CONNECT WITH US  

ಸ್ಮಶಾನದಲ್ಲಿ ಕಾಲುಜಾರಿ ಬಿದ್ದ ರಾಧಿಕಾ

ಬೆನ್ನಿಗೆ ಗಾಯ, ಒಂದು ತಿಂಗಳ ವಿಶ್ರಾಂತಿ: ಭೈರಾದೇವಿ ಚಿತ್ರೀಕರಣ ವೇಳೆ ಘಟನೆ

"ಭೈರಾದೇವಿ' ಚಿತ್ರೀಕರಣದ ವೇಳೆ ನಟಿ ರಾಧಿಕಾ, ಸ್ಮಶಾನದಲ್ಲಿ ಕಾಲುಜಾರಿ ಬಿದ್ದ ಪರಿಣಾಮ ಅವರ ಬೆನ್ನಿಗೆ ಏಟಾಗಿದೆ. ಸದ್ಯ ಚಿತ್ರೀಕರಣಕ್ಕೆ ಬ್ರೇಕ್‌ ನೀಡಲಾಗಿದೆ. ರಾಧಿಕಾ ನಿರ್ಮಿಸಿ, ನಟಿಸುತ್ತಿರುವ ಈ ಚಿತ್ರದಲ್ಲಿ ಅಘೋರಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಕೆಲವು ದೃಶ್ಯಗಳ ಚಿತ್ರೀಕರಣವನ್ನು ಸ್ಮಶಾನದಲ್ಲಿ ನಡೆಸಲು ಚಿತ್ರತಂಡ ಉದ್ದೇಶಿಸಿತ್ತು.

ಅದರಂತೆ ಶಾಂತಿನಗರದ ಸ್ಮಶಾನದಲ್ಲಿ ರಾತ್ರಿ ನಡೆದ ಚಿತ್ರೀಕರಣದ ವೇಳೆ ಈ ಘಟನೆ ನಡೆದಿದೆ. ರಾಧಿಕಾ ಅವರು ಗೋರಿ ಮೇಲೆ ನಡೆದುಕೊಂಡು ಬರುವ ದೃಶ್ಯದಲ್ಲಿ ಕಾಲುಜಾರಿ ಬಿದ್ದ ಪರಿಣಾಮ ಅವರ ಬೆನ್ನುಮೂಲೆಗೆ ಏಟಾಗಿದೆ. ಸದ್ಯ ರಾಧಿಕಾ ವಿಶ್ರಾಂತಿಯಲ್ಲಿದ್ದು, ಒಂದು ತಿಂಗಳ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. 

ದೊಡ್ಡ ಗ್ಯಾಪ್‌ನ ನಂತರ ರಾಧಿಕಾ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು, ಚಿತ್ರದಲ್ಲಿ ರಾಧಿಕಾ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಮೇಶ್‌ ಅರವಿಂದ್‌, ಸ್ಕಂದ ಸೇರಿದಂತೆ ಅನೇಕರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ಶ್ರೀಜಯ್‌ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ "ಆರ್‌ಎಕ್ಸ್‌ ಸೂರಿ' ಚಿತ್ರ ಮಾಡಿದ್ದ ಶ್ರೀಜಯ್‌ಗೆ ಇದು ಎರಡನೇ ಚಿತ್ರ.

ರಾಧಿಕಾ ಅವರು ಸ್ಮಶಾನದಲ್ಲಿ ಬಿದ್ದಿರುವ ಬಗ್ಗೆ ಮಾತನಾಡುವ ಶ್ರೀಜಯ್‌, "ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದೆ. ಚಿತ್ರದ ಬಾಕಿ ಉಳಿದ ದೃಶ್ಯಗಳ ಚಿತ್ರೀಕರಣವನ್ನು ಶಾಂತಿನಗರ ಸ್ಮಶಾನದಲ್ಲಿ ಚಿತ್ರೀಕರಿಸಲಾಗುತಿತ್ತು. ರಾಧಿಕಾ ಅವರು ಘೋರಿ ಮೇಲೆ ನಡೆದುಕೊಂಡು ಬರುವಾಗ ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಅವರ ಬೆನ್ನುಮೂಲೆಗೆ ಗಾಯವಾಗಿದೆ. ವೈದ್ಯರು ಒಂದು ತಿಂಗಳ ವಿಶ್ರಾಂತಿ ಸೂಚಿಸಿದ್ದಾರೆ' ಎನ್ನುತ್ತಾರೆ. 


Trending videos

Back to Top