CONNECT WITH US  

ಬಿಎಂಟಿಸಿ ಬಸ್ಸಿನಲ್ಲಿ ಮೂರು ತಿಂಗಳ ಕಂದಮ್ಮ ಪತ್ತೆ

ಬೆಂಗಳೂರು: ಹೆಣ್ಣು ಮಗು ಎಂಬ ಕಾರಣಕ್ಕೆ ಮೂರು ತಿಂಗಳ ಶಿಶುವನ್ನು ಅದರ ಪೋಷಕರು ಬಿಎಂಟಿಸಿ ಬಸ್‌ನಲ್ಲಿ ಇಟ್ಟು ಹೋಗಿರುವ ಅಮಾನವೀಯ ಘಟನೆ ಭಾನುವಾರ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಡೆದಿದೆ.

ರಾತ್ರಿ ವೇಳೆ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನಿಲ್ಲಿಸಿದ್ದ ಬಸ್‌ನಲ್ಲಿ ಬೆಳಗಿನ ಜಾವ ಮಗುವನ್ನು ಇಟ್ಟು ಪೋಷಕರು ಹೋಗಿದ್ದಾರೆ. ಮಗುವಿನ ಪೋಷಕರ
ಪತ್ತೆಗೆ ಬಸ್‌ ನಿಲ್ದಾಣದ ಸಿಸಿಟೀವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾತ್ರಿ ಬಸ್‌ನಲ್ಲಿ ಚಾಲಕ ಮುನಿರಾಜು ಹಾಗೂ ನಿರ್ವಾಹಕರಿಬ್ಬರೂ ಮಲಗಿದ್ದರು. ಈ ಬಸ್‌ ಕೂಡ್ಲು  ಕಡೆ ಹೊರಡಬೇಕಿದ್ದು, ಅದರಂತೆಬೆಳಗ್ಗೆ 5.15 ರ ಸುಮಾರಿಗೆ ಚಾಲಕ 
ಮತ್ತು ನಿರ್ವಾಹಕರು ಹೊರಡಲು ಸಿದ್ಧವಾಗಿ ಕೈ-ಕಾಲು ತೊಳೆಯಲು ಇಳಿದು ಹೋಗಿದ್ದಾರೆ. ಅವರು ಮತ್ತೆ ಬರುವಷ್ಟರಲ್ಲಿ ಬಸ್‌ನ ಹಿಂದಿನ ಸೀಟ್‌ 
ಒಂದರಲ್ಲಿ ಮೂರು ತಿಂಗಳ ಮಗು ಇತ್ತು. ಆದರೆ, ಸುತ್ತಲೂ ಯಾರೂ ಕಾಣಿಸಲಿಲ್ಲ. ಈ ಬಗ್ಗೆ ಅಕ್ಕಪಕ್ಕದವರಲ್ಲಿ ವಿಚಾರಿಸಿದರೂ ಯಾವುದೇ ಮಾಹಿತಿ ಸಿಗಲಿಲ್ಲ. ಕೆಲವೇ ನಿಮಿಷಗಳ ಅಂತರದಲ್ಲಿ ಅಪರಿಚಿತರು ಬಸ್‌ನಲ್ಲಿ ಮಗು ಇಟ್ಟು ಹೋಗಿದ್ದರಿಂದ ಗಾಬರಿಯಾದ ಬಸ್‌ ಚಾಲಕ ಹಾಗೂ
ನಿರ್ವಾಹಕ, ಮಗುವಿನ ಪಾಲಕರ ಪತ್ತೆಗೆ ಮುಂದಾಗಿ ಬಸ್‌ ನಿಲ್ದಾಣದಲ್ಲಿದ್ದ ಎಲ್ಲರನ್ನೂ ವಿಚಾರಿಸಿದರಾದರೂ ಮಗುವಿನ ಪೋಷಕರ ಬಗ್ಗೆ ಮಾಹಿತಿ
ತಿಳಿಯಲಿಲ್ಲ. ಹೀಗಾಗಿ ಅವರು ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಈ ಬಗ್ಗೆ ದೂರು ದಾಖಲಿಸಿಕೊಂಡಿರುವ ಉಪ್ಪಾರಪೇಟೆ ಪೊಲೀಸರು, ಮೆಜಿಸ್ಟಿಕ್‌ನಲ್ಲಿ ಅಳವಡಿಸಲಾಗಿರುವ ಎಲ್ಲಾ ಸಿಸಿಟೀವಿಗಳ ದೃಶ್ಯಾವಳಿಯನ್ನು ಪರಿಶೀಲಿಸುತ್ತಿದ್ದು, ಮಗುವಿನ ಪಾಲಕರ ಪತ್ತೆಗೆ ಮುಂದಾಗಿದ್ದಾರೆ. ಸದ್ಯ ಮಗುವನ್ನು "ಬೋಸ್ಕೋ' ಎಂಬ ಸರ್ಕಾರೇತರ ಸಂಘಟನೆ ಪಡೆದುಕೊಂಡಿದ್ದು, ಮಗುವಿನ ನಿಜವಾದ ಪೋಷಕರು ಪತ್ತೆಯಾಗುವ ತನಕ ಪೋಷಣೆ ಮಾಡಲಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Trending videos

Back to Top