CONNECT WITH US  

ದರ್ಶನ್‌ ಬರ್ತ್‌ಡೇಗೆ "ಡಿ 55' ಅನೌನ್ಸ್‌...!

ಮೆಜೆಸ್ಟಿಕ್‌ ನಿರ್ಮಾಪಕರ ಮತ್ತೊಂದು ಬಿಗ್‌ ಬಜೆಟ್‌ ಚಿತ್ರ

ನಟ ದರ್ಶನ್‌ ಅವರ ಕೈಯಲ್ಲೀಗ ಸಾಲು ಸಾಲು ಚಿತ್ರಗಳಿವೆ. ಬಿಡುವಿಲ್ಲದಂತೆ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಒಂದು ಕಡೆ "ಒಡೆಯ', ಮತ್ತೂಂದು ಕಡೆ "ರಾಬರ್ಟ್‌', ಇನ್ನೊಂದು ಕಡೆ "ಗಂಡುಗಲಿ ಮದಕರಿ ನಾಯಕ' ಚಿತ್ರಗಳಿವೆ. ಈ ಮಧ್ಯೆ ಮಾ.1 ರಂದು "ಯಜಮಾನ' ಬಿಡುಗಡೆಯಾಗುತ್ತಿದೆ. ಇನ್ನು, ಫೆಬ್ರವರಿ 16 ರಂದು ದರ್ಶನ್‌ ಅವರ ಹುಟ್ಟುಹಬ್ಬ. ಅಂದು ಅಭಿಮಾನಿಗಳಿಗೆ ದರ್ಶನ್‌ ಹೊಸ ಗಿಫ್ಟ್ ಕೊಡಲಿದ್ದಾರೆ. ಹೌದು, ದರ್ಶನ್‌ ಹುಟ್ಟು ಹಬ್ಬದಂದು ಹೊಸ ಚಿತ್ರದ ಫ‌ಸ್ಟ್‌ಲುಕ್‌ ಬರುತ್ತಿದೆ.

ಎಲ್ಲಾ ಸರಿ, ದರ್ಶನ್‌ ಅವರ ಮುಂದಿನ ಚಿತ್ರ ಯಾವುದು ಎಂಬ ಕುತೂಹಲದ ಪ್ರಶ್ನೆಗೆ ಉತ್ತರ "ಡಿ 55'. ಹೌದು, ದರ್ಶನ್‌ಗಾಗಿ ನಿರ್ಮಾಪಕ ಎಂ.ಜಿ.ರಾಮಮೂರ್ತಿ ಅವರು ಹೊಸದೊಂದು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅದಕ್ಕೆ ಈಗಾಗಲೇ ಜೋರು ತಯಾರಿ ನಡೆಸಿರುವ ನಿರ್ಮಾಪಕರು, "ಡಿ 55' ಫ‌ಸ್ಟ್‌ಲುಕ್‌ ಬಿಡುಗಡೆ ಮಾಡುವ ಮೂಲಕ ದರ್ಶನ್‌ ಬರ್ತ್‌ಡೇಗೆ ಅವರ ಅಭಿಮಾನಿಗಳ ಮೊಗದಲ್ಲಿ ಮಂದಹಾಸದ ಗೆರೆ ಮೂಡಿಸಲು ಸಜ್ಜಾಗುತ್ತಿದ್ದಾರೆ.

ಈ ಹಿಂದೆ ದರ್ಶನ್‌ ಅವರಿಗೆ "ಮೆಜೆಸ್ಟಿಕ್‌' ಚಿತ್ರ ನಿರ್ಮಿಸಿದ್ದ ಎಂ.ಜಿ.ರಾಮಮೂರ್ತಿ, "ಧರ್ಮ' ಚಿತ್ರವನ್ನೂ ನಿರ್ಮಿಸಿದ್ದರು. ಅದಾದ ಬಳಿಕ ಮಾಡುತ್ತಿರುವ ಮೂರನೇ ಚಿತ್ರವಿದು. ಹದಿನೈದು ವರ್ಷಗಳ ದೊಡ್ಡ ಗ್ಯಾಪ್‌ ಬಳಿಕ ಸಕ್ಸಸ್‌ ಜೋಡಿ ಮತ್ತೆ ಒಂದಾಗಿ "ಡಿ 55' ಚಿತ್ರ ಮಾಡುತ್ತಿದೆ ಎಂಬುದು ಈ ಹೊತ್ತಿನ ವಿಶೇಷ. ಎಲ್ಲವೂ ಸರಿ, ಈ "ಡಿ 55' ಅಂದರೇನು? ಎಲ್ಲರಿಗೂ "ಡಿ 55' ಅಂದರೆ ದರ್ಶನ್‌ ಅವರ 55 ನೇ ಸಿನಿಮಾದ ಹೆಸರು ಎಂಬ ಪ್ರಶ್ನೆ ಇದೆ.

ಆ ಕುತೂಹಲ ಇಲ್ಲಿಯವರೆಗೆ ಹಾಗೆಯೇ ಇರುವುದು ನಿಜ. ಆದರೆ, ದರ್ಶನ್‌ ಅವರ ಹೊಸ ಚಿತ್ರಕ್ಕೆ "ಡಿ 55' ಎಂಬ ಶೀರ್ಷಿಕೆಯೇ ಅಂತಿಮವಾಗುತ್ತಾ? ಗೊತ್ತಿಲ್ಲ. ಆದರೆ, ನಿರ್ಮಾಣ ಮಾಡಲಿರುವ ಎಂ.ಜಿ.ರಾಮಮೂರ್ತಿ ಅವರು ಸದ್ಯಕ್ಕೆ ದರ್ಶನ್‌ ಅವರಿಗೆ ಚಿತ್ರ ನಿರ್ಮಿಸಲು ತಯಾರಾಗಿದ್ದು, ಅದೊಂದು ಬಿಗ್‌ಬಜೆಟ್‌ ಚಿತ್ರ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸದ್ಯ ಕೈಯಲ್ಲಿರುವ ಚಿತ್ರಗಳ ಜೊತೆಗೆ "ಡಿ 55' ಚಿತ್ರ ಶುರುವಾದರೂ ಅಚ್ಚರಿ ಇಲ್ಲ. "ಡಿ 55' ಅನ್ನುವುದೇ ಅಷ್ಟೊಂದು ಪವರ್‌ಫ‌ುಲ್‌ ಆಗಿರುವಾಗ, ಇನ್ನು ಕಥೆ ಹೇಗಿರುತ್ತೆ ಎಂಬ ಪ್ರಶ್ನೆ ಕೂಡ ಬರುತ್ತದೆ. ಆದರೆ, ಆ ಚಿತ್ರದ ಕಥೆ ಏನು, ನಿರ್ದೇಶಕರು ಯಾರು, ಯಾರೆಲ್ಲಾ ಕಲಾವಿದರು ಇರುತ್ತಾರೆ, ತಾಂತ್ರಿಕ ವರ್ಗದಲ್ಲಿ ಯಾರೆಲ್ಲಾ ಕೆಲಸ ಮಾಡುತ್ತಾರೆ ಎಂಬುದಕ್ಕೆ "ಡಿ 55' ಸೆಟ್ಟೇರುವವರೆಗೂ ಕಾಯಬೇಕು.

ದರ್ಶನ್‌ ಅವರಿಗೆ "ಮೆಜೆಸ್ಟಿಕ್‌' ದೊಡ್ಡ ಯಶಸ್ಸು ತಂದುಕೊಟ್ಟಿದ್ದು ನಿಜ. ಆ ಚಿತ್ರ ನಿರ್ಮಿಸಿದ್ದ ಎಂ.ಜಿ.ರಾಮಮೂರ್ತಿ ಅವರಿಗೂ ದರ್ಶನ್‌ ಜೊತೆ ಕೆಲಸ ಮಾಡಬೇಕು ಎಂಬ ಆಸೆ ಇತ್ತಾದರೂ, ಅದು ಕಳೆದ ಒಂದುವರೆ ದಶಕಗಳ ಕಾಲ ಆಗಿರಲಿಲ್ಲ. ಈಗ ಅದಕ್ಕೊಂದು ಒಳ್ಳೆಯ ಸಮಯ ಬರುತ್ತಿದೆ. ಈ ಹಿಂದೆ ಎಂ.ಜಿ.ರಾಮಮೂರ್ತಿ ಅವರು ದರ್ಶನ್‌ ಅವರಿಗಾಗಿಯೇ "ಮದಗಜ' ಎಂಬ ಶೀರ್ಷಿಕೆ ನೋಂದಣಿ ಮಾಡಿಸಿ, ಚಿತ್ರ ನಿರ್ಮಿಸಲು ರೆಡಿಯಾಗಿದ್ದರು. ಆದರೆ, ದರ್ಶನ್‌ ಅವರೇ ಸ್ವತಃ ಆ ಶೀರ್ಷಿಕೆಯನ್ನು ಶ್ರೀಮುರಳಿ ಚಿತ್ರಕ್ಕೆ ಬಿಟ್ಟುಕೊಡುವ ಮೂಲಕ ಪ್ರೀತಿ ತೋರಿದ್ದರು.

ನಿರ್ಮಾಪಕರು ದರ್ಶನ್‌ ಜೊತೆಗೆ ಸಿನಿಮಾ ಮಾಡಬೇಕು ಅಂತ ಇಷ್ಟು ವರ್ಷ ಕಾದಿದ್ದರು. ದರ್ಶನ್‌ ಬಿಜಿಯಿದ್ದ ಕಾರಣ, ಅದು ಸಾಧ್ಯವಾಗಿರಲಿಲ್ಲ. ಈಗ 'ಡಿ 55' ಮೂಲಕ ಈಡೇರುತ್ತಿದೆ ಎನ್ನಲಾಗಿದ್ದು, ದರ್ಶನ್‌ ಅವರ ಬರ್ತ್‌ಡೇ ದಿನ "ಡಿ 55' ಫ‌ಸ್ಟ್‌ಲುಕ್‌ನ ಝಲಕ್‌ ಕಾಣಲಿದೆ. ಅದು ಅಭಿಮಾನಿಗಳ ಪಾಲಿಗೆ ಮತ್ತೂಂದು ಸಂತಸದ ವಿಷಯವಂತೂ ಹೌದು. ಅಂದಹಾಗೆ, "ಡಿ.55' ದರ್ಶನ್‌ ಅವರ 55 ನೇ ಸಿನಿಮಾ. ಆದರೆ, ಇದೇ ಆ ಚಿತ್ರದ ಶೀರ್ಷಿಕೆ ಎಂಬುದಕ್ಕಿನ್ನೂ ಉತ್ತರ ಸಿಕ್ಕಿಲ್ಲ.


Trending videos

Back to Top