CONNECT WITH US  

ಕಲರ್​ಫುಲ್ ಗೆಟಪ್‍ನಲ್ಲಿ ಎಂಟ್ರಿ ಕೊಟ್ಟ "ತಲೈವಾ': Watch

"ಕಾಲಾ' ನಂತರ ಬರುತ್ತಿರುವ "ಪೆಟ್ಟ'

"ಕಾಲಾ' ಸಿನಿಮಾ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯಿಸಿರುವ "ಪೆಟ್ಟ' ಸಿನಿಮಾ ಚಿತ್ರೀಕರಣ ಭರದಿಂದ ಸಾಗಿದ್ದು, ಚಿತ್ರತಂಡ ಚಿತ್ರದ ಫಸ್ಟ್ ಲುಕ್ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. "ಕಾಲಾ'ದಲ್ಲಿ ಕರಿಕಪ್ಪು ಸ್ಟೈಲ್​ನಲ್ಲಿ ಮಿಂಚಿದ್ದ ರಜನಿ ಇಲ್ಲಿ ಸಖತ್ ಕಲರ್​ಫುಲ್ ಆಗಿ ಕಾಣಿಸಿಕೊಂಡಿದ್ದು, ಕಾರ್ತಿಕ್ ಸುಬ್ಬರಾಜ್ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರಕ್ಕೆ ರಜನಿ ಜೊತೆ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ಕೂಡ ಇದೇ ಮೊದಲ ಬಾರಿ ನಟಿಸಲಿದ್ದಾರೆ.

ಕಲರ್​ಫುಲ್ ಟೀಸರ್​ನಲ್ಲಿ ಪುರಾಣ ಬಂಗಲೆಯೊಂದರ ಒಳಗೆ ರಜನಿ ಎಂಟ್ರಿ ಕೊಡುವ ದೃಶ್ಯ ತೋರಿಸಲಾಗಿದ್ದು, ಅದರೊಂದಿಗೆ ಮೇಣದ ಬತ್ತಿ, ಕತ್ತಿ, ಕಾಗದಗಳು ಗಾಳಿಯಲ್ಲಿ ಹಾರಾಡುವುದನ್ನು ತೋರಿಸಲಾಗಿದೆ. ಅಲ್ಲದೇ ಫಸ್ಟ್​ ಲುಕ್ ಟೀಸರ್ ರಜನಿ ಅಭಿನಯದ "ಚಂದ್ರಮುಖಿ'ಯ ನಾಗವಲ್ಲಿಯನ್ನು ಮತ್ತೊಮ್ಮೆ ನೆನಪಿಸುವಂತಿದೆ. ಈ ಸಿನಿಮಾದ ಕಥೆಯು ಹಾರರ್ ಸುತ್ತ ಸುತ್ತಲಿದೆಯಾ ಎಂಬ ಸಂಶಯ ಕೂಡಾ ರಜನಿಯ ಎಂಟ್ರಿಯಿಂದ ಮೂಡುತ್ತದೆ.

ಸೈಲೆಂಟ್ ಸಿನಿಮಾ "ಮರ್ಕ್ಯೂರಿ' ಬಳಿಕ ಕಾರ್ತಿಕ್ ಸುಬ್ಬರಾಜ್ ಕೈಗೆತ್ತಿಕೊಂಡಿರುವ "ಪೆಟ್ಟ'ದಲ್ಲಿ ದೊಡ್ಡ ತಾರಾಬಳಗವೇ ಕಾಣಿಸಿಕೊಳ್ಳಲಿದೆ. ಸಿಮ್ರಾನ್ ಮತ್ತು ತ್ರಿಷಾ ನಾಯಕಿಯರಾಗಿ ಮಿಂಚಲಿದ್ದಾರೆ. ಹಾಗೂ ಕಾಲಿವುಡ್​ನ ಯುವ ತಾರೆಯರಾದ ಬೋಬಿ ಸಿಂಹ, ವಿಜಯ್ ಸೇತುಪತಿ ಈ ಸಿನಿಮಾದಲ್ಲಿ ಸೂಪರ್ ಸ್ಟಾರ್​ಗೆ ಸಾಥ್ ನೀಡಲಿದ್ದಾರೆ. ಹಾಗೆಯೇ "ಪೆಟ್ಟ' ಚಿತ್ರದ ಮೂಲಕ ಬಾಲಿವುಡ್​ ಸೆನ್ಸೇಷನಲ್ ನಟ ನವಾಜುದ್ದೀನ್ ಸಿದ್ದಿಕಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆಗೈಯಲಿದ್ದಾರೆ.

"ಪಿಜ್ಜಾ', "ಜಿಗರ್​ಥಂಡ', "ಇರೈವಿ' ಮತ್ತು "ಮರ್ಕ್ಯೂರಿ' ಎಂಬ ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶಿಸಿರುವ ಯುವ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್​ ಅವರ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿರುವುದು ಕೊಲೆವೆರಿ ಖ್ಯಾತಿಯ ಅನಿರುದ್ಧ್ ರವಿಚಂದರ್. "ಎಂದಿರನ್' ಸಿನಿಮಾ ನಂತರ ಕಲಾನಿಧಿ ಮಾರನ್ ಮಾಲೀಕತ್ವದ ಸನ್ ಪಿಕ್ಚರ್ಸ್​ ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಇನ್ನು ರಜನಿ ಅಭಿನಯದ ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದ "2.0' (ರೋಬೊ2) ಚಿತ್ರವು ನವೆಂಬರ್ 29ರಂದು ತೆರೆಗೆ ಬರಲು ಸಜ್ಜಾಗಿದೆ.

Trending videos

Back to Top