ಸಸ್ಪೆನ್ಸ್ ಹಾರರ್ನತ್ತ ಮಂಜುಸ್ವರಾಜ್
Team Udayavani, Dec 6, 2018, 11:06 AM IST
ನಿರ್ದೇಶಕ ಮಂಜು ಸ್ವರಾಜ್ ಮತ್ತೂಂದು ಸಿನಿಮಾ ಆರಂಭಿಸಿದ್ದಾರೆ. ಅದು “6′. ಹೌದು, ಇದು ಮಂಜು ಸ್ವರಾಜ್ ನಿರ್ದೇಶನದ ಚಿತ್ರದ ಹೆಸರು. ಈಗ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಬೇರೆ ಬೇರೆ ಶೈಲಿಯ ಶೀರ್ಷಿಕೆಯನ್ನಿಡುವ ಟ್ರೆಂಡ್ ಓಡುತ್ತಿದೆ. ಅದರಂತೆ ಮಂಜು ಕೂಡಾ “6′ ಎಂಬ ಹೆಸರಿನಡಿ ಸಿನಿಮಾ ಆರಂಭಿಸಿದ್ದಾರೆ. ಚಿತ್ರಕ್ಕೆ “ದಿಕೂಟ’ ಎಂಬ ಟ್ಯಾಗ್ಲೈನ್ ಇದೆ. ಅಂದಹಾಗೆ, ಇದೊಂದು ಹಾರರ್-ಥ್ರಿಲ್ಲರ್ ಸಿನಿಮಾವಾಗಿದ್ದು, ಕಥೆಯ ಬಗ್ಗೆ ಹೇಳಲು ನಿರ್ದೇಶಕರು ಹಿಂದೇಟು ಹಾಕುತ್ತಾರೆ.
ಸಸ್ಪೆನ್ಸ್ ಸಿನಿಮಾವಾದ್ದರಂದ ಒನ್ಲೈನ್ ಹೇಳಿದರೂ ಜನ ಎಲ್ಲಿ ಇಡೀ ಸಿನಿಮಾವನ್ನು ಊಹಿಸಿಬಿಡುತ್ತಾರೆ ಎಂಬ ಭಯದಿಂದ ಕಥೆ ಬಗ್ಗೆ ಮಂಜು ಏನು ಹೇಳಲು ತಯಾರಿಲ್ಲ. ಚಿತ್ರದಲ್ಲಿ ಆರು ಹುಡುಗರು ನಟಿಸಲಿದ್ದು, ಈಗಾಗಲೇ ನಾಲ್ವರು ಆಯ್ಕೆಯಾಗಿದ್ದಾರೆ. ಉಳಿದಿಬ್ಬರ ಹಾಗೂ ನಾಯಕಿಯ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಪ್ರಯೋಗಾತ್ಮಕ ಸಿನಿಮಾಕ್ಕೆ ಕಮರ್ಷಿಯಲ್ ಅಂಶಗಳೊಂದಿಗೆ ಪ್ರೇಕ್ಷಕನಿಗೆ ಮನರಂಜನೆ ರೀತಿಯಲ್ಲಿ ಕೊಡುತ್ತೇನೆ ಎನ್ನುವುದು ಮಂಜು ಮಾತು.
ಚಿತ್ರದಲ್ಲಿ ಅನುರಾಗ್ ನಾಯಕರಾಗಿ ನಟಿಸುತ್ತಿದ್ದು, ಇವರ ಗೆಳೆಯರಾಗಿ ರವಿತೇಜ, ಪ್ರಜ್ವಲ್, ನೌಶಾದ್ ನಟಿಸುತ್ತಿದ್ದಾರೆ. ಚಿತ್ರದ ಎರಡು ಹಾಡುಗಳಿಗೆ ಅಭಿಮನ್ ರಾಯ್ ಸಂಗೀತ ನೀಡುತ್ತಿದ್ದಾರೆ. ಲಿವಿನ್ ಛಾಯಾಗ್ರಹಣ, ಬಸವರಾಜ ಅರಸ್ ಸಂಕಲನ ಚಿತ್ರಕ್ಕಿದೆ. ಮಗನನ್ನು ಹೀರೋ ಆಗಿ ಲಾಂಚ್ ಮಾಡಬೇಕೆಂಬ ಉದ್ದೇಶದಿಂದ ಸತ್ಯಭಾಮ ರಾಜೇಶ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.