CONNECT WITH US  

ಗಣೇಶ್‌ ಚಿತ್ರಕ್ಕೆ ಮುಹೂರ್ತ

ಸರಳವಾಗಿ ಸೆಟ್ಟೇರಿದ "ವೇರ್‌ ಈಸ್‌ ಮೈ ಕನ್ನಡಕ'

ನಟ ಗಣೇಶ್‌ "ಗೀತಾ', "ಗಿಮಿಕ್‌' ಮತ್ತು "99' ಚಿತ್ರದ ಬಳಿಕ "ವೇರ್‌ ಇಸ್‌ ಮೈ ಕನ್ನಡಕ' ಎಂಬ ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯನ್ನು ಇದೇ ಬಾಲ್ಕನಿಯಲ್ಲಿ ಓದಿರುತ್ತೀರಿ. ಇದೀಗ ಹೊಸ ವಿಷಯ ಏನಪ್ಪ ಅಂದರೆ "ವೇರ್‌ ಇಸ್‌ ಮೈ ಕನ್ನಡಕ' ಚಿತ್ರ ಇತ್ತೀಚೆಗೆ ಸರಳವಾಗಿ ಮುಹೂರ್ತವನ್ನು ಆಚರಿಸಿಕೊಂಡು ಶೂಟಿಂಗ್‌ಗೆ ಅಣಿಯಾಗಿದೆ.

ಹೌದು, "ವೇರ್‌ ಈಸ್‌ ಮೈ ಕನ್ನಡಕ' ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಗರದ ಮಹಾಲಕ್ಷ್ಮೀ ಲೇಔಟ್‌ನ ಪಂಚಮುಖೀ ಆಂಜನೇಯ ದೇವಸ್ಥಾನದಲ್ಲಿ ನೆರವೇರಿತು. ಹಿಂದಿ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಾಕಷ್ಟು ಅನುಭವವಿರುವ ರಾಜ್‌ ಹಾಗು ಧಾಮಿನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಗಣೇಶ್‌ ಅವರಿಗೆ ನಾಯಕಿಯಾಗಿ ಪತ್ರಲೇಖಾ ಪೌಲ್‌ ಅಭಿನಯಿಸುತ್ತಿದ್ದಾರೆ.

"ವೇರ್‌ ಈಸ್‌ ಮೈ ಕನ್ನಡಕ' ಚಿತ್ರದ ಮೂಲಕ ಬಾಲಿವುಡ್‌ ನಟ ಅರ್ಬಾಜ್‌ ಖಾನ್‌ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಉಳಿದಂತೆ ಕನ್ನಡ ಮತ್ತು ಹಿಂದಿಯ ಅನೇಕ ಕಲಾವಿದರ ತಾರಾಗಣ ಚಿತ್ರದಲ್ಲಿರಲಿದ್ದಾರೆ. ಸದ್ಯ "ವೇರ್‌ ಈಸ್‌ ಮೈ ಕನ್ನಡಕ' ಚಿತ್ರದ ಮುಹೂರ್ತ ನಡೆದಿದ್ದರೂ, ಚಿತ್ರದ ಚಿತ್ರೀಕರಣ ಮುಂಬರುವ ಏಪ್ರಿಲ್‌ನಿಂದ ಆರಂಭವಾಗಲಿದ್ದು, ಕರ್ನಾಟಕದ ಕೆಲವು ಸ್ಥಳಗಳು ಮತ್ತು ಲಂಡನ್‌ನಲ್ಲಿ ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಚಿಸಿದೆ.

ಅಂದಹಾಗೆ, "ವೇರ್‌ ಈಸ್‌ ಮೈ ಕನ್ನಡಕ' ಪಕ್ಕಾ ಆ್ಯಕ್ಷನ್‌, ಕಾಮಿಡಿ ಚಿತ್ರವಾಗಿದ್ದು, ಕನ್ನಡ ಸಿನಿಪ್ರಿಯರಿಗೆ ಇದೊಂದು ಹೊಸ ಅನುಭವ ನೀಡುವ ಚಿತ್ರವಾಗಲಿದೆ ಎನ್ನುವ ಭರವಸೆ ಚಿತ್ರತಂಡದ್ದು. ಚಿತ್ರತಂಡದ ಯೋಜನೆಯಂತೆ ಎಲ್ಲವೂ ನಡೆದರೆ, ಇದೇ ವರ್ಷದ ನವೆಂಬರ್‌ನಲ್ಲಿ "ವೇರ್‌ ಇಸ್‌ ಮೈ ಕನ್ನಡಕ' ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಉದ್ದೇಶ ಚಿತ್ರತಂಡಕ್ಕಿದೆ. 


Trending videos

Back to Top