CONNECT WITH US  

ಹಿರಿಯ ನಾಗರಿಕರ ಬಿಸಿಯೂಟ ಪುನಾರಂಭ

ಬೆಂಗಳೂರು: ಪೌರಕಾರ್ಮಿಕರ ಜತೆಗೆ ಅಶಕ್ತ ಹಿರಿಯ ನಾಗರಿಕರಿಗೂ ಬಿಸಿಯೂಟ ನೀಡುವ ಕಾರ್ಯಕ್ರಮ ಪುನಾರಂಭಿಸಲು ಬಿಬಿಎಂಪಿ ಮುಂದಾಗಿದ್ದು, ಅದಕ್ಕಾಗಿ 3 ಕೋಟಿ ರೂ. ಮೀಸಲಿಡಲಾಗಿದೆ ಎಂದು ಮೇಯರ್‌ ಜಿ. ಪದ್ಮಾವತಿ ಹೇಳಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ನವೆಂಬರ್‌ ತಿಂಗಳಿಂದ ಬಿಸಿಯೂಟ ನೀಡಲು ಬಿಬಿಎಂಪಿ ನಿರ್ಧರಿಸಿದೆ.

ಪೌರಕಾರ್ಮಿಕರಿಗೆ ನೀಡುವ ಮಾದರಿಯಲ್ಲಿ ನಮಗೂ ಬಿಸಿಯೂಟ ನೀಡಬೇಕು ಎಂದು ನಾಲ್ಕು ದಿನಗಳ ಹಿಂದೆ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಹಿರಿಯ ನಾಗರಿಕರು ಪ್ರತಿಭಟನೆ ನಡೆಸಿದ್ದರು. ಹಿರಿಯ ನಾಗರೀಕರ ಪ್ರತಿಭಟನೆಗೆ ಸ್ಪಂದಿಸಿರುವ ಬಿಬಿಎಂಪಿ ನವೆಂಬರ್‌ ತಿಂಗಳ ಅಂತ್ಯದ ವೇಳೆಗೆ ಅಶಕ್ತ ಹಿರಿಯ ನಾಗರಿಕರಿಗೂ ಬಿಸಿಯೂಟ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದು, ಹಿರಿಯ ನಾಗರಿಕರನ್ನು ಆಯ್ಕೆ ಮಾಡುವುದು ಹೇಗೆ? ಹಾಗೂ ಅವರಿಗೆ ಬಿಸಿಯೂಟ ಹೇಗೆ ಪೂರೈಸಬಹುದು ಎಂಬುದನ್ನು ಪರಿಶೀಲಿಸುವಂತೆ ಅವರಿಗೆ ಸೂಚಿಸಲಾಗಿದೆ ಎಂದರು. ಹಿರಿಯ ನಾಗರಿಕರಿಗೆ ಬಿಸಿಯೂಟ ನೀಡಲೆಂದು ಈಗಾಗಲೆ 3 ಕೋಟಿ ರೂ. ಮೀಸಲಿರಿಸಲಾಗಿದೆ. ಅಲ್ಲದೆ, ಈ ಕುರಿತು ಬಿಸಿಯೂಟ ಪೂರೈಸುವ ಇಸ್ಕಾನ್‌ನ ಅಕ್ಷಯ ಪಾತ್ರ ಸಂಸ್ಥೆಯೊಂದಿಗೆ ಬಿಬಿಎಂಪಿ ಅಧಿಕಾರಿಗಳು ಚರ್ಚಿಸಿದ್ದಾರೆ.

ಸದ್ಯ 25ರಿಂದ 28 ಸಾವಿರ ಪೌರಕಾರ್ಮಿಕರಿಗೆ ಬಿಸಿಯೂಟ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ಅದರ ನಡುವೆ ಹಿರಿಯ ನಾಗರಿಕರಿಗೂ ಬಿಸಿಯೂಟ ಪೂರೈಸುವುದು ಕಷ್ಟ. ಹೀಗಾಗಿ ಎಲ್ಲಾ ಸಿದ್ಧತೆ ಮಾಡಿಕೊಂಡ ನಂತರ ಅವರಿಗೆ ಬಿಸಿಯೂಟ ಪೂರೈಸುವ ಕುರಿತು ನಿರ್ಧಾರಕ್ಕೆ ಬರುವುದಾಗಿ ಅಕ್ಷಯ ಪಾತ್ರ ಸಂಸ್ಥೆ ತಿಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎಂದು ತಿಳಿಸಿದರು.

198 ವಾರ್ಡ್‌ನಲ್ಲೂ ಚಾಲನೆ: ಬಿಬಿಎಂಪಿ ನಿರ್ಧರಿಸಿರುವಂತೆ ನ. 7ರಿಂದ ಪೌರಕಾರ್ಮಿಕರಿಗೆ ಬಿಸಿಯೂಟ ನೀಡುವ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಏಕಕಾಲಕ್ಕೆ 198 ವಾಡ್‌ಗಳಲ್ಲೂ ಬಿಸಿಯೂಟ ನೀಡುವುದಕ್ಕೆ ಚಾಲನೆ ನೀಡಲಾಗುತ್ತಿದ್ದು, ಪ್ರತಿ ವಾರ್ಡ್‌ನಲ್ಲಿಯೂ ಇರುವ ಎರಡರಿಂದ ಮೂರು ಮಸ್ಟರಿಂಗ್‌ ಕೇಂದ್ರದಲ್ಲಿ ಬೆಳಗ್ಗೆ 10 ಗಂಟೆಗೆ ಪೌರಕಾರ್ಮಿಕರಿಗೆ ಬಿಸಿಯೂಟ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಹಿರಿಯ ನಾಗರಿಕರ ಬೇಡಿಕೆಯಂತೆ ಬಿಸಿಯೂಟ ನೀಡುವ ಯೋಜನೆ ಜಾರಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಇದಕ್ಕಾಗಿಯೇ 3 ಕೋಟಿ ರೂ. ಮೀಸಲಿಟ್ಟಿದ್ದು, ನವೆಂಬರ್‌ ಅಂತ್ಯದಿಂದ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಉದ್ದೇಶಿಸಲಾಗಿದೆ. 
* ಜಿ. ಪದ್ಮಾವತಿ, ಬಿಬಿಎಂಪಿ ಮೇಯರ್‌ 

Trending videos

Back to Top