CONNECT WITH US  

ಬ್ಯಾಂಕುಗಳ ಮುಂದೆ ಕರಗದ "ಕ್ಯೂ'

ಬೆಂಗಳೂರು: ಸತತ ಎರಡೂ ರಜಾ ದಿನಗಳು ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳು ನಿರಂತರವಾಗಿ ಕಾರ್ಯ ನಿರ್ವಹಿಸಿದರೂ ನಗರದಲ್ಲಿ ಜನರಿಗೆ ಪರದಾಟ ತಪ್ಪಲಿಲ್ಲ. ಪರಿಣಾಮ ಚಿಲ್ಲರೆಗಾಗಿ ಚಡಪಡಿಸಿದರು. 

ರಜಾ ದಿನ, ಬಿಸಿಲು, ಚುಮುಚುಮು ಚಳಿ ಇದಾವುದನ್ನೂ ಲೆಕ್ಕಿಸದೆ ಜನ ಬೆಳಗ್ಗೆ ಎದ್ದ ತಕ್ಷಣ ಹತ್ತಿರದ ಬ್ಯಾಂಕ್‌ ಅಥವಾ ಅಂಚೆ ಕಚೇರಿಗಳತ್ತ ಮುಖಮಾಡಿದರು. ಹೀಗೆ ಗಂಟೆಗಟ್ಟಲೆ ನಿಂತ ಮೇಲೆ ಸಿಗುವ ಹೊಸ ನೋಟನ್ನು ಕಣ್ಣಿಗೊತ್ತಿಕೊಂಡು ಹೋಗುತ್ತಿರುವುದೂ ಕಂಡುಬಂತು. ಜನರ ಈ ಪಡಿಪಾಟಿಲನ್ನು ನೋಡಿ ಕರಗಿದ ಕೆಲ ಸ್ವಯಂ ಸೇವಾ ಸಂಘಟನೆಗಳು, ರಾಜಕೀಯ ನಾಯಕರು ನೆರವಿಗೆ ಧಾವಿಸಿದರು. 

ಶನಿವಾರದಂತೆಯೇ ಭಾನುವಾರ ಕೂಡ ಹಣ ವಿನಿಮಯ ಹಾಗೂ ಠೇವಣಿಗಾಗಿ ಜನದಟ್ಟಣೆ ಹೆಚ್ಚಿತ್ತು. ಬಹುತೇಕ ಎಟಿಎಂಗಳು ಸತತ ಐದನೇ ದಿನವೂ ಬಂದ್‌ ಆಗಿದ್ದವು. ಅಲ್ಲಲ್ಲಿ ಕಾರ್ಪೋರೇಷನ್‌, ಆ್ಯಕ್ಸಿಸ್‌, ವಿಜಯ, ಕರ್ಣಾಟಕ ಮತ್ತಿತರ ಬ್ಯಾಂಕ್‌ಗಳ ಅಲ್ಲೊಂದು ಇಲ್ಲೊಂದು ಎಟಿಎಂ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ, ಅಂತಹ ಕಡೆ ಹಣ ಪಡೆಯುವುದೇ ಸವಾಲಾಗಿತ್ತು. ಯಾಕೆಂದರೆ, ಅಲ್ಲಿ ಬೆಳೆಯುತ್ತಲೇ ಇದ್ದ "ಕ್ಯೂ'. ಮನೆ ಹತ್ತಿರ ಇದ್ದವರು ಪಾಳಿಯಲ್ಲಿ ಸಾಲಿನಲ್ಲಿ ಬಂದು ನಿಲ್ಲುತ್ತಿದ್ದುದು ಕಂಡುಬಂತು. 

ಕೆ.ಜಿ. ರಸ್ತೆಯಲ್ಲಿರುವ ಸ್ಟೇಟ್‌ ಬ್ಯಾಂಕ್‌ ಆಫ್ ಮೈಸೂರಿನ ಮುಂದೆ ಸಾಲುಗಟ್ಟಿ ನಿಂತಿದ್ದ ಗ್ರಾಹಕರಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಕಾರ್ಯಕರ್ತರೊಂದಿಗೆ ತೆರಳಿ ಬಿಸ್ಕತ್ತು, ನೀರು ಹಂಚಿದರು. ಪಾಲಿಕೆ ಸದಸ್ಯರು ಅಲ್ಲಲ್ಲಿ ತಮ್ಮ ವಾರ್ಡ್‌ಗಳ ವ್ಯಾಪ್ತಿಯಲ್ಲಿರುವ ಬ್ಯಾಂಕ್‌ಗಳ ಬಳಿ ನೆರೆದ ಜನರಿಗೆ ಅರ್ಜಿ ತುಂಬಿಕೊಡುವುದು, ನೀರು ಪೂರೈಸುವುದು ಸೇರಿದಂತೆ ವಿವಿಧ ರೂಪದಲ್ಲಿ ನೆರವಾದರು. 

ಕಳೆಗುಂದಿದ ವ್ಯಾಪಾರ:  "ದೊಡ್ಡ ನೋಟು'ಗಳ ನಿಷೇಧದ ಬಿಸಿ ನಗರದ ವಾರಾಂತ್ಯದ ವ್ಯಾಪಾರಕ್ಕೆ ತುಸು ಜೋರಾಗಿಯೇ ತಟ್ಟಿತು. ಸಾಮಾನ್ಯವಾಗಿ ಎಂ.ಜಿ. ರಸ್ತೆ, ಬ್ರಿಗೇಡ್‌ ರಸ್ತೆಗಳು ಶನಿವಾರ-ಭಾನುವಾರ ಕಳೆಗಟ್ಟುತ್ತಿತ್ತು. ವ್ಯಾಪಾರದಲ್ಲಿ ಜೋರಾಗುತ್ತದೆ. ಆದರೆ, ಈ ವಾರ ವ್ಯಾಪಾರಿಗಳಿಗೆ ನಿರಾಸೆ ಮೂಡಿಸಿತು. ಎಂ.ಜಿ. ರಸ್ತೆಯಲ್ಲಿ ಓಡಾಡುವ ಜನರಿಗೇನೂ ಬರ ಇಲ್ಲ. ಆದರೆ, ವ್ಯಾಪಾರದಲ್ಲಿ ಆ ಉತ್ಸಾಹ ಕಾಣುತ್ತಿಲ್ಲ. ಶೇ. 50ರಷ್ಟು ವ್ಯಾಪಾರ-ವಹಿವಾಟು ಕುಸಿದಿದೆ ಎಂದು ಬೆಂಗಳೂರು ಎಂ.ಜಿ. ರಸ್ತೆ ಟ್ರೇಡ್‌ ಅಸೋಸಿಯೇಷನ್‌ನ ಭೂಪಾಳಂ ಶ್ರೀನಾಥ್‌ ತಿಳಿಸುತ್ತಾರೆ. 

ನಮ್ಮ ಬಾಂಧವ ತಂಡ:  ಬೈರಸಂದ್ರ ವಾರ್ಡ್‌ನ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾದಲ್ಲಿ ನೋಟುಗಳ ಬದಲಾವಣಗೆ ಸರತಿ ಸಾಲಿನಲ್ಲಿ ಸಾರ್ವಜನಕರು ನಿಂತಿದ್ದಾಗ ಒಂದಿಷ್ಟು ನೂಕುನುಗ್ಗಲು ಉಂಟಾಯಿತು. ಈ ಸಂದರ್ಭದಲ್ಲಿ ಸ್ಥಳಕ್ಕೆ ತೆರಳಿದ "ನಮ್ಮ ಬಾಂಧವ' ತಂಡದ ಸದಸ್ಯರು, ತಾಳ್ಮೆಯಿಂದ ನಿಂತುಕೊಳ್ಳುವಂತೆ ಸಾರ್ವಜನರಿಕರಲ್ಲಿ ಮನವಿ ಮಾಡಿಕೊಂಡರು. ಜೊತೆಗೆ ನಮ್ಮ ಬಾಂಧವ ತಂಡದ ಸದಸ್ಯರು ಇಡೀ ದಿನ ಸ್ಥಳದಲ್ಲೇ ಇದ್ದು, ನೋಟುಗಳ ಬದಲಾವಣೆಗೆ ಬಂದ ಸಾರ್ವಜನಿಕರಿಗೆ ಅಗತ್ಯ ನೆರವು ನೀಡಿದರು.

"ಕ್ಯೂ'ನಲ್ಲಿ ಬೇರೊಬ್ಬರುಧಿ-ಜಟಾಪಟಿ: ಹಣ ಡ್ರಾ ಮಾಡಿಕೊಳ್ಳಲು ಎಟಿಎಂಗಳ ಎದುರು ಸರತಿ ಸಾಲು ಭಾನುವಾರವೂ ಇತ್ತು. ರಜಾ ದಿನ ಆಗಿದ್ದರಿಂದ ಕಳೆದ ಮೂರು ದಿನಗಳಿಗೆ ಹೋಲಿಕೆ ಮಾಡಿದರೆ ಭಾನುವಾರ ಎಲ್ಲ ಕಡೆ ಕ್ಯೂ ಸ್ವಲ್ಪ ಉದ್ದವಾಗಿಯೇ ಕಂಡು ಬಂದಿತು. ಹಲವು ಕಡೆ ಕ್ಯೂನಲ್ಲಿ ಬೇರೊಬ್ಬರನ್ನು ನಿಲ್ಲಿಸಿ ತಮ್ಮ ಸರದಿ ಬಂದಾಗ ಗ್ರಾಹಕರು ಕ್ಯೂನಲ್ಲಿ ಸೇರಿಕೊಳ್ಳುತ್ತಿದ್ದರು. ಈ ವಿಚಾರವಾಗಿ ಜಯನಗರ 4ನೇ "ಟಿ' ಬ್ಲಾಕ್‌ನ ಸಿಂಡಿಕೇಟ್‌ ಬ್ಯಾಂಕಿನ ಎಟಿಎಂ ಎದುರು ಸಾರ್ವಜನಿಕರ ನಡುವೆ ಜಟಾಪಟಿ ನಡೆಯಿತು. ಬ್ಯಾಂಕಿನ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ಹಳೆ ನೋಟಿಗೆ ನೋ ಎಂಟ್ರಿ!
"ಇಲ್ಲಿ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸುವುದಿಲ್ಲ'! -ಪೆಟ್ರೋಲ್‌ ಬಂಕ್‌ಗಳಲ್ಲಿ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟವಾಗಿ ಸೂಚಿಸಿದ್ದರೂ ನಗರದ ಕೆಲ ಬಂಕ್‌ಗಳಲ್ಲಿ ರದ್ದಾದ ನೋಟು ಸ್ವೀಕರಿಸುವುದಿಲ್ಲ ಎಂದು ಅಧಿಕೃತ ವಾಗಿಯೇ ಫ‌ಲಕಗಳನ್ನು ಹಾಕಿದ್ದಾರೆ. ಹರಿಶ್ಚಂದ್ರ ಘಾಟ್‌ ಎದುರಿನ ಬಂಕ್‌ ಇದಕ್ಕೊಂದು ಉದಾಹರಣೆ. ಅಲ್ಲಿ ನಿಷೇಧಿತ ನೋಟುಗಳನ್ನು ತೆಗೆದುಕೊಂಡು ಹೋಗುವ ಗ್ರಾಹಕರಿಗೆ ಪ್ರವೇಶವೇ ಇಲ್ಲ. ಮನೆಗೆ ಸಿಲಿಂಡರ್‌ ತರುವವರು ಕೂಡ 500ರ ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಇದಕ್ಕಾಗಿ ಗ್ಯಾಸ್‌ ಏಜೆನ್ಸಿಗಳೊಂದಿಗೆ ವಾಗ್ವಾದ ನಡೆಸು ವುದು ಸಾಮಾನ್ಯವಾಗಿದೆ.

"ಕ್ಯೂ' ನಿಲ್ಲಲೂ ಕಮಿಷನ್‌!
ಹಳೆಯ 500, 1000 ರೂ. ಮುಖಬೆಲೆಯ ನೋಟುಗಳನ್ನು ಬದಲಿಸಿಕೊಳ್ಳಲು ನೂರಕ್ಕೆ ಶೇ.10 ರಿಂದ 30 ರಷ್ಟು ಕಮಿಷನ್‌ ಪಡೆಯಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಕ್ಯೂನಲ್ಲಿ ನಿಲ್ಲಲೂ ಕಮಿಷನ್‌ ಪಡೆದುಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗಿವೆ. ಬನ್ನೇರುಘಟ್ಟ ರಸ್ತೆಯ ಕೆನರಾ ಬ್ಯಾಂಕ್‌ ಎಟಿಎಂ ಎದುರು ಇಂತಹದೊಂದು ಪ್ರಕರಣ ನಡೆದಿದೆ. ಖಾತದಾರರೊಬ್ಬರು ತಮ್ಮ ದಾಖಲೆಗಳೊಂದಿಗೆ ಬೆಳಗ್ಗೆ 7 ಗಂಟೆಯಿಂದ ಯುವಕನೊಬ್ಬನನ್ನು ಸರತಿ ಸಾಲಿನಲ್ಲಿ ನಿಲ್ಲಿಸಿದ್ದರು. ಸರತಿ ಸಾಲು ಉದ್ದ ಇದ್ದಿದ್ದರಿಂದ ಅವರ ಸರದಿ 8 ಗಂಟೆಗೆ ಬಂತು.

ಆಗ ಅಲ್ಲಿಗೆ ಬಂದ ಖಾತೆದಾರರು ಆ ಯುವಕನನ್ನು ಪಕ್ಕಕ್ಕೆ ಸರಿಸಿ ಆತನಿಗೆ 100 ರೂ. ಕೊಟ್ಟು ತಾವು ಹಣ ಡ್ರಾ ಮಾಡಿಕೊಳ್ಳಲು ಎಟಿಎಂ ಒಳಗೆ ಹೋದರು. ತಕ್ಷಣ ಏನು ನಡೆಯಿತು ಎಂದು ಅಲ್ಲಿದ್ದವರಿಗೆ ಗೊತ್ತಾಗಲಿಲ್ಲ. ಸತ್ಯ ಸಂಗತಿ ಅರಿತ ಕೆಲವರು ಕೈ-ಕೈ ಹಿಸುಕಿಕೊಂಡರು. ಆಗ ಎಚ್ಚೆತ್ತ ಎಟಿಎಂನ ಭದ್ರತಾ ಸಿಬ್ಬಂದಿ ಹಾಗೂ ಅಲ್ಲಿದ್ದ ಪೊಲೀಸ್‌ ಪೇದೆಯೊಬ್ಬರು ಕ್ಯೂನಲ್ಲಿ ನಿಂತವರು ಮೂಲ ಖಾತೆದಾರರೇ ಎಂದು ಪರಿಶೀಲಿಸ ತೊಡಗಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು "ಉದಯವಾಣಿ'ಗೆ ಮಾಹಿತಿ ನೀಡಿದರು.

Trending videos

Back to Top