CONNECT WITH US  

ವಿಷ್ಣು ಸ್ಮಾರಕ ಆಗದಿದ್ದರೆ ಬೇರೆ ನಿರ್ಧಾರ

ಇಷ್ಟು ವರ್ಷದ ತಾಳ್ಮೆ ಈಗಿಲ್ಲ, ಮಾಡದಿದ್ದರೆ ಬೇಕಿಲ್ಲ-ಭಾರತಿ ವಿಷ್ಣುವರ್ಧನ್‌ ಅಭಿಪ್ರಾಯ

"ಈ ವರ್ಷ, ಮುಂದಿನ ವರ್ಷ ಅಂತ ಹೇಳುತ್ತಲೇ ಒಂಭತ್ತು ವರ್ಷ ಆಗೋಯ್ತು. ತಾಳ್ಮೆ ಅನ್ನೋದು ಎಲ್ಲಿಯವರೆಗೆ ಇರುತ್ತೆ. ನೋಡೋಣ, ಹತ್ತನೇ ವರ್ಷದ ಒಳಗೆ ಆಗದೇ ಇದ್ದರೆ, ಬೇಕಾಗಿಲ್ಲ. ಇಷ್ಟರಲ್ಲೇ ಒಂದು ನಿರ್ಧಾರಕ್ಕೆ ಬರುತ್ತೇವೆ ...' ಹೀಗೆ ಬೇಸರದಿಂದಲೇ ಹೇಳಿಕೊಂಡರು ಭಾರತಿ ವಿಷ್ಣುವರ್ಧನ್‌. ಅವರು ಹೇಳಿಕೊಂಡಿದ್ದು ಡಾ.ವಿಷ್ಣುವರ್ಧನ್‌ ಅವರ ಸ್ಮಾರಕ ಕುರಿತು. ಹೌದು, "ವಿಷ್ಣು ಸ್ಮಾರಕ ಕುರಿತಂತೆ ಸಾಕಷ್ಟು ಗೊಂದಲ ಉಂಟಾಗಿದ್ದು ಗೊತ್ತೇ ಇದೆ.

ಸರ್ಕಾರ ಕ್ರಮ ಕೈಗೊಂಡರೂ ಅಲ್ಲೊಂದು ಸಮಸ್ಯೆ ಎದುರಾಗುತ್ತಿದೆ. ಸರ್ಕಾರ ಮನಸ್ಸು ಮಾಡಿದರೆ, ಕೇವಲ ಗಂಟೆಗಳಲ್ಲೇ ವಿಷ್ಣು ಸ್ಮಾರಕ ನಿರ್ಮಾಣಕ್ಕಿರುವ ಅಡ್ಡಿ ದೂರ ಮಾಡಬಹುದು. ಆದರೆ, ಯಾಕೆ ಆಗುತ್ತಿಲ್ಲ ಎಂಬುದೇ ದೊಡ್ಡ ಪ್ರಶ್ನೆ' ಎನ್ನುತ್ತಲೇ ಮಾತಿಗಿಳಿದರು ಭಾರತಿ ವಿಷ್ಣುವರ್ಧನ್‌. "ಬೆಂಗಳೂರಲ್ಲಿ ಸ್ಮಾರಕ ನಿರ್ಮಾಣಕ್ಕೆ ಅಡ್ಡಿಯಾಯ್ತು ಎಂಬ ಕಾರಣಕ್ಕೆ ವರ್ಷಗಟ್ಟಲೆ ಕಾಯಬೇಕಾಯ್ತು. ಇನ್ನೆಲ್ಲೋ ಜಾಗ ತೋರಿಸಿದರು.

ಆ ಜಾಗ ಚಿಕ್ಕದ್ದಾಗಿತ್ತು. ಕೊನೆಗೆ ಅಲ್ಲಿ ಬೇಡ ಮೈಸೂರಲ್ಲಿ ಕೊಡ್ತೀವಿ ಅಂದ್ರು. ಅಲ್ಲಿ ಹೋಗೋಣ ಅಂದಾಗ, ಅಭಿಮಾನಿಗಳು ಪ್ರೀತಿಯಿಂದ ಮನವಿ ಮಾಡಿ ಬೇಡ ಅಂದರು. ಕೊನೆಗೆ ಅಲ್ಲಿ ಹೋಗುವುದು ಬೇಡ ಅಂತ ನಿರ್ಧರಿಸಿದೆವು. ಅಷ್ಟರಲ್ಲೇ ಮೂರುವರೆ ವರ್ಷ ಕಳೆದುಹೋಯ್ತು. ಇಲ್ಲೂ ಜಾಗ ಸಿಗಲಿಲ್ಲ. ಮೈಸೂರಲ್ಲಿ ಕೊಟ್ಟ ಜಾಗಕ್ಕೂ ಈಗ ತೊಂದರೆ ಎದುರಾಗಿದೆ. ಇನ್ನೂ ಎಷ್ಟು ವರ್ಷಗಳ ಕಾಲ ಹೀಗೆ ಅಲೆದಾಡಲಿ.

ಮೈಸೂರಿನಲ್ಲಿ ತೋರಿಸಿದ ಜಾಗದಲ್ಲಿ ಪೂಜೆಯೂ ಆಯ್ತು. ಫೌಂಡೇಷನ್‌ ಆಗಿ, ಕಾಂಪೌಂಡ್‌ ಕೂಡ ಹಾಕಬೇಕಿತ್ತು. ಆ ವೇಳೆ ಯಾರೋ ಬಂದು ಅದು ಗೋಮಾಳ ಜಾಗ ಅಂತ ಸಮಸ್ಯೆ ಮುಂದಿಟ್ಟರು. ಗೋಮಾಳ ಜಾಗ ರೈತರಿಗೆ ಹೇಗೆ ಸೇರುತ್ತೆ ಗೊತ್ತಿಲ್ಲ. ಅದಕ್ಕೆ ಸರ್ಕಾರ ಉತ್ತರ ಕೊಡಬೇಕು. ಸರ್ಕಾರ ಮುತುವರ್ಜಿ ವಹಿಸಿದರೆ ಎಲ್ಲವನ್ನೂ ಬೇಗ ಇತ್ಯರ್ಥ ಪಡಿಸಬಹುದು. ಆದರೆ, ಆಗುತ್ತಿಲ್ಲ. ಇಷ್ಟು ವರ್ಷ ಕಾದಿದ್ದೇವೆ.

ಮುಂದೆ ಏನಾಗುತ್ತೆ ನೋಡೋಣ. ನನ್ನದ್ದೊಂದು ಪ್ಲಾನಿಂಗ್‌ ಇದೆ. ನೀವೆಲ್ಲರೂ ಒಪ್ಪಿದರೆ ಅದನ್ನು ಇಷ್ಟರಲ್ಲೇ ಹೇಳ್ತೀವಿ' ಎಂಬುದು ಭಾರತಿ ಅವರ ಮಾತು. "ಯಜಮಾನರಿಗೆ ಮೈಸೂರಲ್ಲೇ ಇರಬೇಕೆಂಬ ಆಸೆ ಇತ್ತು. ನಮಗೂ ಅದೇ ಆಸೆ ಇದೆ. ಆದರೆ, ಯಾರ್ಯಾರೋ ಏನೇನೋ ಸುದ್ದಿ ಹಬ್ಬಿಸುತ್ತಿದ್ದಾರೆ. ಅದು ತಪ್ಪು. ಯಾರಿಗೆ ಏನೇ ಪ್ರಶ್ನೆಗಳಿದ್ದರೂ ನೇರವಾಗಿ ಬಂದು ಕೇಳಲಿ. ಆದರೆ, ವಿನಾಕಾರಣ ತಪ್ಪು ಮಾಹಿತಿ ಕೊಟ್ಟು ಸುಳ್ಳು ಹಬ್ಬಿಸುವುದು ಬೇಡ.

ಯಜಮಾನರ ಸ್ಮಾರಕ ಒಬ್ಬರಿಂದ ಆಗುವಂಥದ್ದಲ್ಲ. ಎಲ್ಲರೂ ಕೈ ಜೋಡಿಸಬೇಕಿದೆ. ಇದರ ಬಿಸಿ ಕೇವಲ ಸೆಪ್ಟೆಂಬರ್‌, ಡಿಸೆಂಬರ್‌ನಲ್ಲಿ ಮಾತ್ರ ಆಗುತ್ತೆ. ಉಳಿದಂತೆ ಆಗುವುದಿಲ್ಲ. ಸರ್ಕಾರ ಕ್ರಮ ಕೈಗೊಂಡರೆ ಎಲ್ಲವೂ ಸಾಧ್ಯ. ಇನ್ನು, ಅಭಿಮಾನಿ ಸಂಘಗಳ ಜೊತೆ ಯಾವುದೇ ಬೇಸರವಿಲ್ಲ. ಆದರೆ, ಕೆಲವರಿಗೆ ವಿಷಯ ಗೊತ್ತಿಲ್ಲದೆಯೇ ಏನೇನೋ ತಪ್ಪು ಅರ್ಥ ಕಲ್ಪಿಸಿಕೊಂಡಿದ್ದಾರೆ. ರಾಷ್ಟ್ರೀಯ ಉತ್ಸವಕ್ಕೆ ಕುಟುಂಬ ಯಾಕೆ ಬರಲಿಲ್ಲ ಎಂಬ ಪ್ರಶ್ನೆಯೇ ದೊಡ್ಡದಾಗುತ್ತಿದೆ.

ಯಜಮಾನರು ಇದ್ದಾಗ ಅಭಿಮಾನಿಗಳೇ ಮನೆಗೆ ಬರುತ್ತಿದ್ದರು. ಅವರು ಎಲ್ಲೂ ಹೊರಗೆ ಹೋಗುತ್ತಿರಲಿಲ್ಲ. ಹಾಗೆಯೇ, ಬರುವ ಅಭಿಮಾನಿಗೆ ಹೂವು, ಹಾರ ತರಬೇಡಿ ಅನ್ನುತ್ತಿದ್ದರು. ಆ ಹಣದಲ್ಲಿ ನಿಮ್ಮ ಮಕ್ಕಳಿಗೆ ಪುಸ್ತಕ ಕೊಡಿಸಿ ಎನ್ನುತ್ತಿದ್ದರು. ಅವರ ಹೆಸರಲ್ಲಿ ಹಣ ಖರ್ಚು ಮಾಡಿ ಕಾರ್ಯಕ್ರಮ ನಡೆಸುವ ಬದಲು, ಮಕ್ಕಳಿಗೆ ಪುಸ್ತಕ, ಪೆನ್ನು ಇತ್ಯಾದಿ ಅಗತ್ಯ ವಸ್ತು ಕೊಡಿಸಿ. ಅದು ಬಿಟ್ಟು, ವಿಷ್ಣುವರ್ಧನ್‌ ಕಾರ್ಯಕ್ರಮಕ್ಕೆ ಅವರ ಕುಟುಂಬದವರೇ ಇಲ್ಲ ಅಂತೆಲ್ಲಾ ಹೇಳುವುದು ಬೇಡ. ಆಹ್ವಾನಿಸಿದರೂ, ನಮಗೆ ಎಲ್ಲಾ ಕಡೆ ಹೋಗಲು ಸಾಧ್ಯವೂ ಇಲ್ಲ.

ನಮಗೆ ಸಾಕಷ್ಟು ಕೆಲಸಗಳಿವೆ. ಓಡಾಡಲೇಬೇಕಿದೆ. ಹಾಗಾಗಿ ಯಾರೂ ಅಸಮಾಧಾನ ಪಟ್ಟುಕೊಳ್ಳಬೇಕಿಲ್ಲ' ಎನ್ನುವ ಭಾರತಿ ವಿಷ್ಣುವರ್ಧನ್‌, "ಕೆಲವರು ಸ್ವಾರ್ಥಕ್ಕಾಗಿ ಮಾಡುತ್ತಿದ್ದಾರೆ. ಆದರೆ, ಒಂದು ಖುಷಿಯಂತೂ ಇದೆ. ಯಜಮಾನರ ಹೆಸರು ಹೇಳಿ ಎಷ್ಟೋ ಜನ ಊಟ ಮಾಡುತ್ತಿದ್ದಾರೆ ಅಷ್ಟು ಸಾಕು. ಅವರ ಹೆಸರ ಕಾರ್ಯಕ್ರಮಕ್ಕೆ ಅಲ್ಲಿಗೆ ಬನ್ನಿ ಇಲ್ಲಿಗೆ ಬನ್ನಿ ಅಂತ ದಯವಿಟ್ಟು ಕರೆಯಬೇಡಿ. ಅಭಿಮಾನವಿದ್ದರೆ, ಒಳ್ಳೆಯ ಕೆಲಸ ಮಾಡಿ, ಖರ್ಚು ಮಾಡುವ ಬದಲು ಅಗತ್ಯವಿದ್ದವರಿಗೆ ನೆರವಾಗಿ' ಎಂದು ಮನವಿ ಮಾಡಿಕೊಳ್ಳುತ್ತಾರೆ ಭಾರತಿ.

ವಿಷ್ಣು ಹುಟ್ಟುಹಬ್ಬಕ್ಕೆ ಹೃದಯ ಗೀತೆ: ಸೆಪ್ಟೆಂಬರ್‌ 18ರಂದು  ಡಾ.ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬ. ಈ ಬಾರಿ ಅವರ 68 ನೇ ಜನ್ಮದಿನದ ಅಂಗವಾಗಿ ಹಲವು ಕಾರ್ಯಕ್ರಮಗಳು ಜರುಗಲಿವೆ. ವಿಭಾ ಚಾರಿಟಬಲ್‌ ಟ್ರಸ್ಟ್‌ ಹಾಗು ರೋಟರಿ ಬೆಂಗಳೂರು ಸೌಥ್‌ ಈಸ್ಟ್‌ ಸಂಯೋಜನೆಯಲ್ಲಿ ಸೆ.14 ರಂದು "ಹೃದಯ ಗೀತೆ' ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ. ಅಂದು ಸಂಜೆ 6 ಗಂಟೆಗೆ ಚೌಡಯ್ಯ ಮೆಮೋರಿಯಲ್‌ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮ, ಮಕ್ಕಳ ಹೃದಯ ಶಸ್ತ್ರಚಿಕಿತ್ಸೆ ದೇಣಿಗೆಗಾಗಿ ನಡೆಯಲಿದೆ.

ಆ ಕಾರ್ಯಕ್ರಮದಿಂದ ಬಂದಂತಹ ಹಣ ಸುಮಾರು 140 ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ವಿನಿಯೋಗಿಸಲು ತೀರ್ಮಾನಿಸಲಾಗಿದೆ. "ನೀಡಿ ಹಾರ್ಟ್‌ ಫೌಂಡೇಷನ್‌' ಮತ್ತು ರೋಟರಿ ಬೆಂಗಳೂರು ಸೌಥ್‌ ಈಸ್ಟ್‌ ಜೊತೆ ಸೇರಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗದ ಅನೇಕ ನಟ,ನಟಿಯರು, ಗಾಯಕ,ಗಾಯಕಿಯರು ಭಾಗವಹಿಸುತ್ತಿದ್ದಾರೆ.

ಅಂಬರೀಷ್‌, ಸುಮಲತಾ, ಭಾರತಿ ವಿಷ್ಣುವರ್ಧನ್‌, ರವಿಚಂದ್ರನ್‌, ಶಿವರಾಜಕುಮಾರ್‌, ರಮೇಶ್‌ ಅರವಿಂದ್‌, ಜಗ್ಗೇಶ್‌, ಬಿ.ಕೆ. ಸುಮಿತ್ರಾ, ಶ್ರುತಿ, ಪ್ರೇಮ, ಗುರುಕಿರಣ್‌, ಲಕ್ಷ್ಮೀ ಗೋಪಾಲಸ್ವಾಮಿ, ವಿಜಯರಾಘವೇಂದ್ರ, ಅನಿರುದ್ಧ, ಶರಣ್‌, ಶ್ರೀಮುರಳಿ, ನವೀನ್‌ ಕೃಷ್ಣ, ಮಾಸ್ಟರ್‌ ಆನಂದ್‌, ಸುನೀಲ್‌ ರಾವ್‌, ರಿಶಭ್‌ ಶೆಟ್ಟಿ, ಚೈತ್ರಾ, ಅರ್ಚನಾ ಉಡುಪ, ಶರ್ಮಿಳಾ ಮಲಾ°ಡ್‌, ಸಿಂಚನ್‌ ದೀಕ್ಷಿತ್‌, ಕೀರ್ತಿ ಅನಿರುದ್ಧ ಸೇರಿದಂತೆ ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸೆ.18 ರಂದು ಸುಚಿತ್ರಾ ಫಿಲ್ಮ್ಸೊಸೈಟಿಯಲ್ಲಿ ಅನಿರುದ್ಧ ಅವರು ರಚಿಸಿ, ನಿರ್ದೇಶಿಸಿರುವ ಆರು ಕಿರುಚಿತ್ರ ಪ್ರದರ್ಶನವನ್ನೂ ಏರ್ಪಡಿಸಲಾಗಿದೆ. ಸಮಾಜದ ಕಳಕಳಿ ಹೊಂದಿರುವ ಕಿರುಚಿತ್ರೋತ್ಸವದಲ್ಲಿ ಪ್ರತಿಯೊಬ್ಬರೂ ಪಾಲ್ಗೊಳ್ಳುವಂತೆ ಭಾರತಿ ವಿಷ್ಣುವರ್ಧನ ಮತ್ತು ಅನಿರುದ್ಧ ಮನವಿ ಮಾಡಿದ್ದಾರೆ. ಎಂದಿನಂತೆ ವಿಷ್ಣುವರ್ಧನ್‌ ಅವರ ಹುಟ್ಟುಹಬ್ಬದ ದಿನದಂದು ರಕ್ತದಾನ, ಆರೋಗ್ಯ ಶಿಬಿರ ಇತ್ಯಾದಿ ಕಾರ್ಯಕ್ರಮಗಳೂ ಜರುಗಲಿವೆ.

Trending videos

Back to Top