ಇಂದು ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ
Team Udayavani, Nov 19, 2018, 12:09 PM IST
ಕನ್ನಡ ಚಿತ್ರರಂಗದಲ್ಲಿ ಆಗಾಗ ಕ್ರೀಡೆ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಆ ಸಾಲಿಗೆ ಈಗ “ಸ್ಯಾಂಡಲ್ವುಡ್ ಕಪ್ 2018′ ಹೆಸರಿನಲ್ಲಿ ಬ್ಯಾಡ್ಮಿಂಟನ್ ಪಂದ್ಯಾವಳಿ ನಡೆಯುತ್ತಿದೆ. ಸ್ಯಾಂಡಲ್ವುಡ್ ನ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಆಯೋಜಿಸಿರುವ ಈ ಪಂದ್ಯಾವಳಿಗೆ ಇಂದು (ನ.19 ರ ಸೋಮವಾರ) ಚಾಲನೆ ಸಿಗುತ್ತಿದೆ.
ಹಂಪಿನಗರದ ಬಿಬಿಎಂಪಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಗಳಾಗಿ ಸಚಿವೆ ಡಾ.ಜಯಮಾಲಾ, ಶಾಸಕರಾದ ಎಂ.ಕೃಷ್ಣಪ್ಪ, ಮುನಿರತ್ನ, ವಿತರಕ ಎಸ್.ವಿ.ಬಾಬು, ಬಿಬಿಎಂಪಿ ಸದಸ್ಯ ಆನಂದ್ ಪಿ.ಹೊಸೂರ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ.
ಸ್ಯಾಂಡಲ್ವುಡ್ ನ್ಪೋರ್ಟ್ಸ್ ಮತ್ತು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷರಾದ ಭಾ.ಮ.ಹರೀಶ್ ನೇತೃತ್ವದಲ್ಲಿ ಈ ಪಂದ್ಯಾವಳಿ ಜರುಗಲಿವೆ. ಈಗಾಗಲೇ ಚಿತ್ರರಂಗದ ಹಲವು ಆಸಕ್ತರು ತಮ್ಮ ಹೆಸರು ನೋಂದಾಯಿಸಿದ್ದು, ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದಾರೆ. ಚಿತ್ರರಂಗದ ಸೌಹಾರ್ದಕ್ಕಾಗಿ ಈ ಪಂದ್ಯಾವಳಿ ಆಯೋಜನೆ ಮಾಡಿರುವುದಾಗಿ ಅಧ್ಯಕ್ಷ ಭಾ.ಮ.ಹರೀಶ್ ಹೇಳಿದ್ದಾರೆ.