ಹೌಲಾ ಹೌಲಾ ಬಿಡುಗಡೆಗೆ ಸಿದ್ಧ
Team Udayavani, Jan 5, 2019, 6:07 AM IST
ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ಆಪ್ತರಕ್ಷಕ ಚಿತ್ರದಲ್ಲಿ ಬರುವ ‘ಹೌಲಾ ಹೌಲಾ’ ಎನ್ನುವ ಜನಪ್ರಿಯ ಡೈಲಾಗ್ ಈಗ ಸಿನಿಮಾವೊಂದರ ಟೈಟಲ್ ಅಗಿ ತೆರೆಗೆ ಬರುತ್ತಿದೆ. ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಹೌಲಾ ಹೌಲಾ’ ಚಿತ್ರದ ಮೊದಲ ಪ್ರತಿ ಸಿದ್ಧವಾಗಿದ್ದು, ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ‘ಹೌಲಾ ಹೌಲಾ’ ಚಿತ್ರಕ್ಕೆ ಯು/ಎ ಪ್ರಮಾಣಪತ್ರವನ್ನು ನೀಡಿ ಬಿಡುಗಡೆಗೆ ಅಸ್ತು ಎಂದಿದೆ.
ಅಮ್ಮ ಅಕ್ಷರ ಆರ್ಟ್ಸ್ ಬ್ಯಾನರ್ನಲ್ಲಿ ಶ್ರೀಮತಿ ಸುಶೀಲ ಮತ್ತು ಡಾ. ರಮೇಶ್ ಚೌದರಿ ನಿರ್ಮಿಸಿರುವ ‘ಹೌಲಾ ಹೌಲಾ’ ಚಿತ್ರಕ್ಕೆ ಎಸ್.ಪಿ. ಪಾಟೀಲ್. (ಕಲಬುರ್ಗಿ) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ದೃಶ್ಯಗಳಿಗೆ ಸುರೇಶ್ ವರ್ಮಾ ಅವರ ಛಾಯಾಗ್ರಹಣ ಮತ್ತು ಜ್ಞಾನೇಶ್ವರ್ ಅವರ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಶ್ಯಾಂಡಿ ಸಂಗೀತ ಸಂಯೋಜಿಸಿದ್ದು, ಕವಿರಾಜ್ ಹಾಡುಗಳಿಗೆ ಸಾಹಿತ್ಯ ಒದಗಿಸಿದ್ದಾರೆ.
ಚಿತ್ರಕ್ಕೆ ಇಸ್ಮಾಯಿಲ್ ಕಲಾ ನಿರ್ದೇಶನವಿದ್ದು, ಮನು ನೃತ್ಯ ಸಂಯೋಜನೆಯಿದೆ. ರಾಯಚೂರು, ಕಲಬುರ್ಗಿ, ಬೆಂಗಳೂರು ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ದಿವಂಗತ ನಟ ವಿಷ್ಣುವರ್ಧನ್ ಅಭಿಮಾನಿಯೊಬ್ಬಳ ಕಥಾಹಂದರವಿರುವ ಈ ಚಿತ್ರದಲ್ಲಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳಬಾರದೆಂಬ ಸಂದೇಶವಿದೆಯಂತೆ.
ಶೋಭರಾಜ್, ಹನುಮಂತರಾಯ ಗೌಡ, ಆರತಿ ಕುಲಕರ್ಣಿ, ಅಮಿತ್, ವಿಜಯ್ ಚಂಡೂರ್, ಶಾಲಿನಿ, ಪೃಥ್ವಿ, ಮೇಘನಾ, ಮಂಜು, ಲಯೇಂದ್ರ, ದಿವ್ಯ ಮುಂತಾದ ಕಲಾವಿದರ ತಾರಾಗಣ ಚಿತ್ರದಲ್ಲಿದೆ. ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಈ ಚಿತ್ರವನ್ನು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.