CONNECT WITH US  

"ಖಾಸಗಿ ಶಾಲೆಗೆ ಒಂದೇ ಶುಲ್ಕ ನಿಗದಿಪಡಿಸಿ'

ಬೆಂಗಳೂರು: ಖಾಸಗಿ ಶಾಲೆಗಳ ಪ್ರವೇಶ ಶುಲ್ಕ ಪರಿಷ್ಕರಣೆಗಾಗಿ ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಕರಡು ಪ್ರತಿಗೆ ಖಾಸಗಿ ಶಾಲೆಗಳಿಂದ ವ್ಯಾಪಕ ಆಕ್ಷೇಪಗಳು ವ್ಯಕ್ತವಾಗಿವೆ. ಪ್ರಮುಖವಾಗಿ ಗ್ರಾಮೀಣ, ತಾಲೂಕು, ನಗರ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯ ಶಾಲೆಗಳೆಂದು ವಿಭಾಗಿಸಿ, ನಾಲ್ಕು ಮಾದರಿಯ ಪ್ರತ್ಯೇಕ ಶುಲ್ಕ ಪರಿಷ್ಕರಿಸಿರುವುದಕ್ಕೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳು ಒಕ್ಕೊರಲ ಆಕ್ಷೇಪ ವಕ್ತಪಡಿಸಿದ್ದು, ಇಡೀ ರಾಜ್ಯದ ಎಲ್ಲ ಶಾಲೆಗಳಿಗೂ ಏಕರೂಪದ ಶುಲ್ಕ ನಿಗದಿ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಇನ್ನು ಕೆಲ ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳು ಸರ್ಕಾರಕ್ಕೆ ಶುಲ್ಕ ನಿಗದಿ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಧಿಕಾರವೇ ಇಲ್ಲ. ಈ ವಿಚಾರದಲ್ಲಿ ಖಾಸಗಿ ಶಾಲೆಗಳಿಗೇ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಸಂಘ (ಕ್ಯಾಮ್ಸ್‌) ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ "ಖಾಸಗಿ ಶಾಲಾ ಶುಲ್ಕ ನಿಗದಿ ಕರಡು ಪ್ರತಿ' ಕುರಿತ ಚರ್ಚಾ ಕಾರ್ಯಾಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯದ ಸಾವಿರಾರು ಖಾಸಗಿ ಶಾಲೆಗಳ ಪ್ರತಿನಿಧಿಗಳು ತಮ್ಮ ಆಕ್ಷೇಪ, ಅಭಿಪ್ರಾಯಗಳನ್ನು ಮಂಡಿಸಿದರು.

ಕ್ಯಾಮ್ಸ್‌ ಕಾರ್ಯದರ್ಶಿ ಡಿ. ಶಶಿಕುಮಾರ್‌ ಮಾತನಾಡಿ, ಪ್ರಾದೇಶಿಕವಾರು ಬೇರೆ ಬೇರೆ ಶಾಲೆಗಳಿಗೆ ಬೇರೆ ಬೇರೆ ರೀತಿಯ ಶುಲ್ಕ ನಿಗದಿ ಮಾಡಿರುವ ಸರ್ಕಾರದ ಕ್ರಮ ಅವೈಜ್ಞಾನಿಕ. ಗ್ರಾಮೀಣ ಭಾಗದ ಶಾಲೆಗಳಲ್ಲೂ ಶಿಕ್ಷಕರ ವೇತನ, ಮೂಲಸೌಕರ್ಯ ವೆಚ್ಚ ನಗರ ಭಾಗಗಳಿಗಿಂತ ಕಮ್ಮಿ ಇಲ್ಲ. ಇನ್ನು ಗ್ರಾಮೀಣ ಭಾಗಗಳಲ್ಲೂ ಭೂಮಿ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆ ಯಾಗಿದೆ. ಹಾಗಾಗಿ ಸರ್ಕಾರ ಕೂಡಲೇ ಶುಲ್ಕ ನಿಗದಿ ಕರಡು ಪ್ರತಿಯನ್ನು ಸಂಪೂರ್ಣವಾಗಿ ಪರಿಷ್ಕರಿಸಿ ಇಡೀ ರಾಜ್ಯದ ಶಾಲೆಗಳಿಗೆ ಒಂದೇ ರೀತಿಯ ಶುಲ್ಕ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ನ್ಯಾಯಾಲಯದ ಆದೇಶದ ಪ್ರಕಾರ ಖಾಸಗಿ ಶಾಲೆಗಳ ಪ್ರವೇಶ ಮತ್ತು ಶುಲ್ಕ ನಿಗದಿ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡುವಂತಿಲ್ಲ. ನಿರ್ವಹಣೆ ಮಾಡುವ ಹಕ್ಕು ಮಾತ್ರವಿದೆ. ಆದರೆ, ಶಾಲೆ ಆರಂಭಿಸುವಾಗ ಸರ್ಕಾರದ ಕಾಲಕಾಲದ ನಿಯಮಗಳಿಗೆ ಬದ್ಧರಾಗಿರುವುದಾಗಿ ಶಾಲೆಗಳು ಒಪ್ಪಿರುವುದರಿಂದ ಸರ್ಕಾರ ಪರಿಷ್ಕರಿಸುವ ಶುಲ್ಕವನ್ನು ಅನುಸರಿಸಬೇಕಾಗಿದೆ. ಆದರೆ, ಅವೈಜ್ಞಾನಿಕ ಶುಲ್ಕವನ್ನು ಒಪ್ಪಲು ಸಾಧ್ಯವಿಲ್ಲ ಎಂದರು.

ಶಾಲೆಗಳು ತಾವು ಮಾಡುತ್ತಿರುವ ಖರ್ಚುವೆಚ್ಚ, ವೇತನ, ವಿಶೇಷ ಸೌಲಭ್ಯಗಳಿಗಿಂತಲೂ ಮೀರಿ ಅವೈಜ್ಞಾನಿಕವಾಗಿ ಹಣ ವಸೂಲಿ ಮಾಡುತ್ತಿದ್ದರೆ ಆಡಿಟ್‌ ವರದಿ ಪರಿಶೀಲಿಸಿ ಕ್ರಮ ಕೈಗೊಳ್ಳಬಹುದು ಎಂದು ಒತ್ತಾಯಿಸಿದರು. ಬಳ್ಳಾರಿಯ ಸತ್ಯ ಪ್ರೌಢಶಾಲೆಯ ಮರಿಯಪ್ಪ ಮಾತನಾಡಿ, ಸರ್ಕಾರ ಗ್ರಾಮೀಣ ಭಾಗದ ಶಾಲೆಗಳಿಗೆ ಒಟ್ಟಾರೆ ಶಿಕ್ಷಕರ ವೇತನ ಮೊತ್ತ ಮತ್ತು ಅದರಲ್ಲಿ ಶೇ.50ರಷ್ಟು, ತಾಲೂಕು ಮಟ್ಟದಲ್ಲಿ ಶೇ.75ರಷ್ಟು ಮತ್ತು ನಗರ ಹಾಗೂ ಮಹಾನಗರ ವ್ಯಾಪ್ತಿಯ ಶಾಲೆಗಳಲ್ಲಿ ಶೇ.100ರಷ್ಟು ಮೊತ್ತವನ್ನು ನಿರ್ವಹಣಾ ವೆಚ್ಚ ಎಂದು ಪರಿಗಣಿಸಿದೆ.

ಹೀಗೆ ಬರುವ ಮೊತ್ತವನ್ನು ಶಾಲೆಯಲ್ಲಿ ದಾಖಲಾದ ಮಕ್ಕಳ ಸಂಖ್ಯೆಯಿಂದ ಭಾಗಿಸಿ ಬರುವ ಮೊತ್ತವನ್ನು ಮಾಸಿಕ ಶುಲ್ಕವಾಗಿ ಪಡೆಯಬೇಕೆಂದು ಹೇಳಿದೆ. ಇದು ಅವೈಜ್ಞಾನಿಕ. ನಗರ, ಗ್ರಾಮೀಣ ಭಾಗದ ಶಾಲೆಗಳಲ್ಲಿ ಕಲ್ಪಿಸುವ ಮೂಲಸೌಕರ್ಯಗಳಿಗೆ ಬೇರೆ ಬೇರೆ ರೀತಿಯ ಹಣ ತಗಲುವುದಿಲ್ಲ. 

ಗ್ರಾಮೀಣ ಭಾಗದಲ್ಲೂ ಶಿಕ್ಷಕರ ಕೊರತೆ ಇದೆ. ವೇತನವೂ ಸರಿಸಮನಾಗೇ ಇದೆ ಎಂದು ಹೇಳಿದರು. ಮಾಗಡಿ ರಸ್ತೆಯ ಶಾಸಿ ಸ್ಮಾರಕ ಶಾಲೆಯ ಸತ್ಯನಾರಾಯಣ ಅವರು ಮಾತನಾಡಿ, ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಬಾರದೆಂಬ ಕಾರಣಕ್ಕೆ ಸರ್ಕಾರ ಶುಲ್ಕ ಪರಿಷ್ಕರಣೆ ಮಾಡಿದೆ. ಖಾಸಗಿ ಶಾಲೆಗಳ ಶುಲ್ಕವನ್ನು ಸರ್ಕಾರ ನಿಗದಿಗೊಳಿಸಬಾರದು. ಮೇಲ್ನೋಟಕ್ಕೆ ಶುಲ್ಕ ಹೆಚ್ಚಳವಾಗಿದೆಯೇ ವಿನಾ ಬದಲಾವಣೆ ಏನೂ ಇಲ್ಲ ಎಂದರು. 


Trending videos

Back to Top