CONNECT WITH US  

ಇನ್ನು ಕಿದ್ವಾಯಿ ಆಸ್ಪತ್ರೆಯಲ್ಲೇ ಇಸಿಜಿ

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಕ್ಯಾನ್ಸರ್‌ ಆಸ್ಪತ್ರೆಯಾದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಶಸ್ತ್ರಚಿಕಿತ್ಸೆ ಮತ್ತು ಕಿಮೋಥೆರಪಿಗೆ ಒಳಗಾಗುವ ಕ್ಯಾನ್ಸರ್‌ ರೋಗಿಗಳು ಇನ್ನು ಮುಂದೆ ಹೃದಯ ತಪಾಸಣೆಗಾಗಿ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಅಲೆದಾಡುವ ಅಗತ್ಯ ಇಲ್ಲ.

ಹೌದು. ಇಷ್ಟು ವರ್ಷ ಇದ್ದ ಅಲೆದಾಟಕ್ಕೆ ಇತಿಶ್ರೀ ಹೇಳಲಾಗಿದ್ದು, ಹೃದಯ ತಪಾಸಣೆ ನಡೆಸುವ ಎಕೋಕಾರ್ಡಿಯೋಗ್ರಾಮ್‌ (ಇಸಿಜಿ) ಯಂತ್ರವನ್ನು
ಕಿದ್ವಾಯಿ ಆಸ್ಪತ್ರೆಯಲ್ಲಿಯೇ ಅಳವಡಿಸಲಾಗಿದೆ. ಇದರಿಂದಾಗಿ ಕಿದ್ವಾಯಿ ಆಸ್ಪತ್ರೆಯಲ್ಲೇ ಹೃದಯ ತಪಾಸಣೆ ನಡೆಸುವ ಕಾರ್ಯ ಆರಂಭಗೊಂಡಿದ್ದು,
ರಾಜ್ಯದ ವಿವಿಧೆಡೆಯಿಂದ ಆಗಮಿಸುವ ರೋಗಿಗಳಿಗೆ ಸಾಕಷ್ಟು ಪ್ರಯೋಜನವಾಗಿದೆ.

ಕ್ಯಾನ್ಸರ್‌ ಕಾಯಿಲೆಗೆ ತುತ್ತಾಗಿರುವವರಿಗೆ ಶಸ್ತ್ರಚಿಕಿತ್ಸೆ ನಡೆಸಬೇಕಾದರೆ ಅಥವಾ ಕಿಮೋಥೆರಪಿ  ನೀಡಬೇಕಾದರೆ ಕಡ್ಡಾಯವಾಗಿ ಹೃದಯ
ತಪಾಸಣೆ ಮಾಡಬೇಕು. ಇದುವರೆಗೆ ಈ ಚಿಕಿತ್ಸೆಗಳನ್ನು ನೀಡುವ ಮುನ್ನ ಹೃದಯ ತಪಾಸಣೆ ಮಾಡಲು ರೋಗಿಗಗಳನ್ನು ಜಯದೇವ ಆಸ್ಪತ್ರೆಗೆ
ಕಳುಹಿಸಿಕೊಡಲಾಗುತ್ತಿತ್ತು. ಪ್ರತಿನಿತ್ಯ ಕನಿಷ್ಠ 20 ರೋಗಿ‌ಗಳು ಜಯದೇವ ಆಸ್ಪತ್ರೆಗೆ ಹೋಗಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದರು.  ಅಲ್ಲದೆ, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆ ದಾಟ ನಡೆಸುವ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸುತ್ತಿದ್ದರು. ಕಿದ್ವಾಯಿ ಆಸ್ಪತ್ರೆಗೆ ಬಹುತೇಕ ಆರ್ಥಿಕವಾಗಿ ಹಿಂದುಳಿ ದವರು, ಮಧ್ಯಮ ವರ್ಗದವರೇ ಹೆಚ್ಚಾಗಿ ಬರುತ್ತಿರು ವುದರಿಂದ ಅವರ ಪಾಲಿಗೆ ಹೃದಯ ತಪಾಸಣೆ ನಡೆಸುವುದು ಆರ್ಥಿಕವಾಗಿ ವೆಚ್ಚದಾಯಕ ವಾಗುತ್ತಿತ್ತು. ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುವ ಉದ್ದೇಶದಿಂದ ಕಿದ್ವಾಯಿ ಆಸ್ಪತ್ರೆಯಲ್ಲೇ ಎಕೋಕಾರ್ಡಿಯೋಗ್ರಾಮ್‌ ಯಂತ್ರ ಅಳವಡಿಸಲಾಗಿದೆ. ಜತೆಗೆ ಅದಕ್ಕೆ ಬೇಕಾದ ವೈದ್ಯರನ್ನೂ ನೇಮಿಸಲಾಗಿದೆ. ಇದರಿಂದ ರೋಗಿಗಳಿಗೆ ಅನುಕೂಲವಾಗಿದ್ದು, ಕಿದ್ವಾಯಿ ಆಸ್ಪತ್ರೆಯಲ್ಲೇ ಹೃದಯ ತಪಾಸಣೆ ನಡೆಸುವ ಮೂಲಕ ರೋಗಿಗಳ ಹಣ ಉಳಿಕೆಯ ಜತೆಗೆ ಸಮಯವೂ ಉಳಿತಾಯ ಮಾಡಿದಂತಾಗಿದೆ ಎಂದು ರೋಗಿಗಳ ಸಂಬಂಧಿಕರು ಸಂತಸ ವ್ಯಕ್ತಪಡಿಸಿದ್ದಾರೆ. 

ಕಳೆದ ವಾರದಿಂದಲೇ ಕಾರ್ಯಾಚರಣೆ: ಫೆಬ್ರವರಿ ತಿಂಗಳಲ್ಲಿ ಈ ಯಂತ್ರವನ್ನು ಅಳವಡಿಸಲಾಗಿದ್ದು, ಮಾ. 14ರಿಂದಲೇ ಯಂತ್ರಗಳ ಕಾರ್ಯಾಚರಣೆ
ಆರಂಭಿಸಲಾಗಿದೆ. ಜಯದೇವ ಆಸ್ಪತ್ರೆಯ ಒಬ್ಬ ಹೃದಯ ತಜ್ಞ ಮತ್ತು ಒಬ್ಬ ಟೆಕ್ನೀಷಿಯನ್‌ ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿ ಹೃದಯ ತಪಾಸಣೆ 
ಮಾಡುತ್ತಿದ್ದಾರೆ. ಶಸ್ತ್ರಚಿಕಿತ್ಸೆ ಮತ್ತು ಕಿಮೋಥೆರಪಿಗೆ ಒಳಗಾಗುವ ಕ್ಯಾನ್ಸರ್‌ ರೋಗಿಗಳನ್ನು ಹೃದಯ ತಪಾಸಣೆ ನಡೆಸಿ ವರದಿ ನೀಡುತ್ತಿದ್ದಾರೆ.
ಈ ಕುರಿತು "ಉದಯವಾಣಿ'ಗೆ ಮಾಹಿತಿ ನೀಡಿದ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ ಡಾ.ಕೆ.ಬಿ. ಲಿಂಗೇಗೌಡ, ಶಸ್ತ್ರಚಿಕಿತ್ಸೆ ಮತ್ತು 
ಕಿಮೋಥೆರಪಿಗೊಳಗಾಗುವ ಕ್ಯಾನ್ಸರ್‌ ರೋಗಿಗಳನ್ನು ಹೃದಯ ಬಡಿತ ಮತ್ತು ಹೃದಯ ಸಮಸ್ಯೆಗಳಿರುವ ಬಗ್ಗೆ ಕಡ್ಡಾಯವಾಗಿ ತಪಾಸಣೆ ನಡೆಸಬೇಕಾಗುತ್ತದೆ. ಇಲ್ಲವಾದ್ದಲ್ಲಿ ರೋಗಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಿದರು. 

ಪ್ರತಿನಿತ್ಯ ಸುಮಾರು 20 ಮಂದಿ ಹೃದಯ ತಪಾಸಣೆ ನಡೆಸಬೇಕಾಗುತ್ತದೆ. ಪ್ರಸ್ತುತ ಜಯದೇವ ಆಸ್ಪತ್ರೆಯಿಂದ ಹೃದಯ ತಜ್ಞ ವೈದ್ಯರು ಮತ್ತು 
ಟೆಕ್ನಿಷಿಯನ್‌ ದಿನ ಬಿಟ್ಟು ದಿನ ಕಿದ್ವಾಯಿ ಆಸ್ಪತ್ರೆಗೆ ಬಂದು ತಪಾಸಣೆ ನಡೆಸುತ್ತಿದ್ದಾರೆ ಎಂದು ಹೇಳಿದರು. 

ದಿನಕ್ಕೆ ಅಂದಾಜು 20 ಮಂದಿಯ ಹೃದಯ ತಪಾಸಣೆ ನಡೆಸಬೇಕಿರುವ ಕಾರಣ ದಿನ ಬಿಟ್ಟು ದಿನ ಆಸ್ಪತ್ರೆಗೆ ಆಗಮಿಸುವ ವೈದ್ಯರು ಮತ್ತು ಟೆಕ್ನಿಷಿಯನ್‌ ಅವರನ್ನು ಪ್ರತಿನಿತ್ಯ ಕಳುಹಿಸಿಕೊಡುವಂತೆ ಜಯದೇವ ಆಸ್ಪತ್ರೆಯ ನಿರ್ದೇಶಕರಲ್ಲಿ ಮನವಿ ಮಾಡಲಾಗಿದೆ. ಪ್ರತಿನಿತ್ಯ ಕಳುಹಿಸಿಕೊಡಬೇಕಿರುವ ಕಾರಣ ಯಾವ ರೀತಿ ವ್ಯವಸ್ಥೆ ಮಾಡಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಬೇಕಿದೆ. 
ಪ್ರತಿನಿತ್ಯ ಹೃದ್ರೋಗ ತಜ್ಞ ವೈದ್ಯರು ಆಸ್ಪತ್ರೆಗೆ ಬರುವುದರಿಂದ ಸಾಕಾಷ್ಟು ಸಹಕಾರಿಯಾಗಲಿದೆ ಎಂದು ಅಭಿಪಾಯ ವ್ಯಕ್ತಪಡಿಸಿದ್ದಾರೆ. 

ಈ ಹಿಂದೆ ಹೃದಯ ತಪಾಸಣೆಗಾಗಿ ಜಯದೇವ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸಿ ಕೊಡಲಾಗುತ್ತಿತ್ತು. ಇದರಿಂದ ರೋಗಿಗಳು ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಇದನ್ನು ಮನಗಂಡು ಇದೀಗ ಆಸ್ಪತ್ರೆಯಲ್ಲಿಯೇ ಎಕೋಕಾರ್ಡಿಯೋಗ್ರಾಮ್‌ ಯಂತ್ರ ಅಳವಡಿಸಲಾಗಿದೆ.
ಡಾ.ಕೆ.ಬಿ. ಲಿಂಗೇಗೌಡ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ  

Trending videos

Back to Top