CONNECT WITH US  

ಗೆಲ್ಲುವ ನಿರೀಕ್ಷೆಯಲ್ಲಿ ಕೃತಿಕಾ

ಮೊದಲ ಕಮರ್ಷಿಯಲ್‌ ಸಿನಿಮಾ ತೆರೆಗೆ ಸಿದ್ಧ

ನಟಿ ಕೃತಿಕಾ ಈಗ ಖುಷಿಯಲ್ಲಿದ್ದಾರೆ. ಅವರ ಖುಷಿಗೆ ಕಾರಣ "ಯಾರಿಗೆ ಯಾರುಂಟು'. ಹೌದು, ಇದೇ ಮೊದಲ ಸಲ ಅವರು ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಪಾತ್ರ ಕೂಡ ತೂಕ ಹೆಚ್ಚಿಸಿದ್ದು, ಎಲ್ಲರೂ ಹೊಸ ಕೃತಿಕಾಳನ್ನಿಲ್ಲಿ ಕಾಣಬಹುದು ಎಂಬ ಸಂತಸ ಅವರದು. ಅಂದಹಾಗೆ, ಇದೇ ಮೊದಲ ಬಾರಿಗೆ ಕೃತಿಕಾ ಪಕ್ಕಾ ಕಮರ್ಷಿಯಲ್‌ ಚಿತ್ರದಲ್ಲಿ ನಟಿಸಿದ್ದಾರೆ.

ಅದರಲ್ಲೂ ಕಥೆ ಎಲ್ಲಾ ವರ್ಗಕ್ಕೂ ಇಷ್ಟವಾಗುವಂತಿದ್ದರಿಂದಲೇ ಅವರು, ಚಿತ್ರದಲ್ಲಿ ಚಾಲೆಂಜಿಂಗ್‌ ಆಗಿರುವ ಪಾತ್ರವನ್ನು ಎಂಜಾಯ್‌ ಮಾಡಿಕೊಂಡೇ ನಿರ್ವಹಿಸಿದ್ದಾರಂತೆ. ಇನ್ನೊಂದು ವಿಷಯವನ್ನು ಹೆಮ್ಮೆಯಿಂದ ಹೇಳಿಕೊಳ್ಳುವ ಕೃತಿಕಾ, "ಯಾರಿಗೆ ಯಾರುಂಟು' ಚಿತ್ರ ಜನರಿಗೆ ಎಷ್ಟರಮಟ್ಟಿಗೆ ನಿರೀಕ್ಷೆ ಹೆಚ್ಚಿಸಿದೆಯೋ ಗೊತ್ತಿಲ್ಲ, ಆದರೆ, ನನಗಂತೂ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಮೊದಲ ಸಲ, ಸಿನಿಮಾದೊಳಗಿನ ಸಿನಿಮಾ ಸೆಲೆಬ್ರಿಟಿಯಾಗಿ ನಟಿಸಿದ್ದು, ಆ ಪಾತ್ರದಲ್ಲಿ ನಾನು ಹೇಗೆ ಕಾಣಿಸುತ್ತೇನೆ ಎಂದು ನೋಡುವ ಕಾತುರ ಇದೆ' ಎಂಬುದು ಕೃತಿಕಾ ಮಾತು. "ಪಟ್ರೆ ಲವ್ಸ್‌ ಪದ್ಮ' ಚಿತ್ರದ ಬಳಿಕ ಕಿರುತೆರೆಗೆ ಎಂಟ್ರಿಕೊಟ್ಟಿದ್ದ ಕೃತಿಕಾ, ಅಲ್ಲಿ ಮಿಂಚಿ, ಸಿನಿಮಾಗೆ ಬರಬೇಕು ಅಂತ ಒಳ್ಳೆಯ ಕಥೆಗಳನ್ನು ಎದುರು ನೋಡುತ್ತಿದ್ದರು. ಸಿಕ್ಕ ಎರಡು ಚಿತ್ರಗಳಲ್ಲೂ ನಟಿಸಿದರು. ಸದ್ಯಕ್ಕೆ "ಕೆಂಗುಲಾಬಿ' ಮತ್ತು "ಶಾದೂಲ' ಬಿಡುಗಡೆಯಾಗಬೇಕಿದೆ.

"ಯಾರಿಗೆ ಯಾರುಂಟು' ಚಿತ್ರ ಫೆ.22 ರಂದು ಬಿಡುಗಡೆ ಕಾಣುತ್ತಿದೆ. ನಿರ್ದೇಶಕ ಕಿರಣ್‌ ಗೋವಿ ಅವರು ಕಥೆ ಹೇಳಿದ್ದನ್ನು ಕೇಳಿದ ಕೃತಿಕಾ, ಕಥೆಯಲ್ಲಿ ಸಾಕಷ್ಟು ವಿಶೇಷತೆಗಳಿವೆ ಎಂಬುದನ್ನು ಅರಿತು ಒಪ್ಪಿಕೊಂಡಿದ್ದಾರೆ. ಹಾಗಾಗಿ ಈ ಚಿತ್ರ ಅವರೇ ಅವರನ್ನು ಜಡ್ಜ್ ಮಾಡಿಕೊಳ್ಳುವಂತಹ ಚಿತ್ರ ಎಂಬುದು ಅವರ ಮಾತು. ಅಂದಹಾಗೆ, ಕೃತಿಕಾ ಅವರಿಲ್ಲಿ ಪಕ್ಕಾ ಗ್ಲಾಮರ್‌ ಆಗಿ ಕಾಣಿಸಿಕೊಂಡಿರುವುದಲ್ಲದೆ, ಯಾರನ್ನೂ ಹತ್ತಿರ ಬಿಟ್ಟುಕೊಳ್ಳದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಅವರನ್ನು ಯಾರಾದರೂ ಕೆಣಕಿದರೆ, ಅವರು ತಮ್ಮ ವ್ಯಕ್ತಿತ್ವವನ್ನೇ ಬದಲಿಸಿಕೊಂಡು ತೆರೆಯ ಮೇಲೆ ಹೊಸ ರೂಪ ಪಡೆದುಕೊಳ್ಳವ ಚಾಲೆಂಜ್‌ ಪಾತ್ರವಂತೆ. ಇಲ್ಲಿ ಮೂರ್‍ನಾಲ್ಕು ಶೇಡ್‌ ಇರುವ ಪಾತ್ರ ಆಗಿದ್ದರಿಂದ ಸಾಕಷ್ಟು ಚರ್ಚಿಸಿ, ಕೆಲಸ ಮಾಡಿದ್ದೇನೆ. ಎರಡು ತಾಸು ಅರಾಮವಾಗಿ ಕುಳಿತು ಎಂಜಾಯ್‌ ಮಾಡಿಕೊಂಡು ನೋಡುವಂತಹ ಚಿತ್ರವಿದು. ಒಂದು ಮಾತಂತೂ ನಿಜ.

ಸಿನಿಮಾ ನೋಡಿ ಹೊರಬಂದವರಿಗೆ ಮೈಂಡ್‌ ರಿಫ್ರೆಶ್‌ ಆಗುವ ಗ್ಯಾರಂಟಿ ಕೊಡುತ್ತಾರೆ. ಮೂವರು ನಾಯಕಿಯರ ಪೈಕಿ ಕೃತಿಕಾ ಕೂಡ ಒಬ್ಬರಾಗಿದ್ದು, ಒಂದು ಆರೋಗ್ಯಧಾಮದಲ್ಲಿ ನಡೆಯುವಂತಹ ಅಪರೂಪದ ಕಥೆ ಚಿತ್ರದ ಹೈಲೈಟ್‌. ಸಾಮಾನ್ಯವಾಗಿ ಆಸ್ಪತ್ರೆ ಅಂದರೆ ಒಂದು ರೀತಿಯ ಭಯ, ಗೊಂದಲ, ಟೆನ್ಷನ್‌ ಕಾಮನ್‌. ಆದರೆ, ಇಲ್ಲಿ ಆರೋಗ್ಯಧಾಮದಲ್ಲೇ ಕಥೆ ಸಾಗುವುದರಿಂದ ಸಂಪೂರ್ಣ ಮನರಂಜನೆಯಲ್ಲೇ ಸಾಗುತ್ತದೆ ಎಂಬುದು ಅವರ ಮಾತು.


Trending videos

Back to Top