CONNECT WITH US  

ಸಿನಿಮಾಗೆ ಜಾತಿ ಲೇಬಲ್‌ ಬೇಡ

ವೀರಮದಕರಿ ವಿವಾದ: ಮುನಿರತ್ನ, ಜಗ್ಗೇಶ್‌ ಸೇರಿದಂತೆ ಹಲವರ ಮನವಿ

ಸುದೀಪ್‌ ಹಾಗೂ ದರ್ಶನ್‌ ಇಬ್ಬರು ಪ್ರತ್ಯೇಕವಾಗಿ ವೀರಮದಕರಿ ನಾಯಕನ ಕುರಿತಾಗಿ ಸಿನಿಮಾ ಮಾಡಲು ಹೊರಟಿರುವ ವಿಚಾರ ನಿಮಗೆ ಗೊತ್ತೇ ಇದೆ. ಅದರ ಬೆನ್ನಲ್ಲೇ ಸಣ್ಣ ವಿವಾದವೂ ಆರಂಭವಾಗಿದೆ. ಮುಖ್ಯವಾಗಿ ವೀರಮದಕರಿ ನಾಯಕ ಸಿನಿಮಾಕ್ಕೆ ಈಗ ಜಾತಿ ಲೇಪನ ಅಂಟಿಕೊಂಡಿದೆ. ಕೆಲವು ಜಾತಿ ಸಂಘಟನೆಗಳು, ಸ್ವಾಮೀಜಿಗಳು ವೀರಮದಕರಿ ನಾಯಕನ ಸಿನಿಮಾವನ್ನು ಸುದೀಪ್‌ ಬಿಟ್ಟು ಬೇರೆ ಯಾರು ಮಾಡುವುದಾದರೂ ವಿರೋಧಿಸುತ್ತೇವೆ ಎನ್ನುವ ಮೂಲಕ ಜಾತಿಯ ವಿವಾದ ಚಿತ್ರಕ್ಕೆ ಅಂಟಿಕೊಂಡಿದೆ.

ಸಿನಿಮಾ ರಂಗಕ್ಕೂ ಜಾತಿ ತಳುಕು ಹಾಕಿಕೊಳ್ಳುತ್ತಿರುವುದನ್ನು ಅನೇಕರು ವಿರೋಧಿಸಿದ್ದಾರೆ. ಮುಖ್ಯವಾಗಿ ಶಾಸಕ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಹಾಗೂ ನಟ ಜಗ್ಗೇಶ್‌, ಚಿತ್ರರಂಗಕ್ಕೆ ಜಾತಿಯನ್ನು ಎಳೆದು ತರಬೇಡಿ ಎಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಮುನಿರತ್ನ, ರಾಜಕೀಯಕ್ಕೆ ಜಾತಿ ಬಂದು ಹಾಳಾಗಿದೆ. ಈಗ ಸಿನಿಮಾಕ್ಕೆ ಜಾತಿಯನ್ನು ಎಳೆದು ತಂದು ಕೆಡಿಸೋದು ಬೇಡ. ಕಲೆಗೆ ಯಾವ ಜಾತಿಯೂ ಇಲ್ಲ.

ಕಲೆಯನ್ನು ಕಲೆಯಾಗಿ ನೋಡಿ. ದರ್ಶನ್‌, ಸುದೀಪ್‌ ಇಬ್ಬರೂ ಸಿನಿಮಾ ಮಾಡಲಿ. ಆದರೆ, ಕಥೆ ಒಂದೇ ಆಗಿರದಂತೆ ನೋಡಿಕೊಳ್ಳಬೇಕು. ಹಿಂದೆ ರಾಜ್‌ಕುಮಾರ್‌ ಅವರು ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, ಆಗ ಜಾತಿ ಅಡ್ಡ ಬರಲಿಲ್ಲ. ಜನರು ಒಳ್ಳೆಯ ಸಿನಿಮಾಗಳನ್ನು ನೋಡಿ ಪ್ರೋತ್ಸಾಹಿಸಬೇಕು. ಇನ್ನು, ನಟ ಜಗ್ಗೇಶ್‌ ಕೂಡಾ ಸಿನಿಮಾಕ್ಕೆ ಜಾತಿ ಅಂಟಿಕೊಂಡಿರುವ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

ಟ್ವೀಟರ್‌ ಮೂಲಕ ಬೇಸರ ವ್ಯಕ್ತಪಡಿಸಿರುವ ಜಗ್ಗೇಶ್‌, "ಶಾರದೆಯ ಕಲಾ ದೇಗುಲ ಚಿತ್ರರಂಗ, ಜಾತಿ ರಹಿತ ಪುಣ್ಯ ಧಾಮ! ಕಲೆಗೆ ಜಾತಿಯಿಲ್ಲ! ವಿಶ್ವದಲ್ಲೇ ಜಾತಿ ಇಲ್ಲದೆ ಒಂದೇ ತಾಯಿ ಮಕ್ಕಳಂತೆ ಬದುಕುವ ಸ್ಥಳ ಶಾರದೆ ಮಡಿಲು! ಇಂಥ ಪವಿತ್ರ ಜಾಗದಲ್ಲಿ ಜಾತಿ ವಿಷ ಬೀಜ ಬಿತ್ತುವವರು ಅಳಿವಿನ ಅಂಚಿಗೆ ಸರಿಯುತ್ತಾರೆ. ಮತ ರಾಜಕೀಯಕ್ಕೆ ಮೀಸಲಾದ ಜಾತಿ ಕಲೆಗೆಬೇಡ! ವಿನಾಶಕಾಲಕ್ಕೆ ವಿಪರೀತ ಬುದ್ಧಿ! ಎಚ್ಚರವಾಗಿರಿ ಕಲಾ ಬಂಧುಗಳೆ..!!' ಎಂದು ಟ್ವೀಟ್‌ ಮಾಡಿದ್ದಾರೆ. ಇನ್ನು, ಚಿತ್ರರಂಗದ ಅನೇಕರು ಸಿನಿಮಾಕ್ಕೆ ಜಾತಿ ಅಂಟಿಕೊಳ್ಳಬಾರದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 


Trending videos

Back to Top