CONNECT WITH US  

ನಾನು ಬಿಝಿಯಾಗಿದ್ದೆ

ಕುರುಕ್ಷೇತ್ರ-ಕೆಜಿಎಫ್ನಲ್ಲಿ ಅವಕಾಶ ತಪ್ಪಿದ್ದರ ಕುರಿತು ಲಕ್ಷ್ಮೀ ರೈ ಸ್ಪಷ್ಟನೆ

ನಟಿ ಲಕ್ಷ್ಮೀ ರೈ ನಾಲ್ಕು ವರ್ಷಗಳ ನಂತರ ಕನ್ನಡಕ್ಕೆ ಬಂದಿರೋದು ಗೊತ್ತೇ ಇದೆ. "ಝಾನ್ಸಿ' ಚಿತ್ರ ಒಪ್ಪಿಕೊಂಡಿರುವುದೂ ಗೊತ್ತು. ಆ ಚಿತ್ರಕ್ಕೆ ಈಗಾಗಲೇ ಚಾಲನೆಯೂ ಸಿಕ್ಕಾಗಿದೆ. ಚಿತ್ರದ ಶೀರ್ಷಿಕೆಯೇ ಹೇಳುವಂತೆ, ಅದು ನಾಯಕಿ ಪ್ರಧಾನ ಚಿತ್ರ. ಪಕ್ಕಾ ಮಾಸ್‌ ಅಂಶಗಳೇ ಹೆಚ್ಚು. ಭರ್ಜರಿ ಆ್ಯಕ್ಷನ್‌ ಪ್ಯಾಕ್‌ ಇರುವ ಸಿನಿಮಾ. ಬರೋಬ್ಬರಿ ನಾಲ್ಕು ರಿಸ್ಕೀ ಫೈಟು, ಚೇಸಿಂಗ್‌ ಇತ್ಯಾದಿ ಚಿತ್ರದ ಹೈಲೆಟ್‌. 

ಸಾಮಾನ್ಯವಾಗಿ ಲಕ್ಷ್ಮೀ ರೈ ಅಂದಾಕ್ಷಣ, ಎಲ್ಲರಿಗೂ ನೆನಪಾಗೋದು ಗ್ಲಾಮರ್‌. ಲಕ್ಷ್ಮೀ ರೈ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿರುವುದುಂಟು. ಆದರೆ, ಇದೇ ಮೊದಲ ಸಲ ಅವರು ಟಾಮ್‌ ಬಾಯ್‌ ಪಾತ್ರ ಮಾಡುತ್ತಿದ್ದಾರೆ. ಪಕ್ಕಾ ಗಂಡುಬೀರಿ ಹುಡುಗಿಯಾಗಿ ರೌಡಿಗಳ ಜೊತೆ ಹೊಡೆದಾಡಲಿದ್ದಾರೆ. ಇಷ್ಟೆಲ್ಲಾ ರಿಸ್ಕ್ ತೆಗೆದುಕೊಳ್ಳಲಿರುವ ಲಕ್ಷ್ಮೀ ರೈ, ಆ ಪಾತ್ರಕ್ಕೆ ಬೇಕಾದ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರೆ.

ಅವರೇ ಹೇಳುವಂತೆ, ಮಾರ್ಷಲ್‌ ಆರ್ಟ್ಸ್ ಕಲಿಯುತ್ತಿದ್ದಾರೆ. ಈ ಚಿತ್ರದಲ್ಲಿ ಸಿಕ್ಕಾಪಟ್ಟೆ ಆ್ಯಕ್ಷನ್‌ ಇರುವುದರಿಂದ ಅಲ್ಲಿ ಪಕ್ವತೆ ಇರಬೇಕು ಎಂಬ ಉದ್ದೇಶದಿಂದ ಲಕ್ಷ್ಮೀ ರೈ, ಮುಂಬೈನಲ್ಲಿ ಮಾರ್ಷಲ್‌ ಆರ್ಟ್ಸ್ ತರಬೇತಿ ಪಡೆಯುತ್ತಿದ್ದಾರೆ. ಸದ್ಯ ಮುಂಬೈನಲ್ಲೇ ನೆಲೆಸಿರುವ ಲಕ್ಷ್ಮೀ ರೈ, ತರಬೇತುದಾರ ನಿಜಾಮ್‌ ಎಂಬುವವರ ಬಳಿ ಮಾರ್ಷಲ್‌ ಆರ್ಟ್ಸ್ ಕಲಿಯುತ್ತಿದ್ದಾರೆ. ಅವರೊಂದಿಗೆ ವಿದೇಶಿ ತರಬೇತುದಾರ ಕೂಡ ಮಾರ್ಷಲ್‌ ಆರ್ಟ್ಸ್ ಹೇಳಿಕೊಡುತ್ತಿದ್ದಾರೆ.

ಬಾಲಿವುಡ್‌ ಸ್ಟಾರ್ಗಳಿಗೆ ಸ್ಟಂಟ್ಸ್‌ ಹೇಳಿಕೊಡುವ ತರಬೇತುದಾರರಿಂದಲೇ ತರಬೇತಿ ಪಡೆಯುತ್ತಿರುವುದಾಗಿ ಹೇಳುವ ಲಕ್ಷ್ಮೀ ರೈ, "ಝಾನ್ಸಿ' ಬಗ್ಗೆ ಆಪಾರ ನಂಬಿಕೆ ಇಟ್ಟುಕೊಂಡಿದ್ದಾರೆ. ಕಥೆ, ಪಾತ್ರ ಚೆನ್ನಾಗಿದೆ ಎಂಬ ಕಾರಣದಿಂದಲೇ ಅವರು ಬಿಜಿ ಇದ್ದರೂ, ಡೇಟ್‌ ಕೊಟ್ಟಿದ್ದಾರಂತೆ. "ನನ್ನನ್ನು ಹಾಕಿ ಸಿನಿಮಾ ಮಾಡುವವರಿಗೆ ಗ್ಲಾಮರ್‌ ಬೇಕೇ ಬೇಕು. ಇಲ್ಲೂ ಗ್ಲಾಮರ್‌ ಇದೆಯಾದರೂ, ಹೊಸ ರೀತಿಯಲ್ಲಿ ನನ್ನನ್ನು ತೋರಿಸಲಾಗುತ್ತಿದೆ.

ನನಗೆ ಡ್ಯಾನ್ಸ್‌ ಅಂದರೆ ಇಷ್ಟ. ಹಾಗೇ, ಆ್ಯಕ್ಷನ್‌ ಕೂಡ ಇಷ್ಟ. ಆದರೆ, ಇದುವರೆಗೆ ಅಂಥದ್ದೊಂದು ಅವಕಾಶ ಸಿಕ್ಕಿರಲಿಲ್ಲ. ಈಗ ಸಿಕ್ಕಿದೆ. ಇಲ್ಲಿ ರಿಸ್ಕೀ ಸ್ಟಂಟ್ಸ್‌ ಇದೆ, ಚೇಸಿಂಗ್‌ ಇದೆ, ಬೈಕ್‌ ಓಡಿಸ್ತೀನಿ, ಖಡಕ್‌ ಡೈಲಾಗ್‌ ಹೇಳ್ತೀನಿ. ರಿಯಲ್‌ ಲೈಫ್ನಲ್ಲಿ ನಾನು ಯಾರಿಗೂ ಕೇರ್‌ ಮಾಡಲ್ಲ. ನೇರ ನುಡಿಯ ವ್ಯಕ್ತಿತ್ವ. ರೀಲ್‌ನಲ್ಲೂ ಅಂಥದ್ದೇ ಪಾತ್ರ ಸಿಕ್ಕಿದೆ. ನೇರ ಮಾತಾಡುವ ನನಗೆ ಪ್ರೀತಿಸೋರು ಇದ್ದಾರೆ, ದ್ವೇಷಿಸೋರು ಇದ್ದಾರೆ.

ನಾನು ಮಾತ್ರ ನನ್ನ ಪಾಡಿಗೆ ಕೆಲಸ ಮಾಡುತ್ತಾ ಹೋಗ್ತಿàನಿ. ನನಗೆ ಅನ್‌ ಕಂಫ‌ರ್ಟ್‌ಬಲ್‌ ಜೋನ್‌ನಲ್ಲಿ ಕೆಲಸ ಮಾಡಲು ಇಷ್ಟವಿಲ್ಲ. ಬೇರೆಯವರನ್ನು ನೋಡಿ ಕಾಪಿ ಮಾಡುವ ಹುಚ್ಚಾ ಇಲ್ಲ. ನನ್ನ ಶೈಲಿಯಲ್ಲೇ ನಾನು ನಟನೆ ಮಾಡ್ತೀನಿ. ಆದರೂ, ಒಂದಷ್ಟು ಕಾಂಟ್ರವರ್ಸಿ ನನ್ನನ್ನು ಸುತ್ತಿಕೊಂಡಿತು. ಅದಕ್ಕೆಲ್ಲಾ ಕೇರ್‌ ಮಾಡಲಿಲ್ಲ. ಎಲ್ಲವನ್ನೂ ಎದುರಿಸಿದ್ದೇನೆ. ಕೆಲವರು, ಪಬ್ಲಿಸಿಟಿಗಾಗಿ ಹೀಗೆಲ್ಲಾ ಮಾಡ್ತಾಳೆ ಅಂತಾರೆ.

ಅದೆಲ್ಲಾ ನನಗೆ ಬೇಕಿಲ್ಲ. ನನ್ನ ಕೆಲಸ ಮಾತಾಡಬೇಕೆಂದುಕೊಂಡವಳು ನಾನು. ಯಾವುದೇ ಬ್ಯಾಕ್‌ಗ್ರೌಂಡ್‌ ಇಲ್ಲದೆ ಸಿನಿಮಾ ರಂಗಕ್ಕೆ ಬಂದವಳು. ಸೋಲು-ಗೆಲುವು ಎರಡನ್ನೂ ಕಂಡಿದ್ದೇನೆ. ರಿಯಲ್‌ ಲೈಫ್ನಲ್ಲಿ ಇಷ್ಟೆಲ್ಲಾ ಆಗಿರುವುದರಿಂದ, "ಝಾನ್ಸಿ'ಯಲ್ಲಿ ಅಂಥದ್ದೇ ಪಾತ್ರ ಇರುವುದರಿಂದ ಕೆಲಸ ಮಾಡೋಕೆ ಸುಲಭವಾಗಿದೆ' ಎನ್ನುತ್ತಾರೆ ಲಕ್ಷ್ಮೀ ರೈ.

ಅವಕಾಶ ತಪ್ಪೋಯ್ತು: "ನನಗೆ ಕನ್ನಡದಲ್ಲಿ ಅವಕಾಶ ಇಲ್ಲವೆಂದಲ್ಲ. ಈ ಹಿಂದೆ ಸಾಕಷ್ಟು ಅವಕಾಶ ಬಂದಿದ್ದುಂಟು ಆದರೆ, ನಾನು ಬೇರೆ ಸಿನಿಮಾ ಒಪ್ಪಿದ್ದರಿಂದ ಮಾಡಲು ಸಾಧ್ಯವಾಗಲಿಲ್ಲ. ದರ್ಶನ್‌ ಜೊತೆ "ಕುರುಕ್ಷೇತ್ರ'ದಲ್ಲಿ ದ್ರೌಪದಿ ಪಾತ್ರ ಮಾಡಬೇಕಿತ್ತು. ಆಗಲಿಲ್ಲ. ಕಾರಣ, 40 ದಿನ ಡೇಟ್‌ ಬೇಕಿತ್ತು. ನಾನು ಬೇರೆ ಸಿನಿಮಾಗೆ ಕೊಟ್ಟಿದ್ದರಿಂದ ಸಾಧ್ಯವಾಗಲಿಲ್ಲ. "ಕೆಜಿಎಫ್' ಚಿತ್ರದಲ್ಲೂ ಹಾಡೊಂದಕ್ಕೆ ಡ್ಯಾನ್ಸ್‌ ಮಾಡುವ ಅವಕಾಶ ಬಂದಿತ್ತು.

ಅದೂ ಸಾಧ್ಯವಾಗಲಿಲ್ಲ. ಕಾರಣ, ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ಬಿಜಿಯಾಗಿದ್ದೆ. ಕನ್ನಡದಲ್ಲಿ ಕೆಲಸ ಮಾಡೋಕೆ ಇಷ್ಟ. ಇಲ್ಲಿ ಗ್ಯಾಪ್‌ ತಗೊಂಡು ಮಾಡಿದರೂ, ಒಳ್ಳೇ ಚಿತ್ರ ಮಾಡಬೇಕು, ಗೆಲ್ಲಬೇಕು ಎಂಬುದು ನನ್ನಾಸೆ. ಈಗಂತೂ ನಾಯಕಿ ಪ್ರಧಾನ ಚಿತ್ರಗಳು ಬರುತ್ತಿವೆ. ಯಾರೇ ಇರಲಿ, ಕಾನ್ಸೆಪ್ಟ್ ಚೆನ್ನಾಗಿದ್ದರೆ ನಾನು ಮಾಡ್ತೀನಿ' ಎಂದಷ್ಟೇ ಹೇಳಿ ಸುಮ್ಮನಾಗುತ್ತಾರೆ ಲಕ್ಷ್ಮೀ ರೈ.


Trending videos

Back to Top