“ಆರೆಂಜ್’ನಲ್ಲಿ ಗೋಲ್ಡನ್ ಗುಣಗಾನ: Watch
Team Udayavani, Oct 30, 2018, 3:37 PM IST
ಗೋಲ್ಡನ್ ಸ್ಟಾರ್ ಗಣೇಶ್ ಅವರ ಬಹುನಿರೀಕ್ಷಿತ “ಆರೆಂಜ್’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿ, ಸಾಮಾಜಿಕ ಜಾಲತಾಣದಲ್ಲಿ ಸಕತ್ ಸೌಂಡು ಮಾಡುತ್ತಿದ್ದರೆ, ಇತ್ತ ಚಿತ್ರತಂಡ ಚಿತ್ರದ “ಆರೆಂಜ್ ಆರೆಂಜ್’ ಎಂಬ ಮೊದಲ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಮಾಡಿದೆ. ಈ ಹಾಡಿನಲ್ಲಿ ಕಂಪ್ಲೀಟ್ ಗಣೇಶ್ ಹುಟ್ಟಿ, ಬೆಳೆದ ಊರಿನಿಂದ ಹಿಡಿದು, ಸದ್ಯ ಗೋಲ್ಡನ್ ಸ್ಟಾರ್ ಆಗಿ ಮೆರೆಯುತ್ತಿರುವುದರ ಗುಣಗಾನ ಮಾಡಲಾಗಿದೆ.
ಕವಿರಾಜ್ ಸಾಹಿತ್ಯವಿರುವ ಹಾಡಿಗೆ ನಿರ್ದೇಶಕ ಎಸ್.ಎಸ್.ತಮನ್ ಮ್ಯೂಸಿಕ್ ನೀಡಿದ್ದಾರೆ. ಈ ಸಾಂಗ್ನಲ್ಲಿ ಗಣಿ ಗೋಲ್ಡನ್ ಕಲರ್ ಕಾಸ್ಟೂಮ್ನಲ್ಲಿ ಮಿಂಚಿದ್ದಾರೆ. ಚಿತ್ರಕ್ಕೆ “ಜೂಮ್’ ನಿರ್ದೇಶಕ ಪ್ರಶಾಂತ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದು, ಗಣೇಶ್ ಜೊತೆಗೆ ಇದು ಎರಡನೇ ಸಿನಿಮಾ.
ಅಲ್ಲದೇ “ಜೂಮ್’ ಚಿತ್ರಕ್ಕೆ ಸಂಗೀತ ನೀಡಿದ್ದ ತಮನ್ ಅವರೇ ಈ ಚಿತ್ರಕ್ಕೆ ಮ್ಯೂಸಿಕ್ ಸಂಯೋಜಿಸಿದ್ದು. ನವೀನ್ ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಚಿತ್ರದಲ್ಲಿ ಗಣೇಶ್ ಎದುರಿಗೆ “ರಾಜಕುಮಾರ’ ಚಿತ್ರದ ಪ್ರಿಯಾ ಆನಂದ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿರುವ “ಆರೆಂಜ್’ ಚಿತ್ರದ ಟ್ರೈಲರ್ ಸ್ವಲ್ಪ ದಿನಗಳಲ್ಲೇ ಬಿಡುಗಡೆಯಾಗಲಿದೆ.