CONNECT WITH US  

ಜಗ್ಗೇಶ್‌ ಈಗ ಕನ್ನಡ ಮೇಷ್ಟ್ರು

ಕವಿರಾಜ್‌ ನಿರ್ದೇಶನ, ಮೇಘನಾ ನಾಯಕಿ

"ಮದುವೆಯ ಮಮತೆಯ ಕರೆಯೋಲೆ' ಎಂಬ ಸಿನಿಮಾ ಬಂದಿರೋದು ನಿಮಗೆ ಗೊತ್ತಿರಬಹುದು. ಆ ಚಿತ್ರವನ್ನು ನಿರ್ದೇಶಿಸಿದ್ದು, ಕವಿರಾಜ್‌. ಗೀತರಚನೆಕಾರರಾಗಿ ಹೆಸರು ಮಾಡಿರುವ ಕವಿರಾಜ್‌, "ಮದುವೆಯ ಮಮತೆಯ ಕರೆಯೋಲೆ' ಮೂಲಕ ನಿರ್ದೇಶಕರಾದರು. ಆ ಚಿತ್ರ ಬಿಡುಗಡೆಯಾಗಿ ಎರಡು ವರ್ಷ ಆಗುತ್ತಾ ಬಂದರೂ ಕವಿರಾಜ್‌, ಬೇರೆ ಯಾವ ಸಿನಿಮಾವನ್ನು ನಿರ್ದೇಶನ ಮಾಡಿರಲಿಲ್ಲ.

ಈಗ ಕವಿರಾಜ್‌ ಹೊಸ ಸಿನಿಮಾದ ಸುದ್ದಿ ಬಂದಿದೆ. "ಕಾಳಿದಾಸ ಕನ್ನಡ ಮೇಷ್ಟ್ರು' ಎಂಬ ಸಿನಿಮಾವನ್ನು ನಿರ್ದೇಶಿಸಲು ಕವಿರಾಜ್‌ ಹೊರಟಿದ್ದಾರೆ. ಜಗ್ಗೇಶ್‌ ಈ ಚಿತ್ರದ ನಾಯಕರಾದರೆ, ಮೇಘನಾ ಗಾಂವ್ಕರ್‌ ನಾಯಕಿ. ಹೆಸರಿಗೆ ತಕ್ಕಂತೆ ಚಿತ್ರದ ಕಥೆ ಶಿಕ್ಷಣದ ಹಿನ್ನೆಲೆಯಲ್ಲಿ ಸಾಗಲಿದ್ದು, ಮಗುವನ್ನು ಶಾಲೆಗೆ ಸೇರಿಸುವ ವೇಳೆ ತಂದೆ-ತಾಯಿ ನಡುವಿನ ಸಂಘರ್ಷ, ಕನ್ನಡ ಶಾಲೆ, ಇಂಗ್ಲೀಷ್‌  ಶಾಲೆ ಕುರಿತಾದ ಗೊಂದಲ, ಪ್ರತಿಷ್ಠೆಯ ಪ್ರಶ್ನೆ ಹೀಗೆ ಹಲವು ಅಂಶಗಳ ಮೂಲಕ ಸಿನಿಮಾ ಸಾಗಲಿದೆ.

ಆರಂಭದಲ್ಲಿ ಗಂಡ-ಹೆಂಡತಿ ನಡುವಿನ ವೈಯಕ್ತಿಕ ಮಾತುಕತೆಯ ಮೂಲಕ ಸಾಗುವ ಸಿನಿಮಾ ಕ್ಲೈಮ್ಯಾಕ್ಸ್‌ನಲ್ಲಿ ಇಂದಿನ ಶಿಕ್ಷಣ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳ ಬಗ್ಗೆ ಹೇಳಲಿದೆ ಎಂದು ಚಿತ್ರದ ಬಗ್ಗೆ ವಿವರ ಕೊಡುತ್ತಾರೆ. ಹಾಗಂತ ಇಡೀ ಸಿನಿಮಾ ಸೀರಿಯಸ್‌ ಆಗಿರುತ್ತಾ ಎಂದು ನೀವು ಕೇಳಬಹುದು. ಖಂಡಿತಾ, ಇಲ್ಲ, ಕಾಮಿಡಿಯಾಗಿಯೇ ಸಾಗುವ ಸಿನಿಮಾ, ಒಂದು ಹಂತದಲ್ಲಷ್ಟೇ ಸೀರಿಯಸ್‌ ಆಗುತ್ತದೆ ಎನ್ನುತ್ತಾರೆ ಕವಿರಾಜ್‌.

ಚಿತ್ರದಲ್ಲಿ ಜಗ್ಗೇಶ್‌ ಸರ್ಕಾರಿ ಶಾಲೆಯ ಕನ್ನಡ ಮೇಷ್ಟ್ರು ಆಗಿ ನಟಿಸುತ್ತಿದ್ದಾರೆ. ಅವರ ಪತ್ನಿಯಾಗಿ ಮೇಘನಾ ಗಾಂವ್ಕರ್‌ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ಹಿರಿಯ ನಟಿ ಅಂಬಿಕಾ, ತಬಲಾ ನಾಣಿ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರವನ್ನು ಉದಯ್‌ ಕುಮಾರ್‌ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಗುರುಕಿರಣ್‌ ಸಂಗೀತ, ಗುಂಡ್ಲುಪೇಟೆ ಸುರೇಶ್‌ ಛಾಯಾಗ್ರಹಣವಿದೆ. ಡಿಸೆಂಬರ್‌ 10ಕ್ಕೆ ಚಿತ್ರೀಕರಣ ಆರಂಭವಾಗಲಿದೆ. 


Trending videos

Back to Top