ನವೆಂಬರ್ 16ರಂದು “ಕೆಜಿಎಫ್’ ಹವಾ!
Team Udayavani, Sep 19, 2018, 3:33 PM IST
ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ರಾಕಿಂಗ್ ಸ್ಟಾರ್ ಯಶ್ ಅಭಿನಯದ “ಕೆಜಿಎಫ್’ ಸಿನಿಮಾ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ನವೆಂಬರ್ ತಿಂಗಳಲ್ಲಿ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಹೌದು! ಯಶ್ ಹೋದಲ್ಲಿ ಬಂದಲೆಲ್ಲಾ ಅವರ ಅಭಿಮಾನಿಗಳು “ಕೆಜಿಎಫ್’ ಸಿನಿಮಾ ಯಾವಾಗ ಬಿಡುಗಡೆಯಾಗುತ್ತದೆ ಎಂದು ಕೇಳುತ್ತಿದ್ದರು. ಅಷ್ಟೇ ಅಲ್ಲದೇ ಟ್ವಿಟ್ಟರ್ ಮತ್ತು ಫೇಸ್ಬುಕ್ ಮೂಲಕ ಯಶ್ ಮತ್ತು ರಾಧಿಕಾ ಇಬ್ಬರಿಗೂ ಚಿತ್ರ ಯಾವಾಗ ತೆರೆ ಕಾಣುತ್ತದೆ ಎಂದು ಕಮೆಂಟ್ ಮೂಲಕ ಕೇಳುತ್ತಿದ್ದರು.
ಈಗ ಅವರೆಲ್ಲರಿಗೂ ಯಶ್ ಚಿತ್ರದ ಬಿಡುಗಡೆಯ ದಿನಾಂಕದ ಮೂಲಕ ಸಿಹಿ ಸುದ್ದಿಯನ್ನು ನೀಡಿದ್ದಾರೆ. ನವೆಂಬರ್ 16ಕ್ಕೆ “ಕೆಜಿಎಫ್’ ಸಿನಿಮಾ ಎಲ್ಲ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ. ಅಷ್ಟೇ ಅಲ್ಲದೇ ಇಂದು ಸಂಜೆ 6 ಘಂಟೆಗೆ ತಮಿಳು ಸ್ಟಾರ್ ನಟ ವಿಶಾಲ್ ತಮ್ಮ ಟ್ವಿಟರ್ ಖಾತೆಯ ಮೂಲಕ “ಕೆಜಿಎಫ್’ ಟ್ರೈಲರನ್ನು ತಮಿಳುನಾಡಿನಲ್ಲಿ ಬಿಡುಗಡೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಅವರು ತಮಿಳು “ಕೆಜಿಎಫ್’ ಬಿಡುಗಡೆಯಾಗೋ ದಿನಾಂಕವನ್ನೂ ಘೋಷಿಸಲಿದ್ದಾರೆ.
ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಚಿತ್ರದ ಬಗ್ಗೆ ತೀವ್ರ ಕುತೂಹಲ ಮೂಡಿಸಿದೆ. ಸುದೀರ್ಘವಾಗಿ ಎರಡು ವರ್ಷಗಳ ಕಾಲ ನಿರಂತರವಾಗಿ ಚಿತ್ರೀಕರಣಗೊಂಡಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತೆ ಎಂಬ ನಿರೀಕ್ಷೆಯೂ ಇದೆ. ಸದ್ಯ ಈ ಚಿತ್ರವನ್ನು “ಉಗ್ರಂ’ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಹೊಂಬಾಳೆ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ ಯಶ್ ಜೊತೆ ಶ್ರೀ ನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದು, ಚಿತ್ರದ ಸ್ಪೆಷಲ್ ಹಾಡಿಗೆ ಯಶ್ ಜೊತೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಅವರು ಹೆಜ್ಜೆ ಹಾಕಿದ್ದಾರೆ.