CONNECT WITH US  

ಡ್ರಾಮಾ ಜೂನಿಯರ್ಸ್ ಶೋನಲ್ಲಿ "ರಿಯಲ್‌ ಸ್ಟಾರ್‌' ಗೌರವ

ಗೌರವ  ಸದ್ಯ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ "ಡ್ರಾಮಾ ಜ್ಯೂನಿಯರ್'ನ 3ನೇ ಆವೃತ್ತಿ ಸಾಕಷ್ಟು ವಿಶೇಷವಾದ ಪ್ರಯೋಗಗಳಿಗೆ ನಾಂದಿ ಹಾಡಿದೆ. ಮಕ್ಕಳಿಗೆ ಮನರಂಜನೆಯ ಜೊತೆಗೆ ಬೋಧನೆಯನ್ನು ಮಾಡುವ ವಿಶೇಷ ಪ್ರಯೋಗಕ್ಕೆ ಮುಂದಾಗಿರುವ ಜೀ ಕನ್ನಡ ವಾಹಿನಿ, "ಡ್ರಾಮಾ ಜ್ಯೂನಿಯರ್ ಸೀಜನ್‌-3' ರಲ್ಲಿ ಒಂದನೆ ತರಗತಿಯಿಂದ ಹತ್ತನೆ ತರಗತಿವರೆಗಿನ ಪಠ್ಯಪುಸ್ತಕದಲ್ಲಿನ ಆಯ್ದ ಪಾಠಗಳನ್ನು ಮಕ್ಕಳ ನಾಟಕ ರೂಪದಲ್ಲಿ ತೆರೆಮೇಲೆ ಪ್ರಸ್ತುತಪಡಿಸುತ್ತಿದೆ.

ಇದು ಮಕ್ಕಳ ಕಲಿಕೆಗೂ ಸಹಕಾರಿಯಾಗಿದ್ದು, ಪೋಷಕರಿಂದ, ವೀಕ್ಷಕರಿಂದಲೂ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದರ ಜೊತೆಗೆ ತಮ್ಮ ಜೀವನವನ್ನ ಇತರರಿಗಾಗಿ ಮುಡಿಪಾಗಿಟ್ಟು ಸಾಮಾನ್ಯರೊಡನೆ, ಸಾಮಾನ್ಯರಂತೆ ಬದುಕುತ್ತಿರುವ ಅಸಾಮಾನ್ಯ ಸಾಧಕರನ್ನು ವೇದಿಕೆಗೆ ಕರೆಸಿ ಅವರನ್ನು "ರಿಯಲ್‌ ಸ್ಟಾರ್‌' ಎಂದು ಗೌರಸುವ ಕೆಲಸ ಮಾಡುತ್ತಿದೆ. ಜೊತೆಗೆ ಅವರ ಜೀವನಕಥೆಯನ್ನ ನಾಟಕವನ್ನಾಗಿ ಸಿದ್ಧಪಡಿಸಿ, ಅವರ ಮುಂದೆಯೇ ಮಕ್ಕಳಿಂದ ಆಡಿ ತೋರಿಸಲಾಗುತ್ತಿದೆ.

ಈ ವಾರ ಸೈಯದ್‌ ಸಲ್ಲಾವುದ್ದೀನ್‌ ಪಾಷಾ ಎಂಬ ಮತ್ತೂಬ್ಬ ಸಾಧಕರನ್ನು ಕರೆಸಿ ವಾರದ "ರಿಯಲ್‌ ಸ್ಟಾರ್‌' ಬಿರುದು ನೀಡಿ ಗೌರಸುತ್ತಿದೆ. ಸೈಯದ್‌ ಸಲ್ಲಾವುದ್ದೀನ್‌ ಪಾಷಾ ಅವರ ಮುತ್ತಾತ ಮೈಸೂರು ಮಹಾರಾಜರ ಆಸ್ಥಾನದಲ್ಲಿ ನಾಟಿ ವೈದ್ಯರಾಗಿದ್ದವರು. ಜೊತೆಗೆ ವಿಶೇಷ ಚೇತನ ಮಕ್ಕಳಿಗೆ ನಾಟಿ ಔಷಧ ನೀಡುತ್ತಿದ್ದರು, ತಾತನೊಡನೆ ಸೇರಿ ವಿಶೇಷ ಚೇತನ ಮಕ್ಕಳಿಗೆ ಔಷಧ ನೀಡುತ್ತಿದ್ದ ಸಲ್ಲಾವುದ್ದೀನ್‌ರಿಗೆ ಅಂಥ ಮಕ್ಕಳ ಮೇಲೆ ವಿಶೇಷ ಒಲವು ಬೆಳೆಯಿತು.

ಬಾಲ್ಯದಲ್ಲೆ ನೃತ್ಯ, ನಾಟಕಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಸಲ್ಲಾವುದ್ದೀನ್‌, ಹಲವಾರು ಸಾಂಸ್ಕೃತಿಕ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ. ಭಗವದ್ಗೀತೆಯನ್ನು ಅಧ್ಯಯನ ಮಾಡಿರುವ ಸಲ್ಲಾವುದ್ದೀನ್‌ ಅದರ ಶ್ಲೋಕಗಳು, ಬಸವಣ್ಣನವರ ವಚನಗಳು ಪಂಡಿತರೂ ನಾಚುವಂತೆ ಉತ್ಛರಿಸುತ್ತಾರೆ. ತಾವು ಕಲಿತ ಕಲೆಯನ್ನು ವಿಶೇಷ ಚೇತನ ಮಕ್ಕಳಿಗೆ ಧಾರೆ ಎರೆದು ಅವರಿಂದ ವೀಲ್‌ಚೇರ್‌ ಮೇಲೆ ರಾಮಾಯಣ, ಮಹಾಭಾರತದಂತಹ ಮಹಾ ಕಾವ್ಯಗಳನ್ನು, ಭರತನಾಟ್ಯ, ಕಥಕ್‌ನಂತಹ ನೃತ್ಯ ರೂಪಕಗಳ ಮೂಲಕ ಪ್ರಪಂಚಕ್ಕೆ ಪರಿಚಯಿಸಿದ್ದಾರೆ. 

ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ವಾರದ "ಡ್ರಾಮಾ ಜೂನಿಯರ್' ಕಾರ್ಯಕ್ರಮದಲ್ಲಿ 4 ಕಾಮಿಡಿ ಡ್ರಾಮಾಗಳ ಜೊತೆಗೆ ಸೈಯ್ಯದ್‌ ಸಲ್ಲಾವುದ್ದೀನ್‌ ಪಾಷಾರವರ ಜೀವನದ ಕಥೆಯನ್ನ ಡ್ರಾಮಾ ಜ್ಯೂನಿಯರ್ ಮಕ್ಕಳು ಪ್ರಸ್ತುತಪಡಿಸಲಿದ್ದಾರೆ. ಈ ಕಾರ್ಯಕ್ರಮ ಇದೇ ಜ. 12 ಮತ್ತು 13ರ ರಾತ್ರಿ 9.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.    

Trending videos

Back to Top