ಜಾಲಿಡೇಸ್ನಲ್ಲಿ ನಿರಂಜನ್: ಸಂಕ್ರಾಂತಿಗೆ ಶುರು
Team Udayavani, Dec 9, 2018, 11:50 AM IST
ನಿರಂಜನ್ ಕುಮಾರ್ ಶೆಟ್ಟಿ “ಜಗತ್ ಕಿಲಾಡಿ’ ಬಳಿಕ ಯಾವ ಚಿತ್ರ ಮಾಡುತ್ತಾರೆ ಎಂಬ ಬಗ್ಗೆ ಪ್ರಶ್ನೆ ಇತ್ತು. ಅದಕ್ಕೀಗ ಅವರು ಉತ್ತರ ಕೊಟ್ಟಿದ್ದಾರೆ. ಅವರೀಗ ಹೊಸ ಚಿತ್ರದ ತಯಾರಿಯಲ್ಲಿದ್ದಾರೆ. ಅವರು ನಟಿಸುತ್ತಿರುವ ಹೊಸ ಚಿತ್ರಕ್ಕೆ “ಜಾಲಿಡೇಸ್ 2′ ಎಂದು ನಾಮಕರಣ ಮಾಡಿದ್ದಾರೆ. “ಜಾಲಿಡೇಸ್’ ಅಂದಾಕ್ಷಣ, ನಿರ್ದೇಶಕ ಎಂ.ಡಿ.ಶ್ರೀಧರ್ ಅವರ ನೆನಪಾಗುತ್ತೆ. ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸಿದ್ದರು.
ಆ ಚಿತ್ರದಲ್ಲಿ ನಿರಂಜನ್ ಕುಮಾರ್ ಶೆಟ್ಟಿ ಕೂಡ ನಾಲ್ವರು ನಾಯಕರ ಪೈಕಿ ಅವರೂ ನಾಯಕರಾಗಿ ಕಾಣಿಸಿಕೊಂಡಿದ್ದರು. ಈಗ ಅದೇ ಹೆಸರಿನ ಚಿತ್ರಕ್ಕೆ ನಾಯಕರಾಗಿದ್ದಾರೆ. “ಜಾಲಿಡೇಸ್ 2′ ಚಿತ್ರದಲ್ಲೂ ಕಾಲೇಜ್ ಕಥೆ ಇರಲಿದ್ದು, ಇಲ್ಲೂ ಮನರಂಜನೆಗೆ ಹೆಚ್ಚು ಆದ್ಯತೆ ಕೊಡಲಾಗಿದೆ ಎಂಬುದು ನಿರಂಜನ್ ಕುಮಾರ್ ಶೆಟ್ಟಿ ಮಾತು. ಚಿತ್ರವನ್ನು ಜನವರಿ ಸಂಕ್ರಾಂತಿ ದಿನದಂದು ಶುರುಮಾಡಲು ತಯಾರಿ ನಡೆಸಿರುವ ಅವರು, ಚಿತ್ರವನ್ನು ಅವರ ಗೆಳೆಯರು ನಿರ್ಮಾಣ ಮಾಡುತ್ತಿದ್ದಾರೆ.
ಚಿತ್ರದಲ್ಲಿ ಅವರ ಜೊತೆ ಮೂವರು ಹಾಸ್ಯ ನಟರು ಇರಲಿದ್ದು, ಕಥೆ ನಾಲ್ವರ ಸುತ್ತವೇ ಸುತ್ತಲಿದೆ ಎಂಬುದು ಅವರ ಹೇಳಿಕೆ. ಸದ್ಯಕ್ಕೆ ಚಿತ್ರದ ತಾರಾಬಳಗ ಸೇರಿದಂತೆ, ತಂತ್ರಜ್ಞರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಹೊಸ ಪ್ರತಿಭೆ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿದ್ದಾರೆ. “ಜಾಲಿಡೇಸ್’ ತಮಗೊಂದು ಹೆಸರು ತಂದು ಕೊಟ್ಟ ಚಿತ್ರವಾಗಿದ್ದರಿಂದ “ಜಾಲಿಡೇಸ್’ ಚಿತ್ರದ ಮೊದಲ ದೃಶ್ಯವನ್ನು ನಿರ್ದೇಶಕ ಎಂ.ಡಿ.ಶ್ರೀಧರ್ ಅವರ ಕೈಯಿದಲೇ ನಿರ್ದೇಶಿಸಬೇಕು ಎಂಬ ಆಲೋಚನೆ ಇದೆ ಎನ್ನುತ್ತಾರೆ ನಿರಂಜನ್.