿಶೋರ್‌, ಅರವಿಂದ್‌ ಮೂರ್ತಿ, ರಾಧಾಕೃಷ್ಣ ನಿರ್ಮಾಪಕರು. ಇವರ ಜತೆ ನಿರ್ದೇಶಕ ಮಧುಸೂದನ್‌ ಕೂಡ ನಿರ್ಮಾಣಕ್ಕೆ ಸಾಥ್‌ ಕೊಟ್ಟಿದ್ದಾರೆ. ಇವರೆಲ್ಲರಿಗೂ ಇದು ಮೊದಲ ಅನುಭವ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಪೂರೈಸಿರುವ ಚಿತ್ರತಂಡ, ಎರಡನೇ ಹಂತದ ಚಿತ್ರೀಕರಣ ಶುರುಮಾಡಿದೆ. "ಆಪರೇಷನ್‌ ನಕ್ಷತ್ರ' ಕುರಿತು ವಿವರ ಕೊಡುವ ನಿರ್ದೇಶಕ ಮಧುಸೂದನ್‌, "ಇದೊಂದು ಸಸ್ಪೆನ್ಸ್‌ ಥ್ರಿಲ್ಲರ್‌ ಕಥೆ.

ಇದೇ ಮೊದಲ ಸಲ ಯಜ್ಞಾ ಶೆಟ್ಟಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರೇ ಚಿತ್ರದ ಹೈಲೆಟ್‌. ಉಳಿದಂತೆ ಅದಿತಿ, ನಿರಂಜನ್‌ ಒಡೆಯರ್‌ ಮತ್ತು ಲಿಖೀತ್‌ ಸೂರ್ಯ ಈ ನಾಲ್ವರ ಸುತ್ತವೇ ಕಥೆ ಸಾಗುತ್ತದೆ. ಒಬ್ಬ ಮಿಲೇನಿಯರ್‌ ಆಕಸ್ಮಿಕವಾಗಿ ಸಾವಿಗೀಡಾದ ಬಳಿಕ ನಡೆಯುವ ವಿಚಿತ್ರ ಘಟನೆಗಳು ಚಿತ್ರದ ಕಥಾವಸ್ತು.

ಇಲ್ಲಿ ಮೋಸ, ದ್ವೇಷ, ಪ್ರೀತಿ, ಪ್ರಣಯ, ಆ್ಯಕ್ಷನ್‌, ಹಾಸ್ಯ ಇತ್ಯಾದಿ ಅಂಶಗಳು ತುಂಬಿಕೊಂಡಿವೆ' ಎಂದು ಚಿತ್ರದ ಬಗ್ಗೆ ಮಾಹಿತಿ ಕೊಡುತ್ತಾರೆ ನಿರ್ದೇಶಕ ಮಧುಸೂದನ್‌. ಚಿತ್ರಕ್ಕೆ ವೀರ್‌ ಸಮರ್ಥ್ ಹಿನ್ನೆಲೆ ಸಂಗೀತ ನೀಡುತ್ತಿದ್ದಾರೆ. ಚಿತ್ರದ ಇನ್ನೊಂದು ವಿಶೇಷವೆಂದರೆ, ಇದೇ ಮೊದಲ ಬಾರಿಗೆ "ಆಪರೇಷನ್‌ ನಕ್ಷತ್ರ' ಚಿತ್ರಕ್ಕೆ ಜೋರ್ಡಾನ್‌ ದೇಶದ ಲಾಮ ಜಕಾರಿಯ ಎಂಬ ಸಂಗೀತ ನಿರ್ದೇಶಕಿ ಚಿತ್ರದಲ್ಲಿರುವ ಎರಡು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ.

ಲಂಡನ್‌ನಲ್ಲಿ ಆ ಹಾಡುಗಳ ಮಾಸ್ಟರಿಂಗ್‌ ನಡೆಯಲಿದೆ ಎಂಬುದು ಚಿತ್ರತಂಡದ ಹೇಳಿಕೆ. ಚಿತ್ರದಲ್ಲಿ ದೀಪಕ್‌ ರಾಜ್‌ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಉಳಿದಂತೆ ಶ್ರೀನಿವಾಸ ಪ್ರಭು, ಗೋವಿಂದೇಗೌಡ, ಗಣೇಶ್‌, ಅರವಿಂದ್‌ ಮೂರ್ತಿ ಇತರರು ನಟಿಸುತ್ತಿದ್ದಾರೆ. ಕಿಶೋರ್‌ ಸಂಭಾಷಣೆ ಬರೆದರೆ, "ಅಥರ್ವ' ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಶಿವಸೀನ ಚಿತ್ರಕ್ಕೆ ಛಾಯಾಗ್ರಾಹಕರು.


Trending videos

Back to Top